ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಕುರಿತ ಪಾಲಕರ ಸಭೆಯಲ್ಲಿ ಶಿಕ್ಷಕ ನಿಂಗರಾಜ್ ಬಾಬಾಪುರ ಅಭಿಮತ
ಕಲಕೇರಿ: ವಿದ್ಯಾರ್ಥಿ ಜೀವನದಲ್ಲಿ ಪ್ರಮುಖ ಘಟ್ಟವಾದ ಪದವಿಪೂರ್ವ ಹಂತದಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ವಿದ್ಯೆಯ ಜೊತೆಗೆ ಸಂಸ್ಕಾರವನ್ನು ಮೈಗೂಡಿಸಿಕೊಂಡರೆ ಅದುವೇ ಜೀವನಕ್ಕೆ ಭೂಷಣವಾಗಿದ್ದು, ವಿನಯದಿಂದ ಕಲಿತ ವಿದ್ಯೆ ಅಮೃತಕ್ಕೆ ಸಮಾನವಾದರೆ, ಅಹಂಕಾರದಿಂದ ಕಲಿತ ವಿದ್ಯೆ ವಿಷಕ್ಕೆ ಸಮಾನವಾಗುತ್ತದೆ. ಇದನ್ನರಿತು ತಂದೆ-ತಾಯಿ ಮತ್ತು ಶಿಕ್ಷಕರ ಮಾರ್ಗದರ್ಶನದಲ್ಲಿ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರವನ್ನು ಪಡೆದಾಗ ಮಾತ್ರ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ಆದರ್ಶ ಪ್ರೌಢಶಾಲೆಯ ಶಿಕ್ಷಕ ನಿಂಗರಾಜ್ ಬಾಬಾಪುರ ಹೇಳಿದರು.
ಗ್ರಾಮದ ಎ.ಕೆ.ಸಿರಸಗಿ ಕಲಾ ಮತ್ತು ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಪರಿಶೀಲನೆಯ ಕುರಿತು ಹಮ್ಮಿಕೊಂಡ ಪಾಲಕರ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಉಪಪ್ರಾಚಾರ್ಯ ಶ್ರೀದೇವಿ ಹೂಲಿ ಅವರು ಮಾತನಾಡಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ನಿರ್ದೇಶನದಂತೆ ಪರೀಕ್ಷೆಗಳನ್ನು ವಿದ್ಯಾರ್ಥಿ ಸ್ನೇಹಿಯಾಗಿ ಮಾರ್ಪಡಿಸುವ ಸಂಬಂಧ ಹಲವು ಶೈಕ್ಷಣಿಕ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದ್ದು, ಅದರಂತೆ ವಾರ್ಷಿಕ ಪರೀಕ್ಷೆ ೧, ೨ ಮತ್ತು ೩ನ್ನು ನಡೆಸಲಾಗುತ್ತಿದ್ದು, ಮೂರೂ ಪರೀಕ್ಷೆಗಳನ್ನು ಬರೆಯುವುದು ಕಡ್ಡಾಯವಲ್ಲ ಆದರೆ ವಾರ್ಷಿಕ ಪರೀಕ್ಷೆ ೧ ನ್ನು ಬರೆಯುವುದು ಹೊಸಬರು ಮತ್ತು ಖಾಸಗಿ ಅಭ್ಯರ್ಥಿಗಳಿಗೆ ಕಡ್ಡಾಯವಾಗಿರುತ್ತದೆ. ಒಂದು ವೇಳೆ ೧ನೇ ಪರೀಕ್ಷೆ ಬರೆಯದವರು ೨ ಮತ್ತು ೩ನೇ ಪರೀಕ್ಷೆ ಬರೆಯಲು ಅರ್ಹರಲ್ಲ. ಇಲ್ಲಿ ಪೂರಕ ಪರೀಕ್ಷೆ ಬದಲಿಗೆ ವಾರ್ಷಿಕ ಪರೀಕ್ಷೆ ೧,೨ ಮತ್ತು ೩ ಎಂದು ಹೆಸರಿಸಿರುವುದರಿಂದ ವಿದ್ಯಾರ್ಥಿಯ ಒಟ್ಟಾರೆ ಕಾರ್ಯಕ್ಷಮತೆ ಮತ್ತು ಸಕಾರಾತ್ಮಕ ಮನೋಭಾವವನ್ನು ಉತ್ತೇಜಿಸಿದಂತಾಗುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾದ ಗ್ರಾಪಂ ಸದಸ್ಯರಾದ ನಬಿಲಾಲ ನಾಯ್ಕೋಡಿ, ಪಿಯು ಕಾಲೇಜಿನ ಪ್ರಾಚಾರ್ಯರಾದ ರೇಷ್ಮಾ ಮುಜಾವರ, ಉಪನ್ಯಾಸಕರಾದ ಹರೀಶ್ ಎಚ್, ಪದವಿ ಕಾಲೇಜಿನ ಉಪನ್ಯಾಸಕರಾದ ಆಬೀದ ಸಾಲೋಡಗಿ ಮಾತನಾಡಿದರು.
ಗಾಪ್ರಂ ಅಧ್ಯಕ್ಷ ರಾಜಅಹ್ಮದ ಸಿರಸಗಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಐಟಿಐ ಕಾಲೇಜಿನ ಪ್ರಾಚಾರ್ಯರಾದ ವ್ಹಿ.ಎಸ್.ಚಿಕ್ಕಮಠ, ಪ್ಯಾರಾಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಎಚ್.ಎ.ಮೊಮಿನ್, ಹುಸೇನಪ್ಪ ಸರ್, ಸಯ್ಯದ ಮೂಸಾ, ಮಲ್ಲಿಕಾರ್ಜುನ ಸಜ್ಜನ, ರುಕ್ಷಾನಾ ಬೇಪಾರಿ, ರುಬಿಯಾ ಮನಗೂಳಿ, ಹುಸೇನಬಾಶಾ ಚಾಂದಕವಟೆ, ಸಂಗೀತಾ ಟೆಂಗಳಿ, ಪ್ರವೀಣ ಪಾಕಿ, ಸವಿತಾ ಇಂಗಳೇಶ್ವರ, ಮಹಾಂತೇಶ ಲಂಗೋಟಿ, ರಾಜಾಬಕ್ಷಾರ ನಾಯ್ಕೋಡಿ ಸೇರಿದಂತೆ ಇತರರು ಇದ್ದರು.

