ಜಯಶ್ರೀ ಮತ್ತು ಜಯಪ್ರಕಾಶ ಅಬ್ಬಿಗೇರಿ ದಂಪತಿಯ 15 ಕೃತಿಗಳ ಲೋಕಾರ್ಪಣೆ
ಬೆಳಗಾವಿ: ಅಬ್ಬಿಗೇರಿ ದಂಪತಿಗಳು ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸುತ್ತಿರುವ ಸೇವೆ ಅನನ್ಯ. ಈ ಸೇವೆ ನಿತ್ಯ ನಿರಂತರವಾಗಿರಲಿ ಎಂದು ಬೆಳಗಾವಿ ಜಿಲ್ಲಾ ವಿಶ್ರಾಂತ ಪ್ರಾಚಾರ್ಯ,
ಹಿರಿಯ ಸಾಹಿತಿಗಳಾದ ಬಿ. ಎಸ್ ಗವಿಮಠ ಅವರು ಹೇಳಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಜಿಲ್ಲಾ ಲೇಖಕಿಯರ ಸಂಘ ಬೆಳಗಾವಿ ಹಾಗೂ ಲೋಕವಿದ್ಯಾ ಪ್ರಕಾಶನ ಸಂಕೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ ಉಪನ್ಯಾಸಕಿ,ಲೇಖಕಿ, ಅಂಕಣಕಾರ್ತಿ, ಚಿಂತಕಿ, ವಾಗ್ಮಿ ಜಯಶ್ರೀ ಮತ್ತು ಜಯಪ್ರಕಾಶ ಅಬ್ಬಿಗೇರಿ ದಂಪತಿಗಳ 15 ಕೃತಿಗಳ ಲೋಕಾರ್ಪಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸ್ತುತ ದಿನಮಾನಗಳಲ್ಲಿ ಸಾಹಿತ್ಯ ಓದುಗರ ಸಂಖ್ಯೆ ತುಂಬಾ ಕ್ಷೀಣಿಸಿದ. ಇಂತಹ ಸಮಯದಲ್ಲಿ ವೃತ್ತಿ ಬದುಕಿನೊಂದಿಗೆ ಸಾಹಿತ್ಯ ಕೃತಿಗಳನ್ನು ರಚಿಸಿ ಪ್ರಕಟಿಸುವುದು ತುಂಬಾ ಅಭಿನಂದನಾರ್ಹ ಕಾರ್ಯವಾಗಿದೆ. ಈ ಕಾರ್ಯಕ್ರಮದಲ್ಲಿ 15 ಕೃತಿಗಳು ಬಿಡುಗಡೆಯಾಗಿದ್ದು, ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದೆ. ಇಷ್ಟೊಂದು ಕೃತಿಗಳು ಬಿಡುಗಡೆಯಾಗಿದ್ದು ಅಭಿಮಾನದ ಸಂಗತಿ ಎಂದರು.
ಕೃತಿ ಪರಿಚಯ ಮಾಡಿದ ಇಂಗ್ಲಿಷ್ ಅಧ್ಯಾಪಕಿ ಗುರುದೇವಿ ಹುಲಪ್ಪನವರಮಠ, ಜಯಶ್ರೀ ಅಬ್ಬಿಗೇರಿ ಅವರ ಕೃತಿಗಳಲ್ಲಿ ಒಂದು ಚೈತನ್ಯ ತುಂಬುವ ಶಕ್ತಿ ಇದೆ. ಕೈಲಾಗದೇ ನನಗೆ ಏನನ್ನೂ ಮಾಡಲು ಸಾಧ್ಯವೇ ಇಲ್ಲ ಎಂದು ಕುಳಿತಿರುವ ಅದೆಷ್ಟೋ ಜನರಿಗೆ ಸ್ಫೂರ್ತಿ ತುಂಬುವ ತಾಕತ್ತು ಅಬ್ಬಿಗೇರಿ ಅವರ ಕೃತಿಗಳಲ್ಲಿ ಅಡಗಿದೆ. ಕನಸನ್ನೇ ಕಾಣದೇ ಇರುವವರಿಗೆ ಕನಸು ಕಾಣಿಸಿ, ಆ ಕನಸುಗಳ ಕನಸು ಮಾಡಲು ಏನು ಮಾಡಬೇಕು ಎಂಬುವುದನ್ನು ಅದ್ಭುತವಾಗಿ ಬರದಿದ್ದಾರೆ. ಅಷ್ಟೇ ಅಲ್ಲದೇ ಜೀವನ ಪ್ರಸಂಗಗಳನ್ನು ದೃಷ್ಟಾಂತಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಹೀಗಾಗಿ ಯುವ ಮನಸುಗಳ ಪರಿವರ್ತನೆಗೆ ಈ ಪುಸ್ತಕಗಳು ಸಹಕಾರಿ. ಹಾಗಾಗಿ ಈ ಪುಸ್ತಕಗಳನ್ನು ಅಬ್ಬಿಗೇರಿ ದಂಪತಿ ಗ್ರಂಥಾಲಯಗಳಿಗೆ ಉಚಿತವಾಗಿ ನೀಡಿದರೆ ಒಳಿತು ಎಂದು ಅಭಿಪ್ರಾಯಪಟ್ಟರು.
ಗೌರವ ಉಪಸ್ಥಿತಿ ವಹಿಸಿದ್ದ ವಿಶ್ರಾಂತ ಅಧ್ಯಾಪಕ ಪಿ.ಜಿ.ಕಂಪಣ್ಣವರ ಮಾತನಾಡಿದರು.
ಕೃತಿ ಲೋಕಾರ್ಪಣೆಯನ್ನು ವಿಶ್ರಾಂತ ಪ್ರಾಚಾರ್ಯ ಬಿ.ಎಸ್.ಗವಿಮಠ ಮಾಡಿದರು. ಸಾಹಿತಿ ಸುನಂದಾ ಎಮ್ಮಿ ಪ್ರಾಚಾರ್ಯ ಡಾ.ನಿರ್ಮಲಾ ಬಟ್ಟಲ ಕೃತಿ ಪರಿಚಯ ಮಾಡಿದರು. ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಜಯಶೀಲಾ ಬ್ಯಾಕೋಡ ಅಧ್ಯಕ್ಷತೆ ವಹಿಸಿದ್ದರು.
ಆಶಾ ಯಮಕನಮರಡಿ ನಿರೂಪಿಸಿದರು. ಡಾ ನಿಖಿತಾ ಪಂಚಮಪಾಟೀಲ ಪ್ರಾರ್ಥಿಸಿದರು. ಡಾ ಅನ್ನಪೂರ್ಣ ಹಿರೇಮಠ ವಂದಿಸಿದರು.

