ಯಶಸ್ವಿಯಾಗಿ ಜರುಗಿದ ವಿಜ್ಞಾನ ವಿಷಯದ ಫೋನ್ ಇನ್ ಕಾರ್ಯಕ್ರಮ
ವಿಜಯಪುರ: ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ವತಿಯಿಂದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ವಿಜ್ಞಾನ ವಿಷಯದ ಪೋನ್ ಇನ್ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿದ್ದು, ಈ ಕಾರ್ಯಕ್ರಮದಲ್ಲಿ ವಿಷಯ ತಜ್ಞರಿಂದ ವಿದ್ಯಾರ್ಥಿಗಳು ವಿಜ್ಞಾನ ವಿಷಯದ ಕುರಿತ ಕಲಿಕಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದ್ದಾರೆ ಎಂದು ೨೯೩ ವಿದ್ಯಾರ್ಥಿಗಳಿಂದ ಕೇಳಲಾದ ೪೮೩ ಪ್ರಶ್ನೆಗಳಿಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಎನ್.ಎಚ್.ನಾಗೂರ ಅವರು ತಿಳಿಸಿದ್ದಾರೆ.
ಜಿಲ್ಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ವಿಷಯದ ಡಿ.೮ರಂದು ವಿಜಯಪುರದ ಉರ್ದು ಶಿಕ್ಷಕರ ತರಬೇತಿ ಸಂಸ್ಥೆಯ ಸಭಾಭವನದಲ್ಲಿ ಸಂಜೆ ೬ ರಿಂದ ರಾತ್ರಿ ೯ ಗಂಟೆಯವರೆಗೆ ನಡೆದ ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳು ಕಲಿಕಾ ಸಮಸ್ಯೆಗಳು, ಪರೀಕ್ಷಾ ವಿಷಯದ ಗೊಂದಲಗಳಿಗೆ ವಿಷಯ ತಜ್ಞ ಶಿಕ್ಷಕರಿಂದ ಪ್ರಶ್ನೆ ಕೇಳಿ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಂಡರು.
ಬಗಲೂರು ವಿ.ಎಸ್.ಎಂ.ಪ್ರೌಢ ಶಾಲೆಯ ರಕ್ಷಿತಾ ತೇಲಿ ಬೆಳಕಿನ ವಕ್ರೀಭವನ ಕ್ರಿಯೆ ಹೇಗೆ ನಡೆಯುತ್ತದೆ, ಕೊಂಡಗುಳಿಯ ಕೇಶಿರಾಜ ಪ್ರೌಢ ಶಾಲೆಯ ಪಲ್ಲವಿ ಹಿರೇಮಠ ಆಹಾರ ಸರಪಳಿ ಪ್ರಕ್ರಿಯೆ ಕುರಿತು, ಮನಗೂಳಿಯ ಬಿ.ಎಸ್.ಪಿ. ಪ್ರೌಢ ಶಾಲೆ ವರ್ಷಾ ವಿದ್ಯುತ್ಕಾಂತೀಯ ಪ್ರೇರಣೆ ಹೇಗಾಗುತ್ತದೆ, ಐರಸಂಗ ಸರಕಾರಿ ಪ್ರೌಢ ಶಾಲೆಯ ರಕ್ಷಿತಾ ನಾವಿ ವಿದ್ಯುತ್ ಶಕ್ತಿ ಉತ್ಪಾದನೆ ಹೇಗಾಗುತ್ತದೆ, ಜಾಲವಾದ ಕರ್ನಾಟಕ ಪಬ್ಲಿಕ್ ಸ್ಕೂಲಿನ ಭಾಗ್ಯಶ್ರೀ ಇಂಗಳಗಿ ಕಾರ್ಬನ್ ಸಂಯುಕ್ತದ ಬಗ್ಗೆ, ಜೈವಿಕ ವಿಘಟನೆ ಕ್ರಿಯೆ ಎಂದರೇನು, ಪಿ.ಎಚ್.ಮೌಲ್ಯ ಸೇರಿದಂತೆ ಹಲವು ಪ್ರಶ್ನೆಗಳಿಗೆ ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಕಲಿಕಾ ಸಮಸ್ಯೆಗಳ ಬಗ್ಗೆ ಪರಿಹಾರ ಕಂಡುಕೊಂಡರೆಂದು ತಿಳಿಸಿದರು.
ವಿಜ್ಞಾನ ವಿಷಯದ ಸಂಪನ್ಮೂಲ ಶಿಕ್ಷಕರಾಗಿ ಸತೀಶ ಕಾಳೆ, ಎಸ್.ಎಂ ಮಲಗೊಂಡ. ಎಸ್.ಎನ್.ರಜಪೂರ, ಆರ್.ಬಿ.ಹಡಪದ, ಗೀತಾ ಅಥಣಿ, ಕುಮಾರಿ ಪ್ರೀಯದರ್ಶಿನಿ ಜಾಧವ, ಸೂರ್ಯಕಾಂತ, ಬಸನಗೌಡ ಬಿ.ಪಾಟೀಲ. ಎಚ್. ಜಿ.ಬಿರಾದಾರ, ಪಿ.ಎಸ್ ಹಿರೇಮಠ, ಪಿ.ಎಂ.ಗೋಲಗೊಂಡ, ಪಿ.ಎಸ್.ಅಗ್ನಿ, ಸಂದೀಪ ದೇಶಪಾಂಡೆ ಒಳಗೊಂಡಂತೆ ೧೧ ಜನ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಈರಣ್ಣ ಆಶಾಪುರ, ವಿಜ್ಞಾನ ವಿಷಯ ಪರಿವೀಕ್ಷಕರಾದ ಎಸ್.ಎಸ್ ತಳ್ಳೊಳ್ಳಿ, ಇಂಗ್ಲೀಷ್ ವಿಷಯ ಪರಿವೀಕಕ್ಷರಾದ ಪಿ.ಕೆ.ಬಿರಾದಾರ ಗಣಿತ ವಿಷಯ ಪರಿವೀಕ್ಷಕರಾದ ಸಿ.ಎಚ್. ಬಿರಾದಾರ, ಸಮಾಜ ವಿಜ್ಞಾನ ವಿಷಯ ಪರಿವೀಕ್ಷಕರಾದ ಶ್ರೀಮತಿ ಶೈಲಾ ಹಳೆಮನಿ, ಉರ್ದು ಶಿಕ್ಷಣ ಸಂಯೋಜಕರಾದ ಝಡ್.ಎ.ಸತಾರೇಕರ ಸೇರಿದಂತೆ ಶಿಕ್ಷಕರು ಉಪಸ್ಥಿತರಿದ್ದರು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

