ಬಸವನಬಾಗೇವಾಡಿ: ಪಟ್ಟಣದಲ್ಲಿ ಕಳೆದ ಹಲವಾರು ದಿನಗಳಿಂದ ಹಂದಿಗಳು ಕಾಯಿಲೆಯಿಂದಾಗಿ ಸಾವಿಗೀಡಾಗುತ್ತಿರುವದರಿಂದಾಗಿ ಪುರಸಭೆಯ ಎಲ್ಲ ವಾರ್ಡ್ಗಳಲ್ಲಿರುವ ಜನರಿಗೆ ಅವುಗಳ ವಾಸನೆಯಿಂದ ಇರಲು ಸಾಧ್ಯವಾಗುತ್ತಿಲ್ಲ. ಹಂದಿಗಳ ಸಾವಿನಿಂದ ಮಕ್ಕಳು ಸೇರಿದಂತೆ ಜನರ ಆರೋಗ್ಯದಲ್ಲಿ ಏರುಪೇರಾಗುತ್ತಿರುವದು ಜನರಲ್ಲಿ ಆತಂಕ ಮನೆ ಮಾಡಿದೆ. ಹಂದಿಗಳಿಗೆ ಮಾರಣಾಂತಿಕ ಕಾಯಿಲೆ ಬಂದಿರುವದರಿಂದ ಹಂದಿಗಳ ಮಾಲೀಕರು ಅವುಗಳಿಗೆ ಔಷಧೋಪಚಾರ ಮಾಡುವ ಕಡೆಗೆ ಗಮನ ಹರಿಸಬೇಕು. ದಿನಕ್ಕೆ ಸುಮಾರು ೧೦-೧೫ ಹಂದಿಗಳು ಸಾವಿಗೀಡಾಗುತ್ತಿವೆ. ಹಂದಿಗಳು ಸಾಯುತ್ತಿರುವದರಿಂದ ಅವುಗಳು ಕೊಳೆತು ನಾರುತ್ತಿವೆ. ಇದರಿಂದಾಗಿ ಸೊಳ್ಳೆಗಳ ಕಾಟ ಹೆಚ್ಚಾಗುತ್ತಿವೆ. ಇದರ ಪರಿಣಾಮ ಮಕ್ಕಳ ಮೇಲೆ ಪರಿಣಾಮ ಬೀರಿ ಮಕ್ಕಳು ಜ್ವರ ಸೇರಿದಂತೆ ವಿವಿಧ ಕಾಯಿಲೆಗಳಿಂದ ಬಾಧೆ ಪಡುತ್ತಿದ್ದಾರೆ. ಸಾಂಕ್ರಾಮಿಕ ರೋಗಗಳಾದ ಡೆಂಗ್ಯೂ, ಮಲೇರಿಯಾದಂತಹ ಮಾರಣಾಂತಿಕ ಕಾಯಿಲೆಗಳು ಬರುವ ಸಾಧ್ಯತೆಯಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಹಂದಿಗಳ ಸಾವಿಗೆ ಕಡಿವಾಣ ಹಾಕುವ ಅಗತ್ಯವಿದೆ. ಹಂದಿಗಳ ಸಾವಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಈಚೆಗೆ ಮಕ್ಕಳ ಆಸ್ಪತ್ರೆಯಲ್ಲಿ ದಿನವೂ ಅನೇಕ ಮಕ್ಕಳು ಚಿಕಿತ್ಸೆ ಬರುವುದು ಕಂಡುಬರುತ್ತಿದೆ. ಪಶು ಇಲಾಖೆಯ ಅಧಿಕಾರಿಗಳು ಹಂದಿಗಳ ಮಾಲೀಕರಿಗೆ ಔಷಧ ನೀಡಿದ್ದೇವೆ ಎಂದು ಹೇಳುತ್ತಾರೆ. ಆದರೆ ಹಂದಿಗಳ ಮಾಲೀಕರು ಅದನ್ನು ನೀಡಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಪಶು ಇಲಾಖೆಯ ಅಧಿಕಾರಿಗಳು ಇದರ ಕಡೆಗೆ ಹೆಚ್ಚು ಗಮನ ಹರಿಸಿ ಹಂದಿಗಳ ಕಾಯಿಲೆಗೆ ಕಡಿವಾಣ ಹಾಕಬೇಕು. ಪುರಸಭೆ ಅಧಿಕಾರಿಗಳು ಎಲ್ಲ ವಾರ್ಡ್ಗಳಲ್ಲಿ ಸತ್ತಿರುವ ಹಂದಿಗಳನ್ನು ಬೇಗನೆ ಸಾಗಿಸುವ ಕ್ರಮ ತೆಗೆದುಕೊಳ್ಳಬೇಕು. ಎಲ್ಲ ವಾರ್ಡ್ಗಳಲ್ಲಿ ಫಾಂಗಿಂಗ್ ಮಾಡುವ ಜೊತೆಗೆ ರಾಸಾಯನಿಕ ಸಿಂಪಡಣೆ ಮಾಡಬೇಕು. ಹಂದಿಗಳ ಸಾವಿನ ಪ್ರಮಾಣ ಕಡಿಮೆ ಮಾಡದೇ ಹೋದರೆ ಮುಂದಿನ ದಿನಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಹೋರಾಟ ಮಾಡಬೇಕಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಶೋಕ ಹಾರಿವಾಳ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

