ಮುದ್ದೇಬಿಹಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ನಡೆದ ಪ್ರಕರಣ
*– ಚೇತನ ಶಿವಶಿಂಪಿ*
ಮುದ್ದೇಬಿಹಾಳ: “ದೇವರು ವರ ಕೊಟ್ರೂ ಪೂಜಾರಿ ಕೊಡೊಲ್ಲಾಗ್ಯಾನ ನೋಡ್ರಿ. ನಮಗ ಕೊಡಬೇಕಾದ ಹಣ ಕೊಡಲಾರದ ತಮ್ಮ ಕಡೆನೇ ಇಟಗೊಂಡ ಜೀವಾ ತಿನಾಕತ್ತಾರ ನೋಡ್ರಿ. ಶಿಕ್ಷಕರನ್ನು ಪ್ರೋತ್ಸಾಹಿಸಾಕ ಶಿಕ್ಷಣ ಇಲಾಖೆ ರಗಡ ಸವಲತ್ತುಗಳನ್ನು ಕೊಡತ್ತ, ಆದ್ರ ಈ ಅಧಿಕಾರಿಗಳು ಮಾತ್ರ ಶಿಕ್ಷಕರಿಗೆ ಮುಟ್ಟಬೇಕಾದ್ದನ್ನ ಮುಟ್ಟಸಲಾರದ ಗಪ್ಪನ ಕುಂತಬಿಡತಾರ ನೋಡ್ರಿ..” ಅಂತಾ ಇಲ್ಲಿನ ಕೆಲವು ನೊಂದ ಶಿಕ್ಷಕರು “ಉದಯರಶ್ಮಿ” ಎದುರು ತೋಡಿಕೊಂಡ ಅಳಲಿದು.
ಅಷ್ಟಕ್ಕೂ ಏನಿದು ಪ್ರಕರಣ ಅಂತೀರಾ ಈ ಸ್ಟೋರಿ ಪೂರ್ತಿಯಾಗಿ ಓದಿ..
ಶಿಕ್ಷಣ ಇಲಾಖೆ ಪ್ರತೀ ವರ್ಷ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರಿಗೆ ಸಹಪಠ್ಯ ಚಟುವಟಿಕೆ ಎಂಬ ತಾಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದ ಸ್ಪರ್ದೆಗಳನ್ನು ನಡೆಸುತ್ತೆ. ಈ ಸ್ಪರ್ದೆಗೆ ತಾಲೂಕು ಮಟ್ಟದಲ್ಲಿ ೫೭,೭೦೦ ರೂಪಾಯಿ ಗಳ ಅನುದಾನ ನೀಡಿ ಸ್ಪರ್ದೆಯಲ್ಲಿ ವಿಜೇತ ಪ್ರಥಮ, ದ್ವಿತೀಯ ಮತ್ತು ತೃತೀಯ ಶಿಕ್ಷಕರಿಗೆ ಪ್ರಶಸ್ತಿ ಜೊತೆಗೆ ನಗದು ಬಹುಮಾನಗಳನ್ನು ನೀಡಲಾಗುತ್ತದೆ.
ಶಿಕ್ಷಕರ ಕಲ್ಯಾಣ ನಿಧಿಯಿಂದ ಪ್ರತೀ ತಾಲೂಕಿಗೆ ೭ಪ್ರಾಥಮಿಕ ಜೊತೆಗೆ ೭ಪ್ರೌಢ ಹೀಗೆ ಒಟ್ಟು ೪೨ ವಿಜೇತ ಶಿಕ್ಷಕರಿಗೆ ಪ್ರಥಮ ಬಹುಮಾನವಾಗಿ ೧೫೦೦, ದ್ವಿತೀಯ ಬಹುಮಾನವಾಗಿ ೧೦೦೦, ಮತ್ತು ತೃತೀಯ ಬಹುಮಾನವಾಗಿ ೫೦೦ ರೂಪಾಯಿಗಳಂತೆ ಒಟ್ಟು ೪೨ಸಾವಿರ ರೂಪಾಯಿಗಳನ್ನು ಪ್ರಶಸ್ತಿಯ ಜೊತೆಗೇ ನೀಡಬೇಕು ಎಂದು ಬೆಂಗಳೂರಿನ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತೆ ಬಿ.ಬಿ.ಕಾವೇರಿ ಸೂಕ್ತ ಮಾರ್ಗದರ್ಶನಗಳ ಮೂಲಕ ಅಕ್ಟೋಬರ್ ೩೦ ರಂದು ಸುತ್ತೋಲೆ ಹೊರಡಿಸಿದ್ದಾರೆ.
ಈ ಬಗ್ಗೆ ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಸುತ್ತೋಲೆಗೆ ಸಂಬಂಧಿಸಿದಂತೆ ಸ್ಪರ್ಧೆಯನ್ನು ಏರ್ಪಡಿಸಿದ್ದಾರೆ, ಪ್ರಶಸ್ತಿಗಳನ್ನೂ ನೀಡಿದ್ದಾರೆ. ಆದರೆ ಹಣ ನೀಡಿದ ಬಗ್ಗೆ ವಿಜೇತ ಶಿಕ್ಷಕರ ಸಹಿ ಪಡೆದು ಹಣ ನೀಡದೇ ವಿಜೇತ ಶಿಕ್ಷಕರ ಕೆಂಗಣ್ಣಿಗೆ ಇಲಾಖೆಯವರು ಪಾತ್ರರಾಗಿದ್ದಾರೆ.
ಸ್ಪರ್ದೆ ನಡೆದದ್ದು ನವ್ಹೆಂಬರ್ ೨೩ಕ್ಕೆ. ಅಂದೇ ಪ್ರಶಸ್ತಿ ಪತ್ರ ನೀಡಿದ್ದಾರೆ. ಆದರೆ ಇದುವರೆಗೆ ಯಾವ ಶಿಕ್ಷಕರಿಗೂ ನಗದು ಬಹುಮಾನ ಮಾತ್ರ ಮುಟ್ಟಿಲ್ಲ. ಹಣ ಮುಟ್ಟಿಸುವದಾಗಿ ಹೇಳಿ ಸಹಿ ಪಡೆದಿದ್ದಾರೆ. ಕೂಡಲೇ ಹಣ ನೀಡುವಂತೆ ವಿಜೇತ ಶಿಕ್ಷಕರ ಪೈಕಿ ಕೆಲವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಕ್ಕೆ ಪತ್ರವನ್ನು ಬರೆದದ್ದೂ ಆಯ್ತು. ಆದರೆ ನಗದು ಬಹುಮಾನ ಮಾತ್ರ ನೀಡುತ್ತಿಲ್ಲ. ಇದೆಲ್ಲ ಹಲವು ಸಂಶಗಳನ್ನು ಹುಟ್ಟು ಹಾಕಿದ್ದು ಈ ಕೂಡಲೇ ನಮಗೆ ನೀಡಬೇಕಾದ ನಗದು ಬಹುಮಾನವನ್ನು ನೀಡಬೇಕು ಮತ್ತು ಈ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸಿ ಇಲಾಖಾ ನಿಯಮಗಳನ್ನು ಗಾಳಿಗೆ ತೂರಿ ವಿಜೇತ ಶಿಕ್ಷಕರಿಗೆ ನೀಡಬೇಕಾದ ನಗದು ಹಣವನ್ನು ನೀಡದ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಯುಕ್ತ ಕರ್ನಾಟಕದ ಮೂಲಕ ಮೇಲಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

