ವಿಜಯಪುರ: ತರಬೇತಿಗಳು ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸುತ್ತವೆ ಎಂದು ಬಿ ಎಲ್ ಡಿ ಇ ಡಿಮ್ಡ್ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ ಹೇಳಿದ್ದಾರೆ.
ನಗರದ ಬಿ ಎಲ್ ಡಿಇ ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ರಾಜ್ಯ ಮಟ್ಟದ 38ನೇ ರೇಡಿಯೋಲಜಿ- ಐ ಆರ್ ಐ ಏ ಮೂರು ದಿನಗಳ ಸಮ್ಮೇಳನ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಕೊನೆಯ ದಿನವಾದ ರವಿವಾರ ಮತ್ತು ದೇಶದಲ್ಲಿಯೇ ಇದೇ ಮೊದಲ ಬಾರಿಗೆ ಇಂಥ ಸಮ್ಮೇಳನದಲ್ಲಿ ರೇಡಿಯೋಲಜಿ ಟೆಕ್ನಿಷಿಯನ್(ತಂತ್ರಜ್ಞರು)ಗಳಿಗಾಗಿ ಆಯೋಜಿಸಲಾದ ವಿಶೇಷ ವೈಜ್ಞಾನಿಕ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮವನ್ನು ಡಿಜಿಟಲ್ ಲ್ಯಾಂಪ್ ಹಚ್ಚುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ರೇಡಿಯೋಗ್ರಾಫರ್ ಗಳನ್ನು ಟೆಕ್ನೋಗ್ರಾಫರ್ ಎಂದು ಶ್ಲಾಘಿಸಿದ ಅವರು, ಇಂಥ ಕೌಶಲ್ಯಾಭಿವೃದ್ಧಿ ತರಬೇತಿಗಳಲ್ಲಿ ಪಾಲ್ಗೊಳ್ಳುವುದರಿಂದ ವಿಶ್ವದಲ್ಲಿ ಬದಲಾಗುತ್ತಿರುವ ಸಂಶೋಧನೆ ವಿಧಾನಗಳು ಮತ್ತು ತಂತ್ರಜ್ಞಾನದ ಬಗ್ಗೆ ಅಧ್ಯಯನ ನಡೆಸಲು ಮತ್ತು ಹೊಸ ಹೊಸ ಆವಿಷ್ಕಾರಗಳನ್ನು ಅಳವಡಿಸಿಕೊಂಡು ಸೇವಾ ನೈಪುಣ್ಯತೆ ಹೆಚ್ಚಿಸಿಕೊಳ್ಳಲು ಅನುಕೂಲವಾಗಲಿದೆ. ಮುಂದೆಯೂ ವಿವಿಯಿಂದ ಇಂಥ ತರಬೇತಿ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರ ಮತ್ತು ಪ್ರೋತ್ಸಾಹ ನೀಡುವುದಾಗಿ ಅವರು ತಿಳಿಸಿದರು.
ಅಲೈಡ್ ಸೈನ್ಸ್ ಡೀನ್ ಡಾ. ಎಸ್. ವಿ. ಪಾಟೀಲ್ ಮಾತನಾಡಿ, ವೈಜ್ಞಾನಿಕ ತರಬೇತಿ ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು. ಈ ಶಿಬಿರದಲ್ಲಿ ನೀಡಲಾದ ತರಬೇತಿಯನ್ನು ಸದುಪಯೋಗ ಪಡಿಸಿಕೊಂಡು ದಿನನಿತ್ಯದ ಕೆಲಸದಲ್ಲಿ ಕೌಶಲ್ಯ ಅಭಿವೃದ್ಧಿ ಹೊಂದುವಂತೆ ಕರೆ ನೀಡಿದರು.
ರೇಡಿಯೋಲಜಿ ವಿಭಾಗದ ಮುಖ್ಯಸ್ಥ ಡಾ. ರಾಜಶೇಖರ ಮುಚ್ಚಂಡಿ ಸ್ವಾಗತಿಸಿದರು. ಡಾ. ಸುಧೀರ್ ಕಾಳೆ, ಡಾ. ಕಿಶನ ಭಾಗವತ, ಡಾ. ಮಂಜುನಾಥ ಅಬ್ಬಿಗೇರಿ, ಡಾ. ನಾಗೇಶ, ಡಾ. ರುದ್ರೇಶ ವಿಶೇಷ ಉಪನ್ಯಾಸ ನೀಡಿದರು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಆಗಮಿಸಿದ್ದ 200ಕ್ಕೂ ಹೆಚ್ಚು ಟೆಕ್ನಿಷಿಯನ್ ಗಳು ಭಾಗವಹಿಸಿ ತರಬೇತಿ ಪಡೆದುಕೊಂಡರು.
ಈ ಕಾರ್ಯಕ್ರಮದಲ್ಲಿ ಸಮಾಜ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ಅಪಾರ ಸೇವೆಯನ್ನು ಪರಿಗಣಿಸಿ ಸುನಂದ ವಾಸುದೇವ ತೋಳಬಂದಿ ಅವರನ್ನು ಅಭಿನಂದಿಸಲಾಯಿತು.
ಡಾ. ಸುರೇಶ ಕನಮಡಿ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

