ವಿಜಯಪುರ ಜಿಲ್ಲೆಯಲ್ಲಿ ೧೩ ಪ್ರಕರಣಗಳ ದಾಖಲು | ಪ್ರಕರಣಗಳಲ್ಲಿ ಭಾಗಿಯಾಗಿರುವ ಬಾಂಡ್ ರೈಟರ್ಸ್ ಲೈಸನ್ಸ್ ರದ್ದಿಗೆ ಕ್ರಮ
ಸಚಿವ ಎಂ.ಬಿ.ಪಾಟೀಲ ಖಡಕ್ ಸೂಚನೆ
ವಿಜಯಪುರ: ನಗರ ಸೇರಿದಂತೆ ಜಿಲ್ಲಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಖೊಟ್ಟಿ ದಾಖಲೆಗಳನ್ನು ಸೃಷ್ಠಿಸಿ ಆಸ್ತಿ ನೋಂದಣಿ ಮಾಡುವ ಪ್ರಕರಣಗಳು ಕಂಡು ಬಂದಿದ್ದು ಇಂತವರ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅಧಿಕಾರಿಗಳಿಗೆ ಖಡಕ್ಕಾಗಿ ಸೂಚಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶನಿವಾರ ಸಭೆ ನಡೆಸಿ ಮಾತನಾಡಿದ ಅವರು, ಕೆಲವರು ಆಧಾರ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಮೂಲಕ ಭೂ ಮಾಲೀಕರ ಹೆಸರಿನಲ್ಲಿ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಆಸ್ತಿ ನೋಂದಣಿ ಮಾಡುತ್ತಿರುವ ೧೩ ಪ್ರಕರಣಗಳನ್ನು ಈಗಾಗಲೇ ದಾಖಲಿಸಲಾಗಿದೆ. ಖೊಟ್ಟಿ ದಾಖಲೆ ಸೃಷ್ಟಿ ಮಾಡಿ, ಆಸ್ತಿಗಳನ್ನು ನೋಂದಣಿ ಮಾಡುವ ಇಂತಹ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಾಂಡ್ ರೈಟರ್ಸ್ ಗುರುತಿಸಿ, ಅವರ ಬಾಂಡ್ ರೈಟರ್ಸ್ ಲೈಸನ್ಸ್ ರದ್ದುಗೊಳಿಸವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಅದರಂತೆ ಸಬ್ ರಜಿಸ್ಟರ್ ಆಫೀಸನಲ್ಲಿ ಉಪ ನೋಂದಣಿ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದ ಮೆಲೆ ಮೇಲೆ ಹಲವು ದಿನಗಳಿಂದ ಒಂದೇ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು ಜಿಲ್ಲಾ ವ್ಯಾಪ್ತಿಯಿಂದ ತಾಲೂಕು ಮಟ್ಟದಲ್ಲಿ ವರ್ಗಾವಣೆ ಮಾಡಿ, ತಾಲೂಕು ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಜಿಲ್ಲಾ ವ್ಯಾಪ್ತಿಯಲ್ಲಿ ಕೆಲಸ ಮಾಡಲು ವರ್ಗಾವರ್ಗಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಕ್ರಮ ನೋಂದಣಿ ಪ್ರಕರಣಗಳು ಕಂಡು ಬಂದಲ್ಲಿ ಉಪ ನೋಂದಣಾಧಿಕಾರಿಗಳು ಜಿಲ್ಲಾ ನೋಂದಾಣಾಧಿಕಾರಿಗಳ ಅನುಮತಿ ಪಡೆದು ಸ್ಟೇಟ್ ಎಫ್‌ಐಆರ್ ಮಾಡಬೇಕು. ನೋಂದಣಿ ಮಾಡುವ ಸಂದರ್ಭದಲ್ಲಿ ಜಿಲ್ಲಾ ನೋಂದಣಾಧಿಕಾರಿಗಳಿಗೆ ಸಬ್ ರಜಿಸ್ಟರ್ ಅವರಿಗೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ವೋಟರ್ ಐಡಿ ಹಾಗೂ ರೇಶನ್ ಕಾರ್ಡ್ ಕೂಲಂಕೂಷವಾಗಿ ಪರಿಶೀಲಿಸಲು ಲಾಗಿನ್ ಐಡಿ ನೀಡಲಾಗುವುದು. ಮೂಲ ದಾಖಲೆಗಳನ್ನು ಪರಿಶೀಲಿಸಿ ನೋಂದಣಿ ಮಾಡಲು ಕ್ರಮ ಕೈಗೊಳ್ಳಲು ಸೂಚಿಸಿದರು.
ಈ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ವಿಜಯಪುರ ಉಪ ವಿಭಾಗಾಧಿಕಾರಿ ಬಸಣೆಪ್ಪ ಕಲಶೆಟ್ಟಿ, ಮಹಾನಗರ ಪಾಲಿಕೆ ಆಯುಕ್ತ ಬದ್ರುದ್ದಿನ್ ಸೌದಾಗರ್, ವಿಜಯಪುರ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಾಜಶೇಖರ ಡಂಬಳ, ಜಿಲ್ಲಾ ನೋಂದಣಾಧಿಕಾರಿ ಜಿ.ಆರ್ ನಾಡಗೌಡ, ಉಪ ನೋಂದಣಾಧಿಕಾರಿ ಬಿ.ಎಸ್.ಬಿರಾದಾರ, ಮಲ್ಲಿಕಾರ್ಜುನ ಪಾಟೀಲ,ರವಿ ಹಂಚಿನಾಳ, ಐ.ಎಸ್.ಬಾಗಾಯತ್, ದೇವಪ್ಪ ಡಂಬಳ ಸೇರಿದಂತೆ ವಿವಿಧ ತಾಲೂಕಿನ ತಹಶೀಲ್ದಾರರು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

