ಬಸವನಬಾಗೇವಾಡಿ: ಕಳೆದ ೧೨ ವರ್ಷಗಳಿಂದ ಬಸವನಬಾಗೇವಾಡಿಯಲ್ಲಿ ಕಂದಾಯ ಉಪವಿಭಾಗಾಧಿಕಾರಿ ಕಚೇರಿ ಮಂಜೂರು ಮಾಡಲು ಹೋರಾಟ ಮಾಡುತ್ತಾ ಬಂದರೂ ಇದುವರೆಗೂ ಸರ್ಕಾರ ಕಂದಾಯ ಉಪವಿಭಾಗಾಧಿಕಾರಿ ಕಚೇರಿ ಮಂಜೂರು ಮಾಡಲು ಮುಂದಾಗುತ್ತಿಲ್ಲ. ಇದೀಗ ಬೆಳಗಾವಿ ನಡೆಯುತ್ತಿರುವ ಅಧಿವೇಶನದಲ್ಲಿ ಈ ಕುರಿತು ಚರ್ಚಿಸಿ ಈ ಕಚೇರಿಯನ್ನು ಮಂಜೂರು ಮಾಡಲು ಮುಂದಾಗಬೇಕೆಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪಟ್ಟಣದಲ್ಲಿ ಉಪವಿಭಾಗಾಧಿಕಾರಿ ಕಚೇರಿ ಇಲ್ಲದೇ ಇರುವದರಿಂದಾಗಿ ರೈತ ಬಾಂಧವರು ಸುಮಾರು ೧೧೦ ಕಿಮೀ ವ್ಯಾಪ್ತಿಯಿಂದ ತಮ್ಮ ಕೃಷಿ ಚಟುವಟಿಕೆಗಳನ್ನು ಬಿಟ್ಟು ನೂರಾರು ರೂ.ಗಳನ್ನು ಮಾಡಿಕೊಂಡು ವಿಜಯಪುರಕ್ಕೆ ಅಲೆದಾಡಬೇಕು. ರೈತರ ಪ್ರಮುಖ ಕೆಲಸಗಳಾದ ಟ್ರಿಬ್ಯುನಲ್ ಪ್ರಕರಣ, ಶರ್ತಗಳ ಬದಲಾವಣೆ, ಹರ ತಿದ್ದುಪಡಿ, ಜನನ ಮತ್ತು ಮರಣ ಪ್ರಮಾಣ ಪತ್ರ ಸೇರಿದಂತೆ ಇನ್ನಿತರ ಪ್ರಕರಣಗಳು ಉಪವಿಭಾಗಾಧಿಕಾರಿ ವ್ಯಾಪ್ತಿಗೆ ಬರುವದರಿಂದ ದಿನನಿತ್ಯ ರೈತರ ವಿಜಯಪುರಕ್ಕೆ ಅಲೆದಾಡಲು ಕಷ್ಟವಾಗುತ್ತಿದೆ. ರೈತ ಬಾಂಧವರು ತಮ್ಮ ಕೆಲಸಗಳನ್ನು ಮಾಡಿಕೊಳ್ಳಲು ಅನುಕೂಲವಾಗಲು ಬಸವನಬಾಗೇವಾಡಿಯಲ್ಲಿ ಕಂದಾಯ ಉಪವಿಭಾಗಾಧಿಕಾರಿ ಕಚೇರಿಯನ್ನು ಸರ್ಕಾರ ಮಂಜೂರು ಮಾಡಬೇಕಿದೆ. ಹಿಂದೆ ಕಂದಾಯ ಉಪವಿಭಾಗಾಧಿಕಾರಿ ಕಚೇರಿ ಮಂಜೂರು ಮಾಡುವಂತೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ್ದ ಶಾಸಕರು ಹೋಬಳಿ ರಚನೆಯಾಗಿ ಹೊಸ ತಾಲೂಕುಗಳು ರಚನೆಯಾದ ನಂತರ ಈ ಕಚೇರಿ ಸ್ಥಾಪನೆ ಸೂಕ್ತವಾಗುತ್ತದೆ ಎಂದು ಹೇಳಿದ್ದರು. ಅವರ ಹೇಳಿಕೆಯಂತೆ ಹೊಸ ತಾಲೂಕುಗಳು ರಚನೆಯಾಗಿವೆ. ಈಗಲಾದರೂ ಉಪವಿಭಾಗಾಧಿಕಾರಿ ಕಚೇರಿ ಮಂಜೂರು ಮಾಡಿಸಲು ಕ್ರಮ ಕೈಗೊಳ್ಳುತ್ತಿಲ್ಲ. ಮುಂದಿನ ದಿನಗಳಲ್ಲಿ ಕಂದಾಯ ಉಪವಿಭಾಗಾಧಿಕಾರಿ ಕಚೇರಿ ಮಂಜೂರು ಮಾಡದೇ ಹೋದರೆ ಧರಣಿ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಅರವಿಂದ ಕುಲಕರ್ಣಿ ಎಚ್ಚರಿಕೆ ನೀಡಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

