ಮೌಲ್ವಿ ತನ್ವೀರ್ ಪೀರಾ ಅವರಿಗೆ ಐಸಿಸ್ ಜೊತೆ ಸಂಪರ್ಕ ಆರೋಪ | ಕಾಂಗ್ರೆಸ್ ಮುಖಂಡರಿಂದ ಸುದ್ದಿಗೋಷ್ಠಿ
ವಿಜಯಪುರ: ನಗರದ ಮುಸ್ಲಿಂ ಧರ್ಮಗುರು ತನ್ವೀರ್ ಪೀರಾ ಹಾಸ್ಮಿ ಅವರಿಗೆ ಐಸಿಸ್ ಉಗ್ರ ಸಂಘಟನೆಯೊದಿಗೆ ಸಂಪರ್ಕ ಇದೆ ಎಂದು ಗಂಭೀರ ಆರೋಪ ಮಾಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಅದನ್ನು ಸಾಬೀತು ಮಾಡದಿದ್ದರೆ ರಾಜಕೀಯ ನಿವೃತ್ತಿ ಪಡೆಯಬೇಕು ಎಂದು ಕಾಂಗ್ರೆಸ್ ಮುಖಂಡ ಎಸ್.ಎಂ.ಪಾಟೀಲ ಗಣಿಯಾರ ಆಗ್ರಹಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಎಲ್ಲ ಸಮುದಾಯಗಳ ಮುಖ್ಯಮಂತ್ರಿ, ಹುಬ್ಬಳ್ಳಿಯಲ್ಲಿ ನಡೆದಿರುವ ಮೌಲ್ವಿಗಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಅಲ್ಲಿ ಮೌಲ್ವಿ ತನ್ವೀರ್ ಪೀರಾ ಹಾಸ್ಮಿ ಅವರ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ. ಅದರಲ್ಲಿ ತಪ್ಪೇನಿದೆ. ಒಬ್ಬ ಧರ್ಮ ಗುರು, ಮೌಲ್ವಿಗಳನ್ನು ಉಗ್ರ ಸಂಘಟನೆಯೊಂದಿಗೆ ಹೋಲಿಕೆ ಮಾಡಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿರುವ ಯತ್ನಾಳ ಅವರು ತಮ್ಮ ಬಳಿ ಯಾವುದಾದರೂ ದಾಖಲೆಗಳಿದ್ದರೆ, ಆರೋಪವನ್ನು ಸಾಬೀತು ಮಾಡಿದರೆ ನಾನು ದೇಶವನ್ನು ಬಿಡುತ್ತೇನೆ ಎಂದು ತನ್ವೀರ್ ಪೀರಾ ಹಾಸ್ಮಿ ಅವರು ವಿದೇಶದಿಂದಲೇ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಕಾರಣ ಶಾಸಕರು ಸಾಬೀತು ಮಾಡಬೇಕು ಇಲ್ಲವೇ ರಾಜಕೀಯ ನಿವೃತ್ತಿ ಹೊಂದಬೇಕೆಂದು ಆಗ್ರಹಿಸಿದರು.
ತನ್ವೀರ ಫೀರಾ ಧರ್ಮ ಗುರು ಅವರು, ಸಿದ್ದೇಶ್ವರ ಸ್ವಾಮೀಜಿ, ಪೇಜಾವರ ಸ್ವಾಮೀಜಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೂ ವೇದಿಕೆ ಹಂಚಿಕೊಂಡಾಗ ಶಾಸಕರು ಉಗ್ರರ ನಂಟಿನ ಬಗ್ಗೆ ಮಾತಾಡಿಲ್ಲ. ಶಾಂತಿ ಸೌಹಾರ್ಧತೆಯಿಂದ ನೆಲೆಸಿರುವ ವಿಜಯಪುರದಲ್ಲಿ ಜಾತಿ-ಜಾತಿಗಳ ಮಧ್ಯ ಕೋಮು ಗಲಭೆ ಸೃಷ್ಟಿಸಲು ಕುಮ್ಮಕ್ಕು ನೀಡುವ ಹೇಳಿಕೆಗಳನ್ನು ನೀಡುತ್ತಿರುವುದು ಖಂಡನೀಯ ಎಂದರು.
ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ ಮಾತನಾಡಿ, ಶಾಸಕ ಯತ್ನಾಳ ಅವರು ಮುಸ್ಲಿಂರ ಬಗ್ಗೆ ಮಾತನಾಡಿ ದೇಶ ಭಕ್ತ ಎಂದು ಬಿಂಬಿಸಿಕೊಳ್ಳಲು ಹೊರಟಿದ್ದಾರೆ. ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಮುಸ್ಲಿಂರ ಮೇಲೆ ಆರೋಪ ಮಾಡುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು. ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕಿದೆ, ಮೊದಲು ಅವರು ಅವುಗಳತ್ತ ಗಮನ ಹರಿಸಲಿ ಎಂದು ಕುಟುಕಿದರು.
ಮುಖಂಡರಾದ ಫಯಾಜ ಕಲಾದಗಿ,
ನಾಗರಾಜ ಲಂಬು, ಎಂ.ಸಿ.ಮುಲ್ಲಾ ಸೇರಿದಂತೆ ಹಲವರಿದ್ದರು.

