ವಿಜಯಪುರ ಆಯುಷ್ ಪಂಚಕರ್ಮ ಆಸ್ಪತ್ರೆಗೆ ಭೇಟಿ ನೀಡಿದ ಜಿ.ಪಂ.ಸಿಇಓ ರಾಹುಲ್ ಶಿಂಧೆ ಕರೆ
ವಿಜಯಪುರ: ನಗರದ ಆಯುಷ್ ಪಂಚಕರ್ಮ ಘಟಕವು ಇತರ ಘಟಕಗಳಿಗೆ ಮಾದರಿಯಾಗಬೇಕು ಆ ನಿಟ್ಟಿನಲ್ಲಿ ಎಲ್ಲರೂ ಹೆಚ್ಚಿನ ಶ್ರಮವಹಿಸಿ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಸೂಚಿಸಿದರು.
ಗುರುವಾರ ವಿಜಯಪುರದ ಆಯುಷ್ ಹೈಟೆಕ್ ಪಂಚಕರ್ಮ ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ಪರಿಶೀಲನೆ ನಡೆಸಿದ ಅವರು, ಆಯುಷ್ ಘಟಕ ಕಾರ್ಯನಿರ್ವಹಿಸುತ್ತಿರುವ ಕುರಿತು ಹಾಗೂ ಈ ಘಟಕದಲ್ಲಿ ದೊರೆಯು ಸೌಲಭ್ಯಗಳ ಕುರಿತು ವಿವಿಧ ಐಇಸಿ ಚಟುವಟಿಕೆಗಳ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ಸಿಬ್ಬಂದಿಗಳು ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿ, ಗ್ರಾಮೀಣ ಭಾಗದಿಂದ ಬರುವ ಸಾರ್ವಜನಿಕರಿಗೆ ಯಾವದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ಆರೋಗ್ಯ ಶಿಬಿರಗಳನ್ನು, ಮನೆ ಮದ್ದು ಕಾರ್ಯಕ್ರಮಗಳನ್ನು ಮತ್ತು ಯೋಗ ಶಿಬಿರಗಳನ್ನು ಆಯೋಜನೆ ಮಾಡುವ ಮೂಲಕ ಮಾದರಿ ಆಯುಷ್ ಘಟಕವನ್ನಾಗಿಸಲು ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.
ಆಸ್ಪತ್ರೆಯ ಮುಂದುಗಡೆ ಖಾಲಿ ಇರುವ ಸ್ಥಳದಲ್ಲಿ ಔಷಧಿಯುಕ್ತ ಸಸಿಗಳನ್ನು ನೆಟ್ಟು ಸುಂದರ ಉದ್ಯಾನವನ ನಿರ್ಮಿಸುವಂತೆ ಸೂಚಿಸಿದ ಅವರು, ಮಸಾಜಿಸ್ಟ್ ಸಿಬ್ಬಂದಿಗಳನ್ನು ತರಬೇತಿಗಾಗಿ ಕೇರಳಕ್ಕೆ ಕಳುಹಿಸಲು ಸಲಹೆ ನೀಡಿ, ಅದಕ್ಕೆ ಬೇಕಾದ ಸಹಕಾರ ನೀಡುವುದಾಗಿ ತಿಳಿಸಿದರು.
ಆಸ್ಪತ್ರೆಗೆ ಬರುವ ಸಾರ್ವಜನಿಕರ, ರೋಗಿಗಳ ಅನುಕೂಲಕ್ಕಾಗಿ ನಗರ ಸಾರಿಗೆ ಬಸ್ ಗಳು ಆಸ್ಪತ್ರೆಯ ವರೆಗೆ ಬರುವ ವ್ಯವಸ್ಥೆ ಮಾಡಲು ಸಂಬಂಧಪಟ್ಟವರೊಡನೆ ಸಂಪರ್ಕಿಸಿ ವ್ಯವಸ್ಥೆ ಕಲ್ಪಿಸಲು ಸ್ಥಳದಲ್ಲಿದ್ದ ಡಾ.ರಾಮನಗೌಡ.ಎಸ್.ಪಾಟೀಲ, ಜಿಲ್ಲಾ ಆಯುಷ್ ಅಧಿಕಾರಿಗಳು ಇವರಿಗೆ ಸೂಚಿಸಿದರು.
ಈ ಆಸ್ಪತ್ರೆಗೆ ಪ್ರತಿ ದಿನ ಸರಾಸರಿ ೧೦೦ಕ್ಕು ಅಧಿಕ ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯಲು ಆಗಮಿಸುತ್ತಿದ್ದಾರೆ. ಈ ಆಸ್ಪತ್ರೆಯಲ್ಲಿ ವಿರೇಚನ, ಕಟಿಬಸ್ತಿ, ಶಿರೋಧಾರ ಮಸಾಜ್ ಥೆರಪಿ ಮತ್ತು ಸ್ಟೀಮ್ ಥೆರಪಿ ಸೇರಿ ವಿವಿಧ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ ಜೋತೆಗೆ ಗ್ರಾಮೀಣ ಭಾಗಗಳಲ್ಲಿ ಆರೋಗ್ಯ ಶಿಬಿರಗಳನ್ನು ಆಯೋಜಿಸಿ, ಸಾರ್ವಜನಿಕರಿಗೆ ಆಯುರ್ವೇದ ಪದ್ಧತಿಯ ಅರಿವು ಮೂಡಿಸಲಾಗುತ್ತಿದೆ ಎಂದು ಡಾ.ರಾಮನಗೌಡ.ಎಸ್.ಪಾಟೀಲ, ಜಿಲ್ಲಾ ಆಯುಷ್ ಅಧಿಕಾರಿಗಳು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ವೈಧ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

