ಮುದ್ದೇಬಿಹಾಳ ಕ್ರಿಕೆಟ್ ಪ್ರೀಮಿಯರ್ ಲೀಗ್ ಸೀಸನ್-೬ ನಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ಅಭಿಮತ
ಮುದ್ದೇಬಿಹಾಳ: ಮೊಬೈಲ್ ನ ಹಾವಳಿಯಿಂದಾಗಿ ದೇಹವನ್ನು ದಂಡಿಸುವ ಕ್ರೀಡೆಗಳು ಕಣ್ಮರೆಯಾಗುತ್ತಿವೆ. ಕ್ರೀಡೆಗಳು ಕೇವಲ ಮನರಂಜನೆಗಾಗಿ ಅಲ್ಲ. ಮನರಂಜನೆಯ ಜೊತೆಗೆ ಆರೋಗ್ಯದ ಮೇಲೆ ಸಾಕಷ್ಟು ಉತ್ತಮ ಪ್ರಭಾವಗಳನ್ನು ಬೀರುತ್ತವೆ ಅನ್ನೋ ಸತ್ಯವನ್ನು ಈಗಿನ ಯುವಕರು ತಿಳಿದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ನ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಹೇಳಿದರು.
ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿ ಕಳೆದ ಒಂದು ತಿಂಗಳಿನಿಂದ ನಡೆದ ಮುದ್ದೇಬಿಹಾಳ ಪ್ರೀಮಿಯರ್ ಲೀಗ್ ಸೀಜನ್-೬ ಕ್ರಿಕೇಟ್ ಪಂದ್ಯಾವಳಿಯ ಕೊನೆಯ ಪಂದ್ಯದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಧ್ಯದ ಪರೀಸ್ಥಿತಿಯಲ್ಲಿ ಯಾವ ಯುವಕರನ್ನು ನೋಡಿದರೂ ಅವರ ಕೈಯಲ್ಲೊಂದು ದೊಡ್ಡ ಮೊಬೈಲ್ ಇರುತ್ತೆ. ಸಂಜೆಯಾದರೆ ಸಾಕು ಅಲ್ಲಲ್ಲಿ ಕುಳಿತು ಕಣ್ಣು ಮುಚ್ಚದೇ ಮೊಬೈಲ್ ನೋಡುತ್ತ ತಲೆ ಹೊರಳಾಡಿಸುತ್ತ ಕುಳಿತಿರುತ್ತಾರೆ. ಇದರಿಂದ ಕಣ್ಣುಗಳು ಮಾತ್ರವಲ್ಲದೇ ಮನಸ್ಸು ಕೂಡ ಹಾಳಾಗುತ್ತದೆ. ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವಂತಹ ಆಟಗಳನ್ನು ಬಿಟ್ಟು ದೇಹವನ್ನು ದಂಡಿಸುವ ಆಟಗಳನ್ನಾಡಲು ಯುವಕರು ಮುಂದಾಗಬೇಕು ಎಂದರು.
ಈ ವೇಳೆ ಪಿಎಸ್‌ಐ ಸಂಜೀವ ತಿಪರೆಡ್ಡಿ ಮಾತನಾಡಿದರು.
ಮೌಲಾನಾ ಅಲ್ಲಾಭಕ್ಷ ಖಾಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪಂದ್ಯಾವಳಿಗೆ ಪ್ರಥಮ ಬಹುಮಾನ ನೀಡಿ ಪ್ರೋತ್ಸಾಹಿಸಿದ ಸಮಾಜ ಸೇವಕ ಸಿ.ಬಿ.ಅಸ್ಕಿ ಅವರ ಅನುಪಸ್ಥಿತಿಯಲ್ಲಿ, ಅವರ ಸ್ನೇಹಿತ ಸಮಾಜ ಸೇವಕ ಎಂ.ಎನ್.ಮದರಿ ಅವರನ್ನು ಸಂಘಕರು ಸನ್ಮಾನಿಸಿ ಗೌರವಿಸಿದರು.
ದಿ-ಕರ್ನಾಟಕ ಕೋ ಅಪ್ ಬ್ಯಾಂಕ್ ಅಧ್ಯಕ್ಷ ಸತೀಶ ಓಸ್ವಾಲ್, ಪುರಸಭೆ ಸದಸ್ಯರಾದ ಮಹೆಬೂಬ ಗೊಳಸಂಗಿ ಮತ್ತು ಶಿವು ಶಿವಪೂರ, ಮಾಜಿ ಸದಸ್ಯ ಹಾಗೂ ಪಂದ್ಯಾವಳಿಯ ರೂವಾರಿ ಕಾಮರಾಜ ಬಿರಾದಾರ, ಸದಾಶಿವ ಮಠ, ಸಂಗಣ್ಣ ಮೇಲಿನಮನಿ, ಹರೀಶ ಬೆವೂರ, ಯಾಸೀನ ಸೋಠೆ, ಬಬಲು ಹುಣಚಗಿ ಸೇರಿದಂತೆ ಮತ್ತೀತರರು ಇದ್ದರು. ವೈ.ಎಚ್.ವಿಜಯಕರ, ಹುಸೇನ ಮುಲ್ಲಾ ಕಾಳಗಿ ಕಾರ್ಯಕ್ರಮವನ್ನು ನಿರ್ವಹಿಸಿದರು.

