ಸಿಂದಗಿ: ಕನ್ನಡ ಸಾಹಿತ್ಯಕ್ಕೆ ಭವ್ಯವಾದ ಸಂಸ್ಕೃತಿ ಮತ್ತು ಪರಂಪರೆಯಿದೆ. ಕನ್ನಡ ಭಾಷೆಗೆ ಸಾವಿರಾರು ವರುಷಗಳ ಇತಿಹಾಸವಿದೆ ಎಂದು ಸಿ.ಎಂ.ಮನಗೂಳಿ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಅರವಿಂದ ಮನಗೂಳಿ ಹೇಳಿದರು.
ಬುಧವಾರದಂದು ಪಟ್ಟಣದ ಎಚ್.ಜಿ.ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶ್ರೀಮತಿ ಕಲ್ಲವ್ವ ರಂಗಪ್ಪ ಹೆಗ್ಗನದೊಡ್ಡಿ, ದತ್ತಿದಾನಿಗಳಾದ ಡಾ.ಎ.ಆರ್. ಹೆಗ್ಗನದೊಡ್ಡಿ ಹಾಗೂ ಶ್ರೀಮತಿ ಗೌರಮ್ಮ ಸಿದ್ರಾಮಪ್ಪ ವಾಡೇದ ದತ್ತಿ ದಾನಿಗಳಾದ ಮಕ್ಕಳ ಸಾಹಿತಿ ರಾಮಚಂದ್ರ ವಾಡೇದ ಅವರು ನೀಡಿದ ದತ್ತಿ ದಾನದ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಚಲನಚಿತ್ರ, ಜಾನಪದ, ನಾಟಕ ಹಾಗೂ ಮೌಖಿಕ ಪರಂಪರೆಯಿಂದ ಬಂದಿರುವ ಗ್ರಾಮೀಣ ಪ್ರದೇಶದ ಸಂಸ್ಕೃತಿಯು ಕನ್ನಡ ಸಾಹಿತ್ಯ ಪರಿಷತ್ತನ್ನು ಉಳಿಸಿ ಬೆಳೆಸಿದ್ದಾರೆ. ಮೈಸೂರು ರಾಜಮನೆತನದ ಅರಸರು ಕನ್ನಡ ಸಾಹಿತ್ಯ ಪರಿಷತ್ತನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.
ಪದ್ಮರಾಜ ಮಹಿಳಾ ಮಹಾವಿದ್ಯಾಲಯದ ಉಪನ್ಯಾಸಕಿ ಹೇಮಾ ಹಿರೇಮಠ ಅವರು ಶಿಕ್ಷಣ ಮತ್ತು ಸಾಹಿತ್ಯ ಕುರಿತು ಉಪನ್ಯಾಸ ನೀಡಿ, ಸಮಾಜದಲ್ಲಿ ಭಾಷೆ ಹಾಗೂ ಸಾಹಿತ್ಯವನ್ನು ಬೆಳೆಸುವದು ಕೇವಲ ಸಾಹಿತಿಗಳ ಕಾಯಕವಲ್ಲ. ಮಕ್ಕಳಿಗೆ ಭಾಷೆಯನ್ನು ಬೋಧಿಸಲು ಶಿಕ್ಷಕರು ಸಹ ಶ್ರಮವಹಿಸಬೇಕು. ಸ್ಮರಣ ಶಕ್ತಿಯ ಬೆಳವಣಿಗೆಯಲ್ಲಿ ಸಾಹಿತ್ಯಕ್ಕೆ ಮಹತ್ವ ಸ್ಥಾನವಿದೆ. ಸಾಹಿತ್ಯ ಎಂಬ ಪರಿಕಲ್ಪನೆ ಬದುಕಿನ ಕಲ್ಪನಾಶೀಲ ಅನುಭವಗಳನ್ನು ತನ್ನ ಕಡೆಗೆ ಸೆಳೆಯುತ್ತದೆ. ಸಾಹಿತ್ಯ ಕೇವಲ ಓದಿಗೆ ಮಾತ್ರ ಸೀಮಿತವಾಗಬಾರದು. ಆದ್ದರಿಂದ ಶಿಕ್ಷಣದಲ್ಲಿ ಸಾಹಿತ್ಯದ ಪಾತ್ರದ ಕುರಿತಾದ ಚಿಂತನೆ ಮಹತ್ವಪೂರ್ಣವಾಗಿದೆ ಎಂದರು.
ಎಚ್.ಜಿ.ಪಪೂ ಮಹಾವಿದ್ಯಾಲಯದ ಉಪನ್ಯಾಸಕಿ ಮುಕ್ತಾಯಕ್ಕ ಕತ್ತಿ ಅವರು ಜನಪದ ಸಾಹಿತ್ಯದಲ್ಲಿ ನೀತಿ ಕುರಿತು ಉಪನ್ಯಾಸ ನೀಡಿ, ಜನಪದ ಎಂದರೆ ಜನರ ಪದ. ಪದ ಅಂದರೆ ಶಬ್ದ. ಇಲ್ಲಿ ಪದಗಳು ಜೋಡಣೆಯಾಗಿ ಹಾಡು, ಕಥೆ, ತ್ರಿಪದಿ, ಗಾದೆ ಮಾತು ಮತ್ತು ಒಗಟುಗಳಾಗಿವೆ. ಸಾಹಿತ್ಯ ಎಂದರೆ ಲಿಖಿತ ಕೃತಿಗಳ ಒಂದು ದೇಹ. ಸಾಹಿತ್ಯ ಎಂಬುದು ಕೇವಲ ಮುದ್ರಿತಗೊಂಡ ಪುಸ್ತಕವಲ್ಲ. ಅದರ ಮೂಲ ಕವಿ ಹೃದಯದಲ್ಲಿದೆ. ನೀತಿ ಎಂದರೆ ಒಳ್ಳೆಯ ನಡತೆ. ಮನುಷ್ಯನ ಜೀವನ ವ್ಯವಸ್ಥಿತವಾಗಿ ಸಾಗಿಸಲು ನೈತಿಕತೆಯ ಚೌಕಟ್ಟು ಬೇಕು. ನೀತಿ ಎಂಬ ನಿಬಂಧನೆ ಇರಬೇಕು. ಇದು ಎಲ್ಲಾ ಕಲೆ-ಸಾಹಿತ್ಯಕ್ಕೆ ತಾಯಿ ಬೇರು ಮತ್ತು ಗುರುಸ್ಥಾನ ಹೊಂದಿರುವಂತಹದ್ದು ಎಂದು ಹೇಳಿದರು.
ಈ ವೇಳೆ ದತ್ತಿ ದಾನಿಗಳಾದ ಎ.ಆರ್.ಹೆಗ್ಗನದೊಡ್ಡಿ, ರಾಮಚಂದ್ರ ವಾಡೇದ, ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ತಾಲೂಕಾಧ್ಯಕ್ಷ ಶಿವಾನಂದ ಬಡಾನೂರ ಮಾತನಾಡಿದರು.
ಮಹಾಂತೇಶ ಪಟ್ಟಣಶೆಟ್ಟಿ, ಕಸಾಪ ಮಾಜಿ ಅಧ್ಯಕ್ಷ ಚಂದ್ರಶೇಖರ ದೇವರಡ್ಡಿ, ಕೆ.ಹೆಚ್. ಸೋಮಾಪುರ, ಅಶೋಕ ಸುಲ್ಪಿ, ಶಾಂತಪ್ಪ ರಾಣಾಗೋಳ, ಶಿಲ್ಪಾ ಕುದರಗೊಂಡ, ಶರಣಮ್ಮ ನಾಯಕ, ಜಯಶ್ರೀ ಕುಲಕರ್ಣಿ, ಚಂದ್ರಶೇಖರ ನಾಗರಬೆಟ್ಟ, ಸಂಗನಗೌಡ ಪಾಟೀಲ, ಸತೀಶ ಬಸರಕೋಡ, ಭೀಮನಗೌಡ ಬಿರಾದಾರ, ಡಾ.ಅಂಬರಿಷ ಬಿರಾದಾರ. ಎಪ್.ಎ.ಹಾಲಪ್ಪನವರ. ಶಿವಕುಮಾರ ಕಲ್ಲೂರ, ಅಬ್ದುಲ್‌ಖಾದರ ವಾಲೀಕಾರ, ಎಸ್.ಎ.ಪಾಟೀಲ, ಶಾಂತು ಬಿರಾದಾರ. ಡಾ.ಎಸ್.ಎಸ್ ಚವ್ಹಾಣ, ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಾಂತಿಲಾಲ ಚವ್ಹಾಣ ಸ್ವಾಗತಿಸಿದರು. ಸಿದ್ದಲಿಂಗ ಕಿಣಗಿ ನಿರೂಪಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

