ವಿಜಯಪುರ: ತೀವ್ರ ಅನಾರೋಗ್ಯಕ್ಕೆ ತುತ್ತಾಗಿರುವ ಅತಾಲಟ್ಟಿ ಗ್ರಾಮದ ಬಿಜೆಪಿಯ ಕಾರ್ಯಕರ್ತ ಮಹಾದೇವಪ್ಪನನ್ನು ಕರೆತಂದು ನಗರದ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಾಖಲಿಸಿ ಅವರ ಚಿಕಿತ್ಸೆಯ ವೆಚ್ಚವನ್ನು ಶಾಸಕ ಬಸನಗೌಡ ಪಾಟೀಲ ಯತ್ನಾಳ ಭರಿಸಿ ಮಾನವೀಯತೆ ಮೆರೆದಿದ್ದಾರೆ.
ಈ ಕುರಿತು ಕೃತಜ್ಞತೆಯಿಂದ ಕಾರ್ಯಕರ್ತ ಮಹಾದೇವಪ್ಪ ಆಹೇರಿ ಪತ್ರಿಕೆಯೊಂದಿಗೆ ಮಾತನಾಡಿ, “ನಾನು ಶಾಸಕ
ಬಸನಗೌಡರ ಬೆಂಬಲಿಗನಾಗಿ ಇಲ್ಲಿಯವರೆಗೂ ದುಡಿದಿದ್ದೇನೆ. ಬೆಂಬಲಿಗರನ್ನು ಕೇವಲ ಕೆಲಸಕ್ಕಾಗಿ ಮಾತ್ರ ಉಪಯೋಗಿಸುವ ಗುಣ ಗೌಡರಲ್ಲಿ ಇಲ್ಲ. ಅದಕ್ಕೆ ನಾನೇ ಸಾಕ್ಷಿ. ವಿಪರೀತ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ನನ್ನನ್ನು ಇಲ್ಲಿಗೆ ಕರೆತಂದು ಉಪಚಾರ ಮಾಡಿಸುತ್ತಿರುವುದು ಮತ್ತು ನನ್ನ ಚಿಕಿತ್ಸೆಯನ್ನು ಸಂಪೂರ್ಣವಾಗಿ ಉಚಿತಗೊಳಿಸಿರುವ ಅವರ ಪ್ರೀತಿಗೆ ನಾನು ಏನು ಹೇಳಿದರು ಕಡಿಮೆಯೇ” ಎಂದು ಭಾವೋದ್ವೇಗದಿಂದ ಮಹಾದೇವಪ್ಪ ಹೇಳುವಾಗ ಅವರ ಕಣ್ಣಂಚು ಹಸಿಯಾಗಿತ್ತು.
ಇವರ ಆರೋಗ್ಯದ ಕುರಿತು ಮಾಹಿತಿ ನೀಡಿದ ಜೆಎಸ್‌ಎಸ್ ಆಸ್ಪತ್ರೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಶರಣ ಮಳಖೇಡ್ಕರ್ ಅವರು, “ಸಧ್ಯಕ್ಕೆ ಮಹಾದೇವಪ್ಪ ಅವರ ಆರೋಗ್ಯ ಸ್ಥಿರವಾಗಿದ್ದು, ಅಗತ್ಯತೆಯುಳ್ಳ ಎಲ್ಲ ರೀತಿಯ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಅವಶ್ಯಕವಿರುವ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಬಸನಗೌಡರ ಆಸೆಯಂತೆ ಅವರು ಗುಣಮುಖರಾಗುವವರೆಗೂ ನಮ್ಮ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು” ಎಂದು ತಿಳಿಸಿದರು.


