ಸಂಸ್ಕೃತ ಪಾಠಶಾಲಾ ಶಿಕ್ಷಕರಿಗೆ ವಿಶೇಷ ತರಬೇತಿ ಸೇತುಬಂಧ ೨೦೨೩-೨೪ನೆಯ ಸಾಲಿನ ಪುನಶ್ಚೇತನ ಶಿಬಿರ ಉದ್ಘಾಟನೆ
ಸಿಂದಗಿ: ಸಂಸ್ಕೃತ ಅಧ್ಯಯನದಿಂದ ಸಂಸ್ಕಾರ ಉಂಟಾಗುತ್ತದೆ. ಸಂಸ್ಕೃತ ಭಾಷೆ ಸಾಮಾನ್ಯ ಭಾಷೆಯಲ್ಲ. ಈ ಭಾಷೆ ದೇಶದೊಳಗೆ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಪ್ರಸಿದ್ಧವಾಗಿದೆ ಎಂದು ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.
ಪಟ್ಟಣದ ಸಾತವೀರೇಶ್ವರ ಸಭಾಭವನದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಬೆಂಗಳೂರಿನ ಸಂಸ್ಕೃತ ನಿರ್ದೇಶನಾಲಯ ಹಾಗೂ ಶ್ರೀ ಪದ್ಮರಾಜ ಸಂಸ್ಕೃತ ವೇದ ಪಾಠಶಾಲೆಯ ಸಹಯೋಗದಲ್ಲಿ ಸಂಸ್ಕೃತ ಪಾಠಶಾಲಾ ಶಿಕ್ಷಕರಿಗೆ ವಿಶೇಷ ತರಬೇತಿ ಸೇತುಬಂಧ ೨೦೨೩-೨೪ನೆಯ ಸಾಲಿನ ಪುನಶ್ಚೇತನ ಶಿಬಿರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಸ್ಕೃತವು ವಿಶ್ವದಲ್ಲೇ ಮಾನ್ಯವಾದದ್ದು, ಸಂಸ್ಕಾರದಿಂದಲೇ ಜ್ಞಾನ ಸಿಗುವಂತಾಗಿದೆ. ಭಾರತೀಯ ಶ್ರೇಷ್ಠ ಗ್ರಂಥಗಳಾದ ಭಗವದ್ಗೀತೆ, ರಾಮಾಯಣ, ಮಹಾಭಾರತದಂತಹ ಎಲ್ಲ ಮಹಾಕಾವ್ಯಗಳ ಮೂಲ ಸಂಸ್ಕೃತವೇ ಆಗಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಸಂಸ್ಕೃತವು ಪ್ರಪಂಚದ ಅತ್ಯಂತ ಹಳೆಯ ಭಾಷೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಂತಹ ಸಂಸ್ಕೃತವನ್ನು ತಿಳಿಸಿಕೊಡುವ ಶಿಕ್ಷಕರ ಪುನಶ್ಚೇತನ ಶಿಬಿರ ಸಂಪನ್ನವಾಗಲಿ ಎಂದರು.
ಈ ವೇಳೆ ಸಂಸ್ಕೃತ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಪಾಲಯ್ಯ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಂಸ್ಕೃತ ಭಾರತಿ ಅಖಿಲ ಭಾರತೀಯ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ, ಸಿಂದಗಿ ತಾಲೂಕು ದಂಡಾಧಿಕಾರಿ ಪ್ರದೀಪಕುಮಾರ ಹಿರೇಮಠ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಂಸ್ಕೃತ ಭಾರತಿ ಉತ್ತರ ಕರ್ನಾಟಕ ಪ್ರಾಂತ್ಯಾಧ್ಯಕ್ಷ ಜಿ.ಆರ್. ಅಂಬಲಿ, ಸಂಯೋಜಕ ಡಾ.ಮಲ್ಲನಗೌಡ ಎಸ್. ಸಂಸ್ಥೆಯ ಸಹ ನಿರ್ದೇಶಕ ಅಶೋಕ ವಾರದ ವೇದಿಕೆ ಮೇಲಿದ್ದರು.
ಕಾರ್ಯಕ್ರಮದಲ್ಲಿ ಮೈಸೂರ ವಲಯದ ವಿಷಯ ಪರಿವೀಕ್ಷಕ ಮಲ್ಲಣ್ಣ, ಮಲ್ಲೇಶ ಕಲ್ಮೇಶ, ಜಗದೀಶ ಕರೆಪ್ಪನವರ, ಬಿ.ಬಿ.ಆರೇರ, ಚನ್ನು ಕತ್ತಿ ಸೇರಿದಂತೆ ಸಂಸ್ಕೃತ ಪಾಠಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

