ವಿಜಯಪುರದ ರಾಜಗುರು ಫುಡ್ಸ್ ಗೋದಾಮು | ಮೃತ ಕುಟುಂಬಗಳಿಗೆ ರೂ.೨ಲಕ್ಷ ಪರಿಹಾರ | ೫೦ ಕಾರ್ಮಿಕರು ಪ್ರಾಣಾಪಾಯದಿಂದ ಪಾರು
ವಿಜಯಪುರ: ತಾಲೂಕಿನ ಅಲಿಯಾಬಾದ ಕೈಗಾರಿಕಾ ಪ್ರದೇಶದಲ್ಲಿ ರಾಜಗುರು ಫುಡ್ಸ್ ವ್ಯಾಪಾರ ಕೇಂದ್ರದ ಮೆಕ್ಕೆಜೋಳ ಸಂಸ್ಕರಣ ಘಟಕದ ಗೋದಾಮಿನಲ್ಲಿ ಸೋಮವಾರ ಸಂಜೆ ನಡೆದ ದುರಂತದಲ್ಲಿ ಒಟ್ಟು ಏಳು ಜನ ಕಾರ್ಮಿಕರು ದುರ್ಮರಣಕ್ಕೀಡಾಗಿದ್ದಾರೆ.
ದುರಂತದಲ್ಲಿ ಸಾವಿಗೀಡಾದ ಕಾರ್ಮಿಕರೆಲ್ಲರೂ ಬೀಹಾರ ಮೂಲದವರಾಗಿದ್ದು ದುರ್ಘಟನೆ ಸಂಭವಿಸಿದ ಬಳಿಕ ಉರುಳಿಬಿದ್ದ ನೂರಾರು ಮೆಕ್ಕೆಜೋಳದ ಚೀಲಗಳಡಿ ಈ ಕಾರ್ಮಿಕರು ಸಿಲುಕಿಕೊಂಡ ಕಾರಣ ಅವರೆಲ್ಲ ಉಸಿರು ಚೆಲ್ಲಿದ್ದಾರೆ.
*ಘಟನೆಯ ವಿವರ*
ಈ ಸಂಸ್ಕರಣ ಘಟಕದ ಗೋದಾಮಿನಲ್ಲಿ ೪೦ ರಿಂದ ೫೦ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, ಈ ಕೇಂದ್ರದಲ್ಲಿ ಅವಶ್ಯಕತೆಯನುಸಾರ ೧೦೦ ರಿಂದ ೧೫೦ ಕಾರ್ಮಿಕರನ್ನು ಗುತ್ತಿಗೆ ಪಡೆಯಲಾಗುತ್ತದೆ. ಡಿ೪ರಂದು ಸಂಜೆ ೫ ಗಂಟೆಗೆ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಮೆಕ್ಕೆಜೋಳ ತುಂಬಿರುವ ಒಂದು ಟ್ಯಾಂಕ್ ಸರಣಿ ಕಂಬ ಮುರಿದು ಬಿದ್ದಿದ್ದು, ಕಾರ್ಮಿಕರು ಭಯಭೀತರಾಗಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಅಂದಾಜು ೫೦ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ೮ ಜನ ಕಾರ್ಮಿಕರಿಗೆ ಅಲ್ಲಿಂದ ಪಾರಾಗಲು ಸಾಧ್ಯವಾಗದ ಕಾರಣ, ಮೆಕ್ಕೆಜೋಳದ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ.
ಘಟನೆ ಕುರಿತು ಸಂಜೆ ೬ ಗಂಟೆಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಸ್ಥಳಕ್ಕೆ ಅಗ್ನಿಶಾಮಕ, ಮಹಾನಗರಪಾಲಿಕೆ ಪೋಲಿಸ್ ಸಿಬ್ಬಂದಿಯೊಂದಿಗೆ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ. ಸುಮಾರು ೨ ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಓರ್ವ ವ್ಯಕ್ತಿಯನ್ನು ರಕ್ಷಿಸಿ ಅವರನು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೊಳಪಡಿಸಿದ್ದಾರೆ. ನಂತರ ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ತಂಡಗಳು ಆಗಮಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದು, ಅಂದಾಜು ೧೨ ಗಂಟೆಗಳ ಕಾಲ ನಡೆದ ಈ ಕಾರ್ಯಾಚರಣೆಯಲ್ಲಿ ಸಿಲುಕಿಕೊಂಡಿರುವ ೭ ಮೃತ ದೇಹಗಳನ್ನು ಹೊರತೆಗೆಯಲಾಗಿದೆ.
ಮೃತ ದೇಹಗಳನ್ನು ಹತ್ತಿರದ ವಿಮಾನ ನಿಲ್ಧಾಣದಿಂದ ಏರ್ ಲಿಪ್ಟ್ ಮಾಡಿ ಪಾಟ್ನಾ ವಿಮಾನ ನಿಲ್ಧಾಣಕ್ಕೆ ತಲುಪಿದ ನಂತರ ಮೃತ ದೇಹಗಳನ್ನು ಮೃತರ ಮನೆಯವರೆಗೆ ತಲುಪಿಸವ ವ್ಯವಸ್ಥೆಯನ್ನು ಮಾಡಲಾಗಿದೆ. ಸದರಿ ಕಾರ್ಯಾಚರಣೆಯಲ್ಲಿ ಜೆಸಿಬಿ ಮತ್ತು ಹಿಟಾಚಿಗಳನ್ನು ಬಳಸಲಾಗಿದ್ದು, ೨೪ ಜನ ಬೆಳಗಾವಿಯಿಂದ ಹಾಗೂ ೨೬ ಜನ ಕಲಬುರಗಿಯಿಂದ ಎಸ್‌ಡಿಆರ್‌ಎಫ್ ತಂಡಗಳು, ೩೦ಜನರನ್ನೊಳಗೊಂಡ ಮಹಾರಾಷ್ಟ್ರದ ಪುಣೆಯಿಂದ ಎನ್‌ಡಿಆರ್‌ಎಫ್ ತಂಡ ಭಾಗವಹಿಸಿತ್ತು.
*ಸಚಿವರಿಂದ ಶ್ರದ್ಧಾಂಜಲಿ*
ಬೃಹತ್ ಹಾಗೂ ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರಾದ ಡಾ.ಎಂ.ಬಿ.ಪಾಟೀಲ ಅವರು ಮಂಗಳವಾರ ನಗರದ ಸರ್ಕಾರಿ ಆಸ್ಪತ್ರೆ ಆವರಣಕ್ಕೆ ತೆರಳಿ ವಿಜಯಪುರ ಗೋದಾಮಿನ ದುರಂತದಲ್ಲಿ ಸಾವನ್ನಪ್ಪಿದವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.
*ಸಚಿವರಿಂದ ಪ್ರಶಂಸೆ ಪತ್ರ*
ರಾಜಗುರು ಫುಡ್ಸ್ ಗೋದಾಮಿನಲ್ಲಿ ನಡೆದ ದುರಂತದಲ್ಲಿ ರಕ್ಷಣಾ ಕಾರ್ಯಾಚರಣೆ ಕೈಗೊಂಡ ಡೆಪ್ಯೂಟಿ ಕಮಾಂಡೆಂಟರ್ ಆರ್.ಅರವಿಂದ ನೇತೃತ್ವದ ಬೆಳಗಾವಿ ಹಾಗೂ ಡೆಪ್ಯೂಟಿ ಕಮಾಂಡೆಂಟ್ ಸಲಾವುದ್ದೀನ್ ನೇತೃತ್ವದ ಕಲ್ಬುರ್ಗಿ ಎಸ್‌ಡಿಆರ್‌ಎಫ್ ತಂಡ ಹಾಗೂ ಅನೀಲ ತಾಲಕೋಟ್ರಾ ನೇತೃತ್ವದ ಎನ್‌ಡಿಆರ್‌ಎಫ್ ತಂಡ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಋಷಿಕೇಶ ಸೊನಾವನೆ, ಮಹಾನಗರ ಪಾಲಿಕೆ ಆಯುಕ್ತ ಬದ್ರೂದ್ದಿನ್ ಸೌದಾಗರ, ಜಿಲ್ಲಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಶಿವಾನಂದ ಮಾಸ್ತಿಹಳ್ಳಿ, ಜಿಲ್ಲಾ ಆರೋಗ್ಯಾಧಿಕಾರಿ ಬಸವರಾಜ ಹುಬ್ಬಳ್ಳಿ, ಕಂದಾಯ ಇಲಾಖೆ ಉಪವಿಭಾಗಾಧಿಕಾರಿಗಳು, ತಹಶೀಲ್ದಾರರಿಗೆ, ಬಿಎಲ್‌ಡಿಇ ಫಾರೆನ್ಸಿಕ್ ಎಚ್‌ಓಡಿ ಸೇರಿದಂತೆ ರಕ್ಷಣಾ ಕಾರ್ಯದಲ್ಲಿ ಕೈ ಜೋಡಿಸಿದ ಎಲ್ಲ ಇಲಾಖೆ ಸಿಬ್ಬಂದಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ.ಪಾಟೀಲ ಅವರು ಕೃತಜ್ಞತೆ ಸಲ್ಲಿಸಿ ಪ್ರಶಂಸೆ ಪತ್ರ ನೀಡಿದರು.

