ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ | ಜಮೀನು ಕಳೆದುಕೊಂಡ ರೈತರಿಗಿಲ್ಲ ಪರಿಹಾರ
ವಿಜಯಪುರ: ಜಿಲ್ಲೆಯ ತಿಕೋಟಾ ತಾಲೂಕಿನಲ್ಲಿ ನಡೆದ ತುಬಚಿ- ಬಬಲೇಶ್ವರ ಏತ ನೀರಾವರಿಯು ೨೦೧೯-೨೦೨೦ ನೇ ಸಾಲಿನಲ್ಲಿ ಕಾಮಗಾರಿ ಮುಗಿದು ಸುಮಾರು ೩-೪ ವರ್ಷಗಳೇ ಕಳೆದರು ಇಲ್ಲಿಯವರೆಗೆ ರೈತರಿಗೆ ಬರಬೇಕಾದ ಪರಿಹಾರ ಇನ್ನು ಬಂದಿಲ್ಲವೆಂದು ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಕೂಡಲೇ ಪರಿಹಾರ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು.
ಹೊನವಾಡ ಒಂದೇ ಗ್ರಾಮದಲ್ಲಿ ಸುಮಾರು ೧೦೦೦ ಕ್ಕೂ ಅಧಿಕ ಜಮೀನು ಕಳೆದುಕೊಂಡ ರೈತರಿಗೆ ಪರಿಹಾರ ಬಂದಿರುವುದಿಲ್ಲ, ಅಧಿಕಾರಿಗಳಿಗೆ ಕೇಳಿದರೆ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ಅಲ್ಲಿ ಹೋಗಿ, ಇಲ್ಲಿ ಹೋಗಿ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ, ಗುತ್ತಿಗೆ ಹಿಡಿದವರು ತಮ್ಮ ಕೆಲಸ ಮುಗಿಸುವ ವೇಳೆ ರೈತರೊಂದಿಗೆ ಚೆನ್ನಾಗಿ ಮಾತನಾಡಿ ಈಗ ಕೆಲಸ ಮುಗಿಸಿಕೊಂಡು ಹೋಗಿದ್ದಾರೆ, ಅವರಿಗೆ ಕೇಳಿದರೆ ಅಧಿಕಾರಿಗಳಿಗೆ ಕೇಳಿ ಎಂದು ತಪ್ಪಿಸಿಕೊಳ್ಳುತ್ತಿದ್ದಾರೆ.
ಆದ್ದರಿಂದ ಕೂಡಲೇ ಸಂಬಂಧಿಸಿದ ಅಧಿಕಾರಿಗಳನ್ನು ಕರೆದು ಇಲ್ಲಿಯವರೆಗೆ ಕೇವಲ ಭೂ ಸ್ವಾಧೀನದ ೪(೧) ಪೋರಂ ನೀಡಿ, ಮುಂದಿನ ಯಾವುದೇ ಕ್ರಮ ಕೈಗೊಂಡಿಲ್ಲ, ಅವರನ್ನು ಮುಂದಿನ ಕ್ರಮಕ್ಕೆ ಮಾರ್ಗದರ್ಶನ ನೀಡಿ ಎಂದು ಜಿಲ್ಲಾಧಿಕಾರಿಗಳ ಪರವಾಗಿ ತಹಶಿಲ್ದಾರ ಎಂ.ಕೆ.ದೇಸಾಯಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಈ ವೇಳೆ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ ಕುಬಕಡ್ಡಿ, ಜಿಲ್ಲಾಧ್ಯಕ್ಷ ಸಂಗಮೆಶ ಸಗರ, ಜಿಲ್ಲಾ ಗೌರವಾಧ್ಯಕ್ಷ ಕಲ್ಲಪ್ಪ ಪಾರಶೆಟ್ಟಿ, ಜಿಲ್ಲಾ ಸಂಚಾಲಕ ರಾಮನಗೌಡ ಪಾಟೀಲ, ಸಂಚಾಲಕ ಪ್ರತಾಪ ನಾಗರಗೋಜಿ, ಜಿಲ್ಲಾ ಸಂಚಾಲಕ ನಜೀರ ನಂದರಗಿ, ತಿಕೋಟಾ ಸಂಚಾಲಕ ಶಾನುರ ನಂದರಗಿ, ಅಭಿಷೇಕ ಹೂಗಾರ, ಶಶಿಕಾಂತ ಬಿರಾದಾರ, ಖಾದರಸಾಬ ವಾಲಿಕಾರ, ಗುರುಲಿಂಗ ಕಾಳಿ, ಇಲಾಯೀ ವಾಲಿಕಾರ, ಆಕಾಶ ಜಾನವರ, ರಾಮು ಗೌರಗುಂಡ, ರಾಜಕುಮಾರ ಹಿರೇಕುರಬರ, ಸುದಾಕರ ನಲವಡೆ, ರಿಯಾಜ್ ವಾಲಿಕಾರ, ಸೇರಿದಂತೆ ಅನೇಕರು ಇದ್ದರು.

