ವಿಜಯಪುರದ ರಾಜಗುರು ಇಂಡಸ್ಟ್ರೀಜ್ ಗೋದಾಮು | ಕೆಐಡಿಬಿ ವಸಾಹತು ಪ್ರದೇಶ | ಬೀಹಾರ ಮೂಲದ ಕಾರ್ಮಿಕರು
ವಿಜಯಪುರ: ಮೆಕ್ಕೆಜೋಳಗಳನ್ನು ತುಂಬಿಡಲಾಗಿದ್ದ ಗೋಣಿ ಚೀಲಗಳು ಕುಸಿದ ಪರಿಣಾಮ ಸುಮಾರು ಹತ್ತಾರು ಜನರು ಸಿಲುಕಿಕೊಂಡಿರುವ ಘಟನೆ ಗುಮ್ಮಟ ನಗರಿ ವಿಜಯಪುರ ನಗರದ ಹೊರವಲಯದಲ್ಲಿರುವ ಕೆ ಐ ಡಿ ಬಿ ವಸಾಹತು ಪ್ರದೇಶದಲ್ಲಿ ನಡೆದಿದೆ.
ಖ್ಯಾತ ರಾಜಗುರು ಇಂಡಸ್ಟ್ರೀಜ್ ಗೋದಾಮಿನಲ್ಲಿ ಈ ಘಟನೆ ನಡೆದಿದ್ದು, ಸುಮಾರು 10ಕ್ಕೂ ಹೆಚ್ಚು ಜನ ಸಿಲುಕಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ರಾಜಗುರು ಫುಡ್ ಪ್ರೊಸೆಸಿಂಗ್ ಯುನಿಟ್ ನಲ್ಲಿ ಈ ಘಟನೆ ನಡೆದಿದೆ. ಇಲ್ಲಿ ಸಂಗ್ರಹಿಸಿ ಇಡಲಾಗಿದ್ದ ಮೆಕ್ಕೆಜೋಳದ ಚೀಲಗಳ ಮೇಲೆ ಬೃಹತ್ ಯಂತ್ರ ಬಿದ್ದಿದೆ. ಆಗ ಈ ಚೀಲಗಳು ಕುಸಿದು ಬಿದ್ದ ಪರಿಣಾಮ ಅಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಕಾರ್ಮಿಕರು ಅದರ ಕೆಳಗಡೆ ಸಿಲುಕಿದ್ದಾರೆ.
ಕಳೆದ ಹಲವು ವರ್ಷಗಳಿಂದ ಈ ಇಂಡಸ್ಟ್ರೀಜ್ ನಲ್ಲಿ ನಾನಾ ಕಡೆಗಳಿಂದ ಆಗಮಿಸಿರುವ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಸಂಜೆ ವೇಳೆ ಏಕಾಏಕಿ ನಡೆದ ಘಟನೆಯಿಂದಾಗಿ ಈ ಪ್ರದೇಶದಲ್ಲಿ ಆತಂಕದ ವಾತಾವರಣ ಉಂಟಾಗಿದೆ. ಘಟನೆಯ ಬಳಿಕ ನಾಲ್ಕು ಜೆಸಿಬಿ ಗಳಿಂದ ಮೆಕ್ಕೆಜೋಳವನ್ನು ಪಕ್ಕಕ್ಕೆ ಸರಿಸಿ ಕಾರ್ಮಿಕರ ರಕ್ಷಣಾ ಕಾರ್ಯ ನಡೆಯುತ್ತಿದೆ.

