ವಿಜಯಪುರ: ಬಿ.ಎಲ್.ಡಿ.ಇ ಡಿಯು- ಡೆಕಾ ಲೇಸರ್ ಅಕ್ಯಾಡೆಮಿಯನ್ನು ಅಂತಾರಾಷ್ಟ್ರೀಯ ಸಂಸ್ಥೆಯನ್ನಾಗಿ ಮಾಡಲು ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ನಗರದ ಬಿ.ಎಲ್.ಡಿ.ಇ ಟ್ರಾಮಾ ಸೆಂಟರ್ ನಲ್ಲಿ ದೇಶದಲ್ಲಿಯೇ ಇದೇ ಮೊದಲ ಬಾರಿಗೆ ಬಿ.ಎಲ್.ಡಿ.ಇ ಡಿಯು- ಡೆಕಾ ಲೇಸರ್ ಅಕ್ಯಾಡೆಮಿ ಉದ್ಘಾಟಿಸಿ ಅವರು ಮಾತನಾಡಿದರು.
ಇಟಲಿ ಮೂಲದ ಡೆಕಾ ಲೇಸರ್ ಕಂಪನಿ ಮತ್ತು ಬಿ.ಎಲ್.ಡಿ.ಇ ಆಸ್ಪತ್ರೆಯ ಚರ್ಮರೋಗ ವಿಭಾಗದ ಸಹಯೋಗದಲ್ಲಿ ದೇಶದಲ್ಲಿಯೇ ಇದೇ ಮೊದಲ ಬಾರಿಗೆ ಈ ಅಕ್ಯಾಡೆಮಿ ಆರಂಭವಾಗಿದೆ. ಡಾ ಅರುಣ ಚಂ.ಇನಾಮದಾರ ಅವರು ಆರೋಗ್ಯ ಕ್ಷೇತ್ರದಲ್ಲಿ ವಿಜಯಪುರ ಜಿಲ್ಲೆಯ ಕೀರ್ತಿಯನ್ನು ವಿಶ್ವಕ್ಕೆ ಪಸರಿಸುವ ಕೆಲಸ ಮಾಡಿದ್ದಾರೆ. ಈ ಅಕ್ಯಾಡೆಮಿ ಸ್ಥಾಪನೆಯಿಂದ ಉಭಯ ದೇಶಗಳ ಮಧ್ಯೆ ಚರ್ಮರೋಗ ಮತ್ತು ಲೇಸರ್ ತಂತ್ರಜ್ಞಾನದ ಬಳಕೆಯ ಬಗ್ಗೆ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಹೊಸ ಸಂಶೋಧನೆಯ ಜೊತೆಗೆ ರೋಗಿಗಳಿಗೆ ಉಪಯುಕ್ತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಸಾಕಷ್ಟು ಅನುಕೂಲವಾಗಲಿದೆ. ಇದರ ಕಾರ್ಯವ್ಯಾಪ್ತಿಯನ್ನು ಅಂತಾರಾಷ್ಟ್ರಿಯ ಮಟ್ಟಕ್ಕೆ ವಿಸ್ತರಿಸಲು ಸಕಲ ನೆರವು ನೀಡಲಾಗುವುದು. ಅಗತ್ಯಕ್ಕೆ ತಕ್ಕಂತೆ ಕೈಗೊಳ್ಳಬೇಕಿರುವ ಕ್ರಮಗಳು, ಅಳವಡಿಸಬೇಕಿರುವ ತಂತ್ರಜ್ಞಾನಗಳನ್ನು ಹೊಂದಲು ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಬಿ.ಎಲ್.ಡಿ.ಇ ಡೀಮ್ಡ್ ವಿವಿ ದೇಶದಲ್ಲಿ ಆರೋಗ್ಯ ಕ್ಷೇತ್ರಮಾತನಾಡಿದರವ ಪ್ರಮುಖ ಮತ್ತು ಮುಂಚೂಣಿ ವಿವಿಗಳಲ್ಲಿ ಒಂದಾಗಿದೆ. ಈ ಅಕ್ಯಾಡೆಮಿ ಸ್ಥಾಪನೆ ನಮ್ಮ ವಿವಿ ಹೊಸ ಮೈಲುಗಲ್ಲು ಸ್ಥಾಪಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಆರೋಗ್ಯ ಕ್ಷೇತ್ರದಲ್ಲಿ ಈಗ ಬಿ.ಎಲ್.ಡಿ.ಇ ಸಂಸ್ಥೆಯೊಂದಿಗೆ ಇಟಲಿಯ ಡೆಕಾ ಲೇಸರ್ ಕಂಪನಿ ಒಡಂಬಡಿಕೆ ಮಾಡಿಕೊಂಡಿದೆ. ಇದೇ ರೀತಿ ಪ್ರವಾಸಿ ತಾಣಗಳ ಕಣಜವಾಗಿರುವ ವಿಜಯಪುರ ಮತ್ತು ದೇಶದ ನಾನಾ ರಾಜ್ಯಗಳ ಪ್ರಾಚೀನ ಸ್ಮಾರಕಗಳು ಹಾಗೂ ಇನ್ನಿತರ ತಾಣಗಳಗಳ ಕುರಿತು ಒಪ್ಪಂದ ಮಾಡಿಕೊಂಡರೆ ಭಾರತ ಮತ್ತು ಇಟಲಿ ಎರಡೂ ದೇಶಗಳಲ್ಲಿ ಪ್ರವಾಸೋದ್ಯಮಕ್ಕೂ ಪ್ರೋತ್ಸಾಹ ನೀಡಿದಂತಾಗುತ್ತದೆ. ನೀವು ಇಟಲಿ ಸರಕಾರದ ಜೊತೆ ಈ ಕುರಿತು ಚರ್ಚಿಸಿ. ನಾನೂ ಕೂಡ ರಾಜ್ಯ ಮತ್ತು ಕೇಂದ್ರ ಸರಕಾರಗಳ ಜೊತೆ ಈ ಕುರಿತು ಮನವರಿಕೆ ಮಾಡಿಕೊಡುತ್ತೇನೆ. ಪ್ರಧಾನಿಗೂ ಈ ಕುರಿತು ಮಾಹಿತಿ ನೀಡುತ್ತೇನೆ. ಈ ಮೂಲಕ ಇನ್ನಿತರ ಕ್ಷೇತ್ರಗಳಲ್ಲೂ ವಿನಿಮಯ ನಡೆದರೆ ದೇಶದ ಜಿಡಿಪಿ ಅಭಿವೃದ್ಧಿಗೂ ಕೊಡುಗೆ ನೀಡಬಹುದು ಎಂದು ಎಂ. ಬಿ. ಪಾಟೀಲ ತಿಳಿಸಿದರು.
ಇಟಲಿಯ ಡೆಕಾ ಲೇಸರ್ ಕಂಪನಿಯ ಜನರಲ್ ಮ್ಯಾನೇಜರ್ ಪಾಲೊ ಸ್ಯಾಲ್ವೆನಿಯೊ ಮಾತನಾಡಿ, ಬೇರೆ ದೇಶಗಳಲ್ಲಿ ಇಂಥ ಒಡಂಬಡಿಕೆಗೆ ಬೇಡಿಕೆ ಬಂದಿದ್ದರೂ, ವಿಜಯಪುರದ ಬಿ.ಎಲ್.ಡಿ.ಇ ಸಂಸ್ಥೆ ಮತ್ತು ಡೀಮ್ಡ್ ವಿವಿ ಸಮಕುಲಪತಿ ಡಾ. ಅರುಣ ಚಂ. ಇನಾಮದಾರ ಅವರ ಸೇವಾಶ್ರದ್ಧೆ, ಸಂಶೋಧನೋತ್ಸಾಹ ಹಾಗೂ ಈ ಕೇತ್ರದ ಬಗ್ಗೆ ಅವರಿಗಿರುವ ನಿಜವಾದ ಕಳಕಳಿಗೆ ಮನಸೋತಿದ್ದೇನೆ. ಅಷ್ಟೇ ಅಲ್ಲ, ನಾನು ಭಾರತವನ್ನು ಹೆಚ್ಚಾಗಿ ಇಷ್ಟಪಡುತ್ತೇನೆ. ಇಲ್ಲಿನ ಸಂಶೋಧನೆ ಕ್ಷೇತ್ರದಲ್ಲಿ ಗುಣನಾತ್ಮಕ ಸ್ಪರ್ಧೆ ನಡೆಯುತ್ತದೆ. ಹೀಗಾಗಿ ಈ ಒಪ್ಪಂದಕ್ಕೆ ಮಾಡಿಕೊಂಡಿದ್ದು, ಇದು ನನ್ನ ಜೀವನದಲ್ಲಿ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಗಿದೆ. ಮುಂಬರುವ ದಿನಗಳಲ್ಲಿ ಜಂಟಿಯಾಗಿ ಚರ್ಮರೋಗ ಕ್ಷೇತ್ರಕ್ಕೆ ಮತ್ತಷ್ಟು ಕೊಡುಗೆ ನೀಡಲು ಉತ್ಸುಕನಾಗಿದ್ದೇನೆ ಎಂದು ತಿಳಿಸಿದರು.
ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್. ಎಸ್. ಮುಧೋಳ ಮಾತನಾಡಿದರು.
ಈ ಸಂದರ್ಭದಲ್ಲಿ ದೇಶದ ನಾನಾ ಭಾಗಗಳಿಂದ ಆಗಮಿಸಿದ್ದ ಚರ್ಮರೋಗ ಖ್ಯಾತ ತಜ್ಞರನ್ನು ಸಚಿವ ಎಂ. ಬಿ. ಪಾಟೀಲ ಸನ್ಮಾನಿಸಿದರು.
ಈ ಕಾರ್ಯಕ್ರಮದಲ್ಲಿ ಬಿ. ಎಲ್. ಡಿ. ಡೀಮ್ಡ್ ವಿವಿಯ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ರಜಿಸ್ಟ್ರಾರ್ ಡಾ. ಆರ್. ವಿ. ಕುಲಕರ್ಣಿ, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ, ಉಪಪ್ರಾಚಾರ್ಯ ಡಾ. ಎಂ. ಬಿ. ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
ಪ್ರಾಚಾರ್ಯ ಡಾ. ಅರವಿಂದ ಪಾಟೀಲ ಸ್ವಾಗತಿಸಿದರು. ಅಕಾಂಕ್ಷಾ ಸಾರವಾಡ ಪ್ರಾರ್ಥಿಸಿದರು. ಶ್ರುತಿ ಕುಲಕರ್ಣಿ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

