ತನು ಫೌಂಡೇಶನ್‌ವತಿಯಿಂದ ಕನ್ನಡ ರಾಜ್ಯೋತ್ಸವ | ಸಾಧಕರಿಗೆ ‘ತನು ಕನ್ನಡ-ಮನ ಕನ್ನಡ ರಾಜ್ಯ ಪ್ರಶಸ್ತಿ’ ಪ್ರದಾನ
ವಿಜಯಪುರ: ನಾವು ನವ್ಹೆಂಬರ್ ಕನ್ನಡಿಗರಾಗಬಾರದು, ನಿರಂತರ ಕನ್ನಡಿಗರಾಗಬೇಕು. ಕನ್ನಡವನ್ನು ನಾವೆಲ್ಲಾ ಮಾತನಾಡುತ್ತಾ, ಆಡಳಿತದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಇಂದು ನಾವು ಕನ್ನಡವನ್ನು ಉಳಿಸಬೇಕಾಗಿದೆ ಎಂದು ಕಮಾಂಡೆಂಟ್ ಐಆರ್‌ಬಿ ಮುಖ್ಯಸ್ಥ ಎನ್.ಬಿ.ಮೆಳ್ಳೆಗಟ್ಟೆ ಹೇಳಿದರು.
ನಗರದ ಶ್ರೀ ಕಂದಗಲ್ಲ ಹಣಮಂತರಾಯ ರಂಗಮಂದಿರದಲ್ಲಿ ನಡೆದ ತನು ಫೌಂಡೇಶನ್ ವಿಜಯಪುರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ, ಕನ್ನಡ ರಾಜ್ಯೋತ್ಸವದ ಪ್ರಯುಕ್ತ ‘ಕನ್ನಡ ಸಿರಿಗನ್ನಡ’ ಕಾರ್ಯಕ್ರಮ ಹಾಗೂ ‘ತನು ಕನ್ನಡ ಮನ ಕನ್ನಡ’ ರಾಜ್ಯ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡಕ್ಕಿರುವ ಶ್ರೀಮಂತಿಕೆ, ಅದರ ಸಂಸ್ಕೃತಿಗಿರುವ ತಾಕತ್ತು ಶಾಶ್ವತವಾಗಿದೆ. ಇಂಗ್ಲೀಷ್ ನ ವ್ಯಾಮೋಹ ಬಿಟ್ಟು ಕನ್ನಡಕ್ಕೆ ಆದ್ಯತೆ ಕೊಡಬೇಕು. ವ್ಯವಹಾರಕ್ಕಾಗಿ ಮಾತ್ರ ಬೇರೆ ಭಾಷೆ ಇರಲಿ, ಮನಸ್ಪೂರ್ವಕವಾಗಿ ಕನ್ನಡ ಮಾತ್ರ ಇರಲಿ ಎಂದು ತಿಳಿಸಿದರು.
ಅನ್ಯಭಾಷಿಕರಿಗೆ ನಮ್ಮ ಕನ್ನಡ ಕಲಿಸುವ ಪರಿಪಾಠ ಆಗಬೇಕಿದೆ. ಕರ್ನಾಟಕದ ಏಕೀಕರಣದ ಮಹತ್ವವನ್ನು ನಾವು ಇಂದು ಅರಿಯುವುದು ಮಹತ್ವದ್ದಾಗಿದೆ. ಸಾಹಿತಿಗಳ ಬರಹಗಳನ್ನು ಇಂದಿನ ಯುವಕರು ಓದಬೇಕಿದೆ, ಅಂದಾಗ ಮಾತ್ರ ನಮ್ಮ ಮುಂದಿನ ಪೀಳಿಗೆಗೆ ಕನ್ನಡ ಶ್ರೀಮಂತಿಕೆ, ಕನ್ನಡದ ಸೊಬಗನ್ನು ಉಳಿಸಿದಂತಾಗುತ್ತದೆ ಎಂದರು.
ತನು ಫೌಂಡೇಶನ್ ಕಾರ್ಯದರ್ಶಿ ಮಂಜುನಾಥ ಜುನಗೊಂಡ ಅವರು ಪ್ರಾಸ್ತಾವಿಕ ಮಾತನಾಡಿ, ಫೌಂಡೇಶನ್ ನಡೆದು ಬಂದ ಹಾದಿ, ಕನ್ನಡಕ್ಕಾಗಿ ನಿರಂತರವಾಗಿ ಸಲ್ಲಿಸುತ್ತಿರುವ ಸೇವೆಯ ಕುರಿತಾಗಿ ವಿವರಿಸಿದರು. ಅಲ್ಲದೇ ಕನ್ನಡ ಕಲೆ, ಸಾಹಿತ್ಯ, ಸಂಸ್ಕೃತಿಯ ಉಳಿವಿಗಾಗಿ ಶ್ರಮಿಸುತ್ತಿರುವ ಸೇವಕರನ್ನು ಗುರುತಿಸಿ ಪ್ರಶಸ್ತಿ ನೀಡುವ ಮೂಲಕ ಗೌರವ ಸಲ್ಲಿಸುತ್ತಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇನ್ನೋರ್ವ ಅತಿಥಿ ದೇವರಹಿಪ್ಪರಗಿಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಬೂಲ್ ಕೊಕಟನೂರ ಮಾತನಾಡಿ, ಜಿಲ್ಲೆ ಸೇರಿದಂತೆ ನಾಡಿನ ವಿವಿಧ ಸಾಧಕರನ್ನು ಗುರುತಿಸಿ ಕನ್ನಡ ಉಳಿಸುವ ಮನಸ್ಸುಗಳಿಗೆ ಪ್ರೋತ್ಸಾಹಿಸುತ್ತಿರುವ ತನು ಫೌಂಡೇಶನ್ ನ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದಂತಹ ಸಾಧಕರಾದ ಹೆಲೆನ್ ಮೈಸೂರು, ಪುಷ್ಪಾ ಹಿರೇಮಠ, ಡಾ. ಪ್ರವೀಣ ಬಗಲಿ, ವೀರೇಶ ವಾಲಿ, ವಿಜಯಕುಮಾರ ಮಮದಾಪುರ, ಡಾ. ಸುರೇಶ ಲೋಣಿ, ಮಹಾಂತೇಶ ಮಾಹೂರ, ನಾಶಿ ದಂಪತಿಗಳು, ಸಿದ್ದಣ್ಣ ವಿಜಾಪೂರ, ಸಿದ್ರಾಮ ಅಗಸರ, ಅಮಾತೆಪ್ಪ ಪೂಜಾರಿ, ವಿಎಸ್‌ಜಿ ಗ್ರೂಪ್ ಅವರಿಗೆ ತನು ಕನ್ನಡ ಮನ ಕನ್ನಡ ರಾಜ್ಯ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಾಯಿತು.
ಇದೇ ವೇಳೆ ಅನಿತಾ ಕೆ.ಆರ್ ಪೇಟೆ, ಗಿರೀಶ ಇಟ್ಟಂಗಿ, ಸೋಮನಾಥ ವಾಲಿಕಾರ, ಪ್ರೇಮ ಚಲವಾದಿ, ಧನಲಕ್ಷ್ಮೀ ದೊಡಮನಿ, ಸುರೇಶ ಜತ್ತಿ, ಸಂಗನಬಸವರಾಜ ಗೂಡ್ಲುಮನಿ ಅವರಿಗೆ ವಿಶೇಷವಾಗಿ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿದ ರಂಗಭೂಮಿ ಕಲಾವಿದೆ ಹೆಲೆನ್ ಮೈಸೂರು ಅವರು ಮಾತನಾಡಿ, ಕನ್ನಡವನ್ನು ಉಳಿಸುವ ಕಾರ್ಯಗಳ ಬಗ್ಗೆ, ಕನ್ನಡದ ಅಭಿಮಾನವನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕು. ಈ ತನು ಕನ್ನಡ ಮನ ಕನ್ನಡದಂತಹ ಕಾರ್ಯಕ್ರಮಗಳು ನಾಡಿಗೆ ಬೆಳಕಾಗಲಿ, ಕನ್ನಡ ಮನಸ್ಸುಗಳನ್ನು ಬಲಗೊಳಿಸುವ ಕಾರ್ಯ ನಿರಂತರವಾಗಿ ಜರುಗಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಾಜ ಸೇವಕಿ ವಿಜಯಲಕ್ಷ್ಮೀ ಬಾಳಿ ಅಧ್ಯಕ್ಷೀಯ ಮಾತುಗಳನ್ನಾಡಿದರು.
ವೇದಿಕೆಯಲ್ಲಿ ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ನಿಯಮಿತದ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಚೇತನಾ ಕಾಲೇಜಿನ ಮುಖ್ಯಸ್ಥೆ ರಾಜೇಶ್ವರಿ ಜುಗತಿ, ದರಬಾರ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಜಿ.ಹೆಚ್. ಮಣ್ಣೂರ, ವೈಧ್ಯರಾದ ಡಾ. ಸನ್ಮತಿ ಕುರುಂದವಾಡೆ, ಚೇತನಾ ಶಾಲೆಯ ಚೇರಮನ್ ಪ್ರತಿಭಾ ಪಾಟೀಲ್ ತನು ಫೌಂಡೇಶನ್ ಅಧ್ಯಕ್ಷರಾದ ವಿಜುಗೌಡ ಕಾಳಶೆಟ್ಟಿ ಸೇರಿದಂತೆ ಇನ್ನೀತರ ಮುಖಂಡರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಾರ್ಥನೆಯನ್ನು ರವಿ ಬರಾಡೆ ತಂಡದವರು, ಸ್ವಾಗತವನ್ನು ಸಂಗನಬಸವರಾಜ ಗೂಡ್ಲುಮನಿ ನೆರವೇರಿಸಿದರು. ಫೌಂಡೇಶನ್‌ನ ಕಾರ್ಯದರ್ಶಿ ಮಂಜುನಾಥ ಜುನಗೊಂಡ ನಿರೂಪಿಸಿ, ವಂದಿಸಿದರು.
ನಗರದ ಪ್ರತಿಷ್ಠಿತ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಮಾರಂಭದಲ್ಲಿ ವಿವಿಧ ಶಾಲಾ ಮಕ್ಕಳಿಂದ ಕನ್ನಡದ ಹಾಡುಗಳ ನೃತ್ಯ ಪ್ರದರ್ಶನಗಳು ಹಾಗೂ ವಿವಿಧ ಗಾಯಕರುಗಳು ಕನ್ನಡ ಹಾಡುಗಳನ್ನು ಹಾಡುವ ಮೂಲಕ ಗಮನ ಸೆಳೆದರು.

