ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಂವಿಧಾನ ಅರಿವಿಗಾಗಿ ಮ್ಯಾರಥಾನ್ ಓಟ
ಸಿಂದಗಿ: ಈ ದೇಶವನ್ನು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ರಾಷ್ಟ್ರೀಯತೆಯಿಂದ ಸಾಮಾಜಿಕ ತಳಹದಿಯ ಮೇಲೆ ಕಟ್ಟಬೇಕು ಎಂಬ ಆಶಯದೊಂದಿಗೆ ಭಾರತದ ಸಂವಿಧಾನವನ್ನು ಡಾ. ಬಿ.ಆರ್.ಅಂಬೇಡ್ಕರ ಅವರು ನಮಗೆಲ್ಲ ನೀಡಿದ್ದಾರೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದಲ್ಲಿ ಪ್ಲೈ ಸ್ಪೋರ್ಟ್ಸ ಅಸೋಷಿಯೇಶನ್ ಹಾಗೂ ಗಣೇಶ ಕನ್ಸ್ಸ್ಟçಕ್ಷನ್ ಸಹಯೋಗದಲ್ಲಿ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಂವಿಧಾನ ಅರಿವಿಗಾಗಿ ಓಟ ಎಂಬ ಶೀರ್ಷಿಕೆಯ ಅಡಿಯಲ್ಲಿ ಹಮ್ಮಿಕೊಂಡ ಮ್ಯಾರಥಾನ್ ಓಟ ಕಾರ್ಯಕ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಸಂವಿಧಾನವನ್ನು ಉಳಿಸಬೇಕಾಗಿರುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ. ಇಂದು ನಾವು ಸಂವಿಧಾನದ ಪೀಠಿಕೆಯ ವಿಧಿ ಓದಿದಂತೆ ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವನ ಸಾಗಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ತಾಲೂಕಾಡಳಿತ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಂವಿಧಾನದ ಪಿತಾಮಹ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಗೌರವ ಸಲ್ಲಿಸಿದರು. ಬಳಿಕ ತಾಲೂಕಾ ದಂಡಾಧಿಕಾರಿ ಪ್ರದೀಪಕುಮಾರ ಹಿರೇಮಠ ಸಂವಿಧಾನ ಪೀಠಿಕೆಯನ್ನು ಭೋದಿಸಿದರು.
ಇದೇ ಸಂದರ್ಭದಲ್ಲಿ ರಾಜಶೇಖರ ಕೂಚಬಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪುರುಷರ ವಿಭಾಗದ ೫ಕಿ.ಮೀ ಮ್ಯಾರಾಥಾನ್ ಓಟದಲ್ಲಿ ಕೃಷ್ಣಾ ರಾಠೋಡ ೧೪.೫೫ ಸೆಕೆಂಡಗಳಲ್ಲಿ ಪೂರ್ಣಗೊಳಿಸಿ ಪ್ರಥಮ ಸ್ಥಾನ ಪಡೆದರೆ, ಅಮೀರ ಕೋತವಾಲ್ ೧೫.೧೨ಸೆಕೆಂಡನಲ್ಲಿ ಓಟ ಪೂರ್ಣಗೊಳಿಸಿ ದ್ವೀತಿಯ ಸ್ಥಾನ ಪಡೆದರು. ಪ್ರಥಮ ಸ್ಥಾನ ಪಡೆದವರಿಗೆ ಗುತ್ತಿಗೆದಾರ ಮುತ್ತು ಮುಂಡೇವಾಡಗಿ ನೀಡಿದ ೨೫೦೦೦, ರೂ. ಪ್ರಥಮ ಬಹುಮಾನವನ್ನು ಮುತ್ತು ಸೊನ್ನದ ನೀಡಿದರು. ದ್ವಿತೀಯ ಬಹುಮಾನವನ್ನು ಭಾಗ್ಯಶ್ರೀ ಏಜೇನ್ಸಿಯ ಮಾಲೀಕ ಅನಂತ ದೇವರಡ್ಡಿ ೧೧೦೦೦ ರೂ.ಗಳು ನೀಡಿ ಸನ್ಮಾನಿಸಿದರು.
ಮಹಿಳಾ ವಿಭಾಗದ ೩ಕಿ.ಮೀ ಮಹಿಳಾ ಮ್ಯಾರಾಥಾನ್ ಓಟದಲ್ಲಿ ಆರ್.ಡಿ.ಪಾಟೀಲ ಕಾಲೇಜಿನ ವಿದ್ಯಾರ್ಥಿ ಐಶ್ವರ್ಯ ಬಿಜ್ಜರಗಿ ಪ್ರಥಮ ಸ್ಥಾನ ಪಡೆದರೆ, ದ್ವಿತೀಯ ಸ್ಥಾನವನ್ನು ಅಶ್ವಿನಿ ಹುನಗುಂಟಿ ಪಡೆದುಕೊಂಡರು. ಪ್ರಥಮ ಸ್ಥಾನ ಪಡೆದವರಿಗೆ ರಮೇಶ ಹೂಗಾರ ೧೦ಸಾವಿರ ರೂ. ನಗದು ಬಹುಮಾನ, ದ್ವಿತೀಯ ಸ್ಥಾನ ಪಡೆದವರಿಗೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಎನ್.ಎಸ್.ಭೂಸಗೊಂಡ ೫ಸಾವಿರ ರೂ. ನಗದು ಬಹುಮಾನ ನೀಡಿ ಸನ್ಮಾನಿಸಿದರು. ಮ್ಯಾರಾಥನ್ ಓಟದಲ್ಲಿ ಭಾಗಿಯಾದ ಓಟಗಾರರಿಗೆ ಯುವ ಉದ್ಯಮಿ ವೆಂಕಟೇಶ ಗುತ್ತೇದಾರ ಸಮವಸ್ತ್ರವನ್ನು ನೀಡಿದರು.
ಈ ವೇಳೆ ತಾಲೂಕು ಪಂಚಾಯತ ಇಓ ರಾಮು ಅಗ್ನಿ, ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್ ಬಿರಾದಾರ, ಡಾ.ಅನೀಲ ನಾಯಕ, ನಿವೃತ್ತ ದೈಹಿಕ ಶಿಕ್ಷಕ ಕೆ.ಎಚ್. ಸೋಮಾಪೂರ ವೇದಿಕೆಯ ಮೇಲಿದ್ದರು.
ಕಾರ್ಯಕ್ರಮದಲ್ಲಿ ಪರಸುರಾಮ ಕೂಚಬಾಳ, ಶಮ್ಮಾ ಮಂದ್ರುಪ, ಪ್ರವೀಣ ಹೋಸಮನಿ, ನಿಂಗರಾಜ ಗುಡಿಮನಿ, ಮುತ್ತು ತಳ್ಳೋಳ್ಳಿ, ರಮೇಶ ನಡುವಿನಕೇರಿ, ಸಿದ್ದು ಮ್ಯಾಕೇರಿ, ಬಾಲಕೃಷ್ಣ ಛಲವಾದಿ, ದಸಗೀರ ಆಳಂದ, ಶ್ರೀಮಂತ ಚೌರ, ಡಾ.ಅಂಬರೀಷ ಬಿರಾದಾರ ಸೇರಿದಂತೆ ಮ್ಯಾರಥಾನ್ ಓಟಗಾರರು, ಸಾರ್ವಜನಿಕರು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅನುಯಾನಿಗಳು, ಅಭಿಮಾನಿಗಳು ಉಪಸ್ಥಿತರಿದ್ದರು.
ಶಿವಾನಂದ ಆಲಮೇಲ ನಿರೂಪಿಸಿ ವಂದಿಸಿದರು.

