ಭಗವಾನ ಬುದ್ಧರ ಅಂತಿಮ ಉಪದೇಶ & ಡಾ.ಬಾಬಾಸಾಹೇಬ ಅಂಬೇಡ್ಕರ ಕೊನೆಯ ಸಂದೇಶ” ಕೃತಿಗಳ ಬಿಡುಗಡೆ
ದೇವರಹಿಪ್ಪರಗಿ: “ಭಗವಾನ ಬುದ್ಧರ ಅಂತಿಮ ಉಪದೇಶ ಮತ್ತು ಡಾ.ಬಾಬಾಸಾಹೇಬ ಅಂಬೇಡ್ಕರವರ ಕೊನೆಯ ಸಂದೇಶ” ಎಂಬ ಪುಸ್ತಕ ಇಂದು ಬಿಡುಗಡೆಯಾಗುತ್ತಿರುವುದು ಅತ್ಯಂತ ಸೂಕ್ತ ಹಾಗೂ ಸಮಯೋಚಿತವಾಗಿದೆ ಎಂದು ವಿಶ್ವರತ್ನ ಬುದ್ಧ ವಿಹಾರ ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡಕೋಳಕರ್ ಹೇಳಿದರು.
ತಾಲ್ಲೂಕಿನ ಕಡಕೋಳ ಗ್ರಾಮದ ವಿಶ್ವರತ್ನ ಬುದ್ಧವಿಹಾರ ಹೊಸಕಾಲೋನಿ, ಚೇತವನದಲ್ಲಿ ವಿಶ್ವರತ್ನ ಬುದ್ಧವಿಹಾರ ಟ್ರಸ್ಟ್ ಇವರ ಸಹಯೋಗದಲ್ಲಿ ಭಾನುವಾರ ಜರುಗಿದ ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಂದು ನಾವು ಸಾಕಷ್ಟು ಗ್ರಂಥ, ಪುಸ್ತಕಗಳನ್ನು ನೆಮ್ಮದಿಗಾಗಿ ಓದಿ ಮರೆಯುತ್ತಿದ್ದೇವೆ. ಆದರೆ ವಾಸ್ತವಿಕವಾಗಿ ಅವುಗಳಲ್ಲಿನ ಅಂಶಗಳನ್ನು ಅರ್ಥೈಸಿ ಅದರಂತೆ ನಡೆಯುವುದನ್ನು ರೂಢಿಸಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಇಂದಿನ ಪುಸ್ತಕ ಉತ್ತಮ ಅಂಶಗಳ ಸಂಗ್ರಹವಾಗಿದೆ ಎಂದರು.
ಸಿಂದಗಿ ಮಾಜಿಶಾಸಕ ಶರಣಪ್ಪ ಸುಣಗಾರ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿ, ಮಾತನಾಡುತ್ತಾ, ಬುದ್ಧವಿಹಾರ ನಿರ್ಮಿತ ತಾಣದಲ್ಲಿಯೇ ಇಂದು ಭಗವಾನ ಬುದ್ಧರ ಅಂತಿಮ ಉಪದೇಶಗಳನ್ನು ಹೊತ್ತ ಹೊತ್ತಿಗೆ ಬಿಡುಗಡೆ ಮಾಡುತ್ತಿರುವುದು ಅತ್ಯಂತ ಸಕಾಲಿಕ. ಇಂಥ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವು ಮೂಲಕ ಇಲ್ಲಿನ ಬಳಗ ಎಲ್ಲರಿಗೂ ಮಾದರಿಯಾಗಿದೆ ಎಂದರು.
ಕರ್ನಾಟಕ ಜಾನಪದ ವಿ.ವಿ ಗೊಟಗೋಡಿಯ ಕುಲಪತಿ ಡಾ.ಟಿ.ಎಂ.ಭಾಸ್ಕರ್, ಸಹಾಯಕ ಪ್ರಾಧ್ಯಾಪಕ ಡಾ.ಅಭಿಲಾಷ ಎಚ್.ಕೆ, ಲೇಖಕ ಹಣಮಂತ ಗುಡ್ಡಳ್ಳಿ ಮಾತನಾಡಿದರು,
ನಂತರ ಸಾಂಕೇತಿಕವಾಗಿ ಪುಸ್ತಕ ಬಿಡುಗಡೆ ಮಾಡಲಾಯಿತು.
ಅಶೋಕಮಿತ್ರ ಪ್ರಶಸ್ತಿ ಪುರಸ್ಕೃತ ಯುವರಾಜ ಕಾಂಬಳೆ, ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯಾಧ್ಯಕ್ಷ ಶ್ರೀನಾಥ ಪೂಜಾರಿ, ರಂಗಕರ್ಮಿ ಸಿದ್ಧರಾಮ ಹಿಪ್ಪರಗಿ, ದೊಡ್ಡಾಟ ಕಲಾವಿದ ರಮೇಶ ಕರಬಸಮ್ಮನವರ, ಶಿಕ್ಷಕ ಚಂದ್ರಶೇಖರ ಯಲರಡ್ಡಿ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮೀತಿಯ ಜಿಲ್ಲಾ ಸಂಘಟನಾ ಸಂಚಾಲಕ ವೈ.ಸಿ.ಮಯೂರ, ಸಹಸಂಚಾಲಕ ಪ್ರಕಾಶ ಗುಡಿಮನಿ, ಸಂಗನಗೌಡ ತೆಗ್ಗಿನಮನಿ, ಪರಶುರಾಮ ದಿಂಡವಾರ, ಖಾಜು ಗುಡ್ಡಳ್ಳಿ ಸೇರಿದಂತೆ ಬರಹಗಾರರು, ಸಾಹಿತ್ಯ ಪ್ರೇಮಿಗಳು ಇದ್ದರು.

