ಆರೆಸ್ಸೆಸ್ ನಗರ ವಾರ್ಷಿಕೋತ್ಸವ | ಉತ್ತರ ಕರ್ನಾಟಕ ಪ್ರಾಂತ ಪ್ರಚಾರಕ ನರೇಂದ್ರ ಸ್ಪಷ್ಠನೆ
ವಿಜಯಪುರ: ಕೊರೊನಾದಂಥ ಅನೇಕ ವೈರಸ್ ನಮ್ಮ ಜೊತೆಗಿದ್ದು ಜಾತಿಗಳ ನಡುವೆ ವಿಘಟನೆ ಮತ್ತು ಹಿಂದೂ ಸಮಾಜದಲ್ಲಿ ಒಡಕು ಮೂಡಿಸುವ ಪ್ರಯತ್ನ ಮಾಡುತ್ತವೆ ಎಂದು ಆರ್ ಎಸ್ ಎಸ್ ಉತ್ತರ ಕರ್ನಾಟಕ ಪ್ರಾಂತ ಪ್ರಚಾರಕ ನರೇಂದ್ರ ಹೇಳಿದ್ದಾರೆ.
ನಗರದ ದರಬಾರ ಹೈಸ್ಕೂಲ್ ಮೈದಾನದಲ್ಲಿ ಆರ್ ಎಸ್ ಎಸ್ ನಗರ ವಾರ್ಷಿಕೋತ್ಸವದ ಅಂಗವಾಗಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.
ಹಿಂದೂ ಎಂಬುದು ಕೇವಲ ಮೆರವಣಿಗೆಯ ಘೋಷಣೆಗೆ ಸೀಮಿತವಾಗಬಾರದು. ಪ್ರತಿದಿನ ಹಿಂದೂ ಆಗಬೇಕು. ಹಿಂದೂ ಸಮಾಜ ಎಷ್ಟು ಬೇಗ ಸಂಘಟಿತವಾಗುತ್ತದೆಯೋ ಅಷ್ಟೇ ಸಮಯದಲ್ಲಿ ಗುಂಪುಗಳಾಗಿ ವಿಭಜನೆಯಾಗುತ್ತದೆ. ಇದು ಸಮಾಜಕ್ಕೆ ದೊಡ್ಡ ಸವಾಲಾಗಿದೆ. ದುಷ್ಟಶಕ್ತಿಗಳು ಈ ರೀತಿಯ ಸವಾಲುಗಳನ್ನು ಭಾರತದಲ್ಲಿ ಯಾವಾಗಲೂ ಇರಿಸುತ್ತಿರುತ್ತವೆ. ಅವುಗಳನ್ನು ನಾವು ಸಂಘಟಿತರಾಗಿ ಸಮರ್ಥವಾಗಿ ಎದುರಿಸಬೇಕಿದೆ ಎಂದು ಹೇಳಿದರು.
ಅಧಿಕಾರಿಯೊಬ್ಬರನ್ನು ನಾವು ಕರೆದು ಚಹಾ ಕುಡಿಸುತ್ತೇವೆ. ಆದರೆ ಪೌರ ಕಾರ್ಮಿಕ ಬಂಧುಗಳನ್ನು ಕರೆದು ಚಹಾ ಕುಡಿಸುತ್ತೆವೆಯೇ? ಈ ಕಾರಣಕ್ಕಾಗಿಯೇ ಅವರು ರಾಬರ್ಟ್ ಮೊದಲಾದ ಹೆಸರುಗಳನ್ನು ಪಡೆಯುವಂತೆ ಮಾಡುತ್ತಿದ್ದೇವೆ. ಅನೇಕ ವೈರುದ್ಯಗಳು ಎದುರಿಸುತ್ತಿರುವ ಪ್ರಪಂಚದ ಎಲ್ಲ ಸಮಸ್ಯೆಗಳಿಗೆ ಭಾರತ ಆಶಾಕಿರಣ ಮತ್ತು ಪರಿಹಾರವಾಗಿದೆ. ಭಾರತದ ವಸುದೈವ ಕುಟುಂಬಕಂ ಎಂಬ ಧ್ಯೆಯವೇ ಇಡೀ ಜಗತ್ತನ್ನು ಕೇಂದ್ರಿಕರಿಸುತ್ತಿದೆ. ಹೀಗಾಗಿ ಎಲ್ಲ ದೇಶಗಳನ್ನು ಸಕ್ಷಮ ಮಾರ್ಗದಲ್ಲಿ ಸಾಗಿಸಬೇಕಾದ ಆದ್ಯ ಜವಾಬ್ದಾರಿ ಭಾರತದ ಮೇಲಿದೆ. ಕೊರೊನಾ ಸಂದರ್ಭದಲ್ಲಿ ಅನೇಕ ರಾಷ್ಟ್ರಗಳು ಕೋವಿಡ್ ಲಸಿಕೆ ಕಪಾಟಿನಲ್ಲಿರಿಸಿಕೊಂಡಿದ್ದವು. ಆದರೆ, ಭಾರತ ಮಾತ್ರ ಲಸಿಕೆಗಳನ್ನು ಬೇರೆ ಬಡ ರಾಷ್ಟ್ರಗಳಿಗೂ ನೀಡಿ ಮಾನವೀಯತೆ ಮೆರೆದಿದೆ ಎಂದು ಅವರು ಹೇಳಿದರು.
ಸಂವಿಧಾನ ಸಮರ್ಪಣೆ ಸಂದರ್ಭದಲ್ಲಿ ಡಾ. ಬಾಬಾಸಾಹೇಬರು ತಮ್ಮ ಭಾಷಣದಲ್ಲಿ ಅನೇಕ ಸಂದರ್ಭದಲ್ಲಿ ಹಿಂದೂ ಸಮಾಜ ಒಂದಾಗಲಿಲ್ಲ. ಇದು ಮತ್ತೆ ಎಲ್ಲಿ ಮರಕಳುಸುತ್ತಿದ್ದೇಯೋ ಎಂಬ ಆತಂಕ ಹೊರಹಾಕಿದ್ದರು. ಮೊಘಲ್ ಆಕ್ರಮಣ, ಆಂಗ್ಲರ ಆಳ್ವಿಕೆ ಹೀಗೆ ಅನೇಕ ವಿಷಯ ಉಲ್ಲೇಖಿಸಿ ಹಿಂದೂ ಸಮಾಜ ಒಂದಾಗಲಿಲ್ಲ ಎಂಬ ಆಂತಕವನ್ನು ಡಾ. ಬಾಬಾಸಾಹೇಬರು ಅಂದೇ ವ್ಯಕ್ತಪಡಿಸಿದ್ದರು. ಮಹಾಭಾರತ ಯುದ್ಧದ ನಂತರ ಅನೇಕ ವೈಭವದಿಂದಾಗಿ ಹಿಂದೂ ಸಮಾಜ ಕಂಗೊಳಿಸಿತ್ತು. ಆದರೆ, ನಂತರ ತನ್ನನ್ನು ತಾನು ಮರೆತುಕೊಂಡಿತು. ಇದರಿಂದ ಹಿಂದೂ ಸಮಾಜದ ಮೇಲೆ ಆಕ್ರಮಣ ಮಾಡುವಂತಾಯಿತು. ನಿರಂತರ ಆಕ್ರಮಣದಿಂದಾಗಿ ಉಂಟಾದ ಅನೇಕ ಬಿರುಕುಗಳನ್ನು ಸರಿಮಾಡಲು ನಮ್ಮ ಸಾಧು- ಸಂತರು ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ಒಳಜಗಳ, ಮೇಲು- ಕೀಳು ಎಂಬ ಮನೋಭಾವದಿಂದಾಗಿ ಹಿಂದೂ ಸಮಾಜಕ್ಕೆ ಭವಿಷ್ಯವಿಲ್ಲ ಎಂದು ಅನೇಕರು ಭಾವಿಸಿದ್ದರು, ಆದರೆ ಅಂದು ತರುಣ ಯುವಕ ಡಾ. ಹೆಗಡೆವಾರ ಆರ್ ಎಸ್ ಎಸ್ ಸ್ಥಾಪಿಸಿ ಹಿಂದೂ ಸಮಾಜಕ್ಕೆ ಎದುರಾಗಿದ್ದ ಕೊರತೆಯನ್ನು ನೀಗಿಸಿದರು ಎಂದು ನರೇಂದ್ರ ಹೇಳಿದರು.
ನಗರದ ಖ್ಯಾತ ವೈದ್ಯ ಡಾ. ರಮೇಶ ಮಾನಕರೆ ಮಾತನಾಡಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಿದಂಬರ ಕರಮಣಕರ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ, ಮಾಜಿ ಶಾಸಕ ರಮೇಶ ಭೂಸನೂರ, ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಚಂದ್ರಶೇಖರ ಕವಟಗಿ, ಉಮೇಶ ಕಾರಜೋಳ, ಡಾ. ಬಾಬು ರಾಜೇಂದ್ರ ನಾಯಕ ಸೇರಿದಂತೆ ಸಾವಿರಾರು ಗಣವೇಷಧಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

