ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಭಾರತದ ಸಂವಿಧಾನವು ವಿವಿಧ ದೇಶಗಳ ಸಂವಿಧಾನಗಳಿಗಿಂತ ಶ್ರೇಷ್ಠವಾಗಿದ್ದು, ದೇಶದ ಕಾನೂನು ವ್ಯವಸ್ಥೆ, ಆಡಳಿತ ಹಾಗೂ ನಾಗರಿಕರ ಹಕ್ಕು ಮತ್ತು ಕರ್ತವ್ಯಗಳಿಗೆ ಮಾರ್ಗದರ್ಶಿಯಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಆರ್.ಡಿ. ಕುಲಕರ್ಣಿ ಅಭಿಪ್ರಾಯಪಟ್ಟರು.
ಸಿಂದಗಿ ನಗರದ ನಾಗೂರ ಬಡಾವಣೆಯ ಶ್ರೀ ಸಮರ್ಥ ವಿದ್ಯಾವಿಕಾಸ ವಿವಿಧೋದ್ದೇಶಗಳ ಸಂಸ್ಥೆಯ ಪ್ರೇರಣಾ ಶಿಶುನಿಕೇತನ, ವಿದ್ಯಾನಿಕೇತನ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ಹಾಗೂ ಪ್ರೇರಣಾ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಸಹಯೋಗದಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಅವಿರತ ಪರಿಶ್ರಮದಿಂದ ಭಾರತದ ಸಂವಿಧಾನ ರಚನೆಯಾಗಿದೆ. ದೇಶದ ಕಾನೂನು ವ್ಯವಸ್ಥೆ, ಆಡಳಿತ ಹಾಗೂ ನಾಗರಿಕರ ಹಕ್ಕುಗಳ ರಕ್ಷಣೆಗೆ ಸಂವಿಧಾನ ದಿಕ್ಸೂಚಿಯಾಗಿದೆ. ದೇಶದ ವ್ಯವಸ್ಥೆಯ ಆತ್ಮವೇ ಸಂವಿಧಾನವಾಗಿದ್ದು, ಸಂವಿಧಾನದ ಆತ್ಮ ಅದರ ಪೀಠಿಕೆಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಹಾಗೂ ಸಂವಿಧಾನದ ಪೀಠಿಕೆಗೆ ಪೂಜೆ ಸಲ್ಲಿಸಿ ಪುಷ್ಪನಮನ ಅರ್ಪಿಸಲಾಯಿತು. ದಾನಿಯಲ್ ಸೌದಾಗರ, ಸಂತೃಪ್ತ ಮಾಕಾ, ಅನಿರುದ್ಧ ಯಾಡಗಿ, ಆದರ್ಶ ಕಾಕಂಡಕಿ ಹಾಗೂ ಬಾಲಾಜಿ ರಾಠೋಡ ನೇತೃತ್ವದ ವಿದ್ಯಾರ್ಥಿಗಳ ತಂಡ ಸಂವಿಧಾನ ಸಮರ್ಪಣೆಯ ರೂಪಕ ಪ್ರದರ್ಶಿಸಿತು. ಗೌರಿ ಪಟ್ಟಣಶೆಟ್ಟಿ ಹಾಗೂ ದಿತಿ ಶಿರಶ್ಯಾಡ ಸಂವಿಧಾನ ಪೀಠಿಕೆಯ ಪ್ರತಿಜ್ಞಾವಿಧಿ ಬೋಧಿಸಿದರು.
ಈ ವೇಳೆ ಸಹಶಿಕ್ಷಕಿ ಎಂ.ಜಿ.ದ್ಯಾಮಗೊಂಡ ಮಾತನಾಡಿದರು. ಸಂಸ್ಥೆಯ ನಿರ್ದೇಶಕ ಪಿ.ಡಿ.ಕುಲಕರ್ಣಿ, ಮುಖ್ಯೋಪಾಧ್ಯಾಯರಾದ ಎಂ.ಪಿ.ಬುಕ್ಕಾ, ಎಸ್.ಆಯ್.ಅಸ್ಕಿ, ಶಿಕ್ಷಕರಾದ ಸತೀಶ ಕುಲಕರ್ಣಿ, ಕಿರಣ ಕುಲಕರ್ಣಿ, ಸನತ್ ಕುಲಕರ್ಣಿ, ಎಸ್.ವಿ.ಕಡಣಿ, ವಿಜಯಲಕ್ಷ್ಮಿ ಅಲಾಳಮಠ, ಸಾವಿತ್ರಿ ವೀರಾಪೂರ, ಎನ್.ಜಿ.ಬಳಗಾನೂರ, ಆರ್.ಎಂ.ಫಕೀರಪುರ, ಆರ್.ಎಸ್.ಶಿವಸಿಂಪಿಗೇರ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿಗಳು ಇದ್ದರು.

