ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪ್ರತಿಯೊಂದು ಮಗುವಿನಲ್ಲೂ ಒಂದೊಂದು ವಿಶೇಷ ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸಿ, ಪ್ರೋತ್ಸಾಹಿಸಿ ಅನಾವರಣಗೊಳಿಸಲು ಸೂಕ್ತ ವೇದಿಕೆ ಹಾಗೂ ಅವಕಾಶ ಕಲ್ಪಿಸುವುದು ಅಗತ್ಯ. ಈ ನಿಟ್ಟಿನಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮ ಮಕ್ಕಳ ಪ್ರತಿಭೆ ಹೊರಹೊಮ್ಮಿಸಲು ಉತ್ತಮ ವೇದಿಕೆಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಹೇಳಿದರು.
ನಗರದ ಶ್ರೀ ಮಾಣಿಕೇಶ್ವರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಬುಧವಾರ ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯತ ವಿಜಯಪುರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ವಿಜಯಪುರ ಗ್ರಾಮೀಣ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ಎಂದರೆ ಕೇವಲ ಪಠ್ಯಪುಸ್ತಕದ ಜ್ಞಾನಕ್ಕೆ ಸೀಮಿತವಾಗಬಾರದು. ಮಕ್ಕಳಲ್ಲಿ ಅಡಗಿರುವ ಸೃಜನಶೀಲತೆ, ಕಲಾತ್ಮಕತೆ, ಸಾಹಿತ್ಯಾಸಕ್ತಿ, ಸಂಗೀತ, ನೃತ್ಯ, ಅಭಿನಯ ಹಾಗೂ ಭಾಷಾ ಕೌಶಲ್ಯಗಳಿಗೂ ಸಮಾನ ಪ್ರೋತ್ಸಾಹ ದೊರೆಯಬೇಕು ಎಂದರು.
ಸಂಸ್ಥೆಯ ಮುಖ್ಯಸ್ಥ ಚಿದಾನಂದ ಅವಟಿ ಮಾತನಾಡಿ ಸ್ಪರ್ಧೆಯಲ್ಲಿ ಗೆಲುವು ಸಾಧಿಸುವುದೊಂದೇ ಮುಖ್ಯವಲ್ಲ. ಭಾಗವಹಿಸುವ ಮನೋಭಾವ, ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಗುಣ ಹಾಗೂ ಇತರರ ಪ್ರತಿಭೆಯನ್ನು ಗೌರವಿಸುವ ಸಂಸ್ಕಾರ ಮಕ್ಕಳಲ್ಲಿ ಬೆಳೆಯಬೇಕು. ಇಂತಹ ಕಾರ್ಯಕ್ರಮಗಳು ಮಕ್ಕಳ ವ್ಯಕ್ತಿತ್ವ ವಿಕಸನದ ಜೊತೆಗೆ ಅವರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಲು ಸಹಕಾರಿಯಾಗುತ್ತವೆ ಎಂದು ಹೇಳಿದರು.
ತಾಲ್ಲೂಕಿನ ವಿವಿಧ ಶಾಲೆಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡು ತಮ್ಮಲ್ಲಿರುವ ಕಲಾ ಪ್ರತಿಭೆಯನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳ ಹಾಡುಗಾರಿಕೆ, ನೃತ್ಯ, ಭಾಷಣ, ಅಭಿನಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ಗಮನ ಸೆಳೆದವು.
ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಅರ್ಜುನ ಲಮಾಣಿ, ಕ್ಷೇತ್ರ ಸಮನ್ವಯಾಧಿಕಾರಿ ಪ್ರಕಾಶ ಚವಾಣ, ಬಬಲೇಶ್ವರ ತಾಲ್ಲೂಕ ಸಂಘದ ಅಧ್ಯಕ್ಷ ಅಶೋಕ ಬೂದಿಹಾಳ,ಕಾರ್ಯದರ್ಶಿ ಅನೀಲ ಗೊಡೆಪ್ಪಗೋಳ, ನೌಕರ ಸಂಘದ ಅದ್ಯಕ್ಷ ಚನ್ನಯ್ಯ ಮಠಪತಿ, ತಾಲ್ಲೂಕ ಶಿಕ್ಷಕ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಟಕ್ಕಳಕಿ, ಪ್ರಧಾನ ಕಾರ್ಯದರ್ಶಿ ಅಶೋಕ ಭಜಂತ್ರಿ, ಗ್ರಾಮೀಣ ತಾಲ್ಲೂಕಿನ ಅಧ್ಯಕ್ಷ ಅಶೋಕ ಚನಬಸಗೋಳ, ಕಾರ್ಯದರ್ಶಿ ಎಚ್.ಎಸ್.ಇಂಡಿ, ಅನೀಲ ಗೊಡ್ಯಾಪಗೋಳ, ಖಜಾಂಚಿ ಸಾಬು ಗಗನಮಾಲಿ, ಎಚ್.ಎಂ.ಚಿತ್ತರಗಿ, ಸೋಮನಾಥ ಬಾಗಲಕೋಟ, ಪ್ರತಿಭಾ ಹಿರೇಮಣಿ, ವಿಜಕ್ಕಾ ರಾಠೋಡ, ಶಿಕ್ಷಕರು, ತೀರ್ಪುಗಾರರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.

