ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದಿಂದ ಕೊಡಮಾಡುವ ಕನಕ ಪುರಸ್ಕಾರಕ್ಕೆ ತಾಲೂಕಿನ ಬೋರಗಿ ಗ್ರಾಮದ ತತ್ವಪದ ಹಾಡುಗಾರ್ತಿ ಇಮಾಂಬಿ ದೊಡಮನಿ ಆಯ್ಕೆಯಾಗಿದ್ದಾರೆ.
ಈ ಪುರಸ್ಕಾರವು 75 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. ಇಮಾಂಬಿ ದೊಡಮನಿ ಕಳೆದ ಹಲವು ವರ್ಷಗಳಿಂದ ಭಜನೆ, ತತ್ವಪದ ಹಾಡುಗಳನ್ನು ಹಾಡಿ ಜನಪ್ರಿಯತೆ ಗಳಿಸಿದ್ದಾರೆ.
ಇವರಿಗೆ ಈಗಾಗಲೇ ವಿಜಯಪುರ ಜಿಲ್ಲಾ ಆಡಳಿತ ಕೊಡಮಾಡುವ ಜಿಲ್ಲಾ ರಾಜ್ಯೋತ್ಸವ, ಕರ್ನಾಟಕ ಜಾನಪದ ಅಕಾಡೆಮಿಯ 2023ನೇ ಸಾಲಿನ ವಾರ್ಷಿಕ ಗೌರವ (25 ಸಾವಿರ ನಗದು) ಪುರಸ್ಕಾರ, ಮೈಸೂರಿನ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕೊಡಮಾಡುವ ಕೆ.ಆರ್ ಲಿಂಗಪ್ಪ ಜಾನಪದ ದತ್ತಿ ಪ್ರಶಸ್ತಿ (25 ಸಾವಿರ ನಗದು) ಸೇರಿದಂತೆ ನಾಡಿನ ವಿವಿಧ ಸಂಘ ಸಂಸ್ಥೆಗಳಿಂದ ನೂರಾರು ಗೌರವ ಸನ್ಮಾನ ಹಾಗೂ ಪ್ರಶಸ್ತಿಗಳು ಲಭಿಸಿವೆ. ಡಿಸೆಂಬರ್ ತಿಂಗಳಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಕೇಂದ್ರದ ಅಧ್ಯಕ್ಷ ಕಾ.ತ ಚಿಕ್ಕಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕನಕ ಪುರಸ್ಕಾರ ದೊರೆತ ಹಿನ್ನಲೆಯಲ್ಲಿ ಬೋರಗಿ ವಿಶ್ವರಾಧ್ಯ ಮಠದ ತಪೊರತ್ನ ಮಹಾಲಿಂಗೇಶ್ವರ ಸ್ವಾಮಿಗಳು, ರಾಂಪೂರ ಪಿ.ಎ ಆರೂಢ ಮಠದ ವೀರೇಶ್ವರ ಸ್ವಾಮಿಗಳು, ನಿತ್ಯಾನಂದ ಮಹಾರಾಜರು, ಜಾನಪದ ವಿದ್ವಾಂಸ ಎಂ.ಎಂ ಪಡಶೆಟ್ಟಿ, ಆರಕ್ಷಕ ಮೌಲಾಲಿ ಆಲಗೂರ, ಲಾಳೇಮಷಾಕ ದೊಡಮನಿ, ಸೇರಿದಂತೆ ಸಿಂದಗಿ ಹಾಗೂ ಬೋರಗಿ ಗ್ರಾಮದ ಜನರು ಹರ್ಷವ್ಯಕ್ತಪಡಿಸಿದ್ದಾರೆ.

