ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಯುವಕರು ಮಾದಕ ವಸ್ತುಗಳ ಸೇವನೆ ಸೇರಿದಂತೆ ಎಲ್ಲ ರೀತಿಯ ದುಶ್ಚಟಗಳಿಂದ ದೂರವಿದ್ದು, ಉತ್ತಮ ಗುಣಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ನಿಡಗುಂದಿ ಪೊಲೀಸ್ ಠಾಣೆಯ ಪಿಎಸ್ಐ ಯತೀಶ್ ಕೆ.ಎನ್. ಹೇಳಿದರು.
ಪಟ್ಟಣದ ರಾವ್ ಬಹದ್ದೂರ್ ಫ.ಗು. ಹಳಕಟ್ಟಿ ವಿದ್ಯಾಲಯ ಹಾಗೂ ಎಂ.ಎಚ್.ಎಂ. ಪದವಿ ಪೂರ್ವ ಕಾಲೇಜಿನಲ್ಲಿ ಮೇರಾ ಯುವ ಭಾರತ, ವಿಜಯಪುರ, ಡಾ. ಅಂಬೇಡ್ಕರ್ ಮಾತೃಭೂಮಿ ಯುವಕ ಸಂಘ, ಆಲಮಟ್ಟಿ ಹಾಗೂ ವಿದ್ಯಾಲಯ ಮತ್ತು ಪದವಿ ಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ನಶಾ ಮುಕ್ತ ಯುವ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ವಿದ್ಯಾರ್ಥಿಗಳ ಸಮಸ್ಯೆ ಹಾಗೂ ದೂರುಗಳನ್ನು ಆಲಿಸಲು ಶಾಲೆಗಳಲ್ಲಿ ದೂರು ಪೆಟ್ಟಿಗೆ ಅಳವಡಿಸುವುದು ಅಗತ್ಯ. ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ದೂರು ಪೆಟ್ಟಿಗೆಯಲ್ಲಿ ದಾಖಲಿಸಿದರೆ, ಅವುಗಳನ್ನು ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತರ ಫೆಡರೇಶನ್ನ ರಾಷ್ಟ್ರೀಯ ಅಧ್ಯಕ್ಷ ಡಾ.ಜಾವೀದ್ ಜಮಾದಾರ್ ಮಾತನಾಡಿದರು.
ಯುವಕರಿಗೆ ಮಾದರಿಯಾಗುವಂತೆ ಶಫಾ ಜಮಾದಾರ್ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ವಿದ್ಯಾಲಯದ ಮುಖ್ಯೋಪಾಧ್ಯಾಯ ಜಿ.ಎಂ. ಕೋಟ್ಯಾಳ ಮಾತನಾಡಿ, ಶಾಲೆಯಲ್ಲಿ ನಶಾ ಮುಕ್ತ ಯುವ ಕಾರ್ಯಕ್ರಮ ಆಯೋಜಿಸಿರುವುದು ಹೆಮ್ಮೆಯ ಸಂಗತಿ. ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಡಾ. ಅಂಬೇಡ್ಕರ್ ಮಾತೃಭೂಮಿ ಯುವಕ ಸಂಘದ ಅಧ್ಯಕ್ಷ ಸಂತೋಷ ಚಿಮ್ಮಲಗಿ ಅವರು ಕಾರ್ಯಕ್ರಮ ಆಯೋಜಿಸಲು ಮುಂದಾಗಿರುವುದು ಸಂತಸದ ವಿಷಯ ಎಂದರು.
ಇದೇ ವೇಳೆ ಯುವಕರು ದುಶ್ಚಟಗಳಿಂದ ದೂರವಿರಬೇಕೆಂದು ಪ್ರತಿಜ್ಞಾವಿಧಿ ಬೋಧಿಸಿದರು.
ಮುಖ್ಯ ಅತಿಥಿಗಳಾಗಿ ಆಲಮಟ್ಟಿ ವಲಯ ಅರಣ್ಯಾಧಿಕಾರಿ ಮಹೇಶ್ ಪಾಟೀಲ, ಕಾರ್ಯನಿರತ ಪತ್ರಕರ್ತರ ಸಂಘದ ನಿಡಗುಂದಿ ತಾಲೂಕು ಅಧ್ಯಕ್ಷ ಬಸವರಾಜ ವೈ. ಹೆರಕಲ್ಲ, ಹಿರಿಯ ಪತ್ರಕರ್ತ ಎಸ್.ಎಂ. ಜಲ್ಲಿ, ನಿಲೇಶ್ ಬೇನಾಳ, ಗ್ರಾಪಂ ಮಾಜಿ ಅಧ್ಯಕ್ಷ ಮಂಜುನಾಥ ಹಿರೇಮಠ ಉಪಸ್ಥಿತರಿದ್ದರು.
ಶಾಲೆಯ ಸಿಬ್ಬಂದಿ ವರ್ಗ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

