ಆಲಮೇಲದಲ್ಲಿ ರವಿ ಹಂಜ ಅವರನ್ನು ಗಡಿಪಾರು ಮಾಡಲು ಆಗ್ರಹಿಸಿ ವಿವಿಧ ಬಸವಪರ ಸಂಘಟನೆಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆ
ಉದಯರಶ್ಮಿ ದಿನಪತ್ರಿಕೆ
ಆಲಮೇಲ: ವಿಶ್ವಗುರು ಬಸವಣ್ಣ, ಬಸವಾದಿ ಶರಣರು ಹಾಗೂ ಬಸವ ಸಂಸ್ಕೃತಿಯ ಕುರಿತು ಅವಹೇಳನಕಾರಿ ಹೇಳಿಕೆಗಳು ಮತ್ತು ಬರಹಗಳನ್ನು ಖಂಡಿಸಿ, ಲೇಖಕ ರವಿ ಹಂಜ ಅವರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ಪಟ್ಟಣದಲ್ಲಿ ವಿವಿಧ ಬಸವಪರ ಸಂಘಟನೆಗಳ ನೇತೃತ್ವದಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಯಿತು.
ಪಟ್ಟಣದ ವಿರಕ್ತ ಮಠದಿಂದ ಪಾದಯಾತ್ರೆ ಮೂಲಕ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ರವಿ ಹಂಜ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಬಸ್ ನಿಲ್ದಾಣದ ವೃತ್ತದಲ್ಲಿ ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮೀಜಿ ನೇತೃತ್ವದಲ್ಲಿ ಪಕ್ಷಾತೀತವಾಗಿ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಬಸವಾಭಿಮಾನಿಗಳು ಪ್ರತಿಭಟನಾ ಸಭೆ ನಡೆಸಿದರು.
ಬಸವ ಸಮಿತಿಯ ಪ್ರಮುಖ ನಾನಾಗೌಡ ಪಾಟೀಲ ನಾಗರಹಳ್ಳಿ ಮಾತನಾಡಿ, ಬಸವಣ್ಣನವರ ವಿರುದ್ಧ ವಿಕೃತವಾಗಿ ಮಾತನಾಡುವುದು ಸಮಾಜದ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆ ತರುವ ಕೃತ್ಯವಾಗಿದೆ. ಇಂತಹವರಿಗೆ ಸರ್ಕಾರ ತಕ್ಕ ಶಿಕ್ಷೆ ವಿಧಿಸಬೇಕು ಎಂದರು.
ನೇತೃತ್ವ ವಹಿಸಿದ್ದ ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮೀಜಿ ಮಾತನಾಡಿ, ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಸರ್ಕಾರ ಘೋಷಿಸಿದ ನಂತರವೂ ಅವರ ವಿಚಾರಧಾರೆ ಹಾಗೂ ಶರಣ ಪರಂಪರೆಯ ವಿರುದ್ಧ ಇಂತಹ ಬೆಳವಣಿಗೆಗಳು ನಡೆಯುತ್ತಿರುವುದು ಖಂಡನೀಯ. ಇದರ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳು ಕೆಲಸ ಮಾಡುತ್ತಿವೆ. ಸಮಾಜದಲ್ಲಿ ಜಾಗೃತಿ ಮೂಡಿಸುವ ಮೂಲಕ ಇಂತಹ ಪ್ರವೃತ್ತಿಗಳಿಗೆ ಕಡಿವಾಣ ಹಾಕಬೇಕು. ಬಸವಣ್ಣನವರ ಕುರಿತು ಅವಹೇಳನಕಾರಿ ಬರಹಗಳನ್ನು ಪ್ರಕಟಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬ್ಲಾಕ್ ಕಾಂಗ್ರೆಸ್ ಕಮೀಟಿಯ ಅಧ್ಯಕ್ಷ ಸಾಧಿಕ ಸುಂಬಡ, ರಮೇಶ ಬಂಟನೂರ ಮೊದಲಾದವರು ಮಾತನಾಡಿದರು.
ಪ್ರತಿಭಟನೆಯ ಬಳಿಕ ತಾಲ್ಲೂಕು ಆಡಳಿತದ ಪರವಾಗಿ ವಿನೋದ ಬಿಸೆ ಅವರಿಗೆ ಮನವಿ ಸಲ್ಲಿಸಲಾಯಿತು.
ಬಸವ ಸಮಿತಿಯ ನಾನಗೌಡ ಪಾಟೀಲ ನಾಗರರಹಳ್ಳಿ ಪಟ್ಟಣ ಪಂಚಾಯತಿ ಅಧ್ಯಕ್ಷ ಉಮರ್ ಬೀಳವಾರ, ಸದಸ್ಯರಾದ ಭಗವಂತ ಆಲಮೇಲಕರ, ದಯಾನಂದ ನಾರಾಯಣಕರ, ಪ್ರಭು ವಾಲಿಕಾರ, ನಟ ಸಂತೋಷ ಉಪ್ಪಿನ ಹರೀಶ ಯಂಟಮಾನ, ಪ್ರಭುಲಿಂಗ ಶರಣರು, ಶ್ರೀಶೈಲ ಸ್ವಾಮೀಜಿ, ದೇವಪ್ಪ ಗುಣಾರಿ, ವಿದ್ಯಾಧರ ಮಠ, ಬಸವರಾಜ ತೆಲ್ಲೂರ, ಶಂಕರ ಹಳೆಮನಿ, ಸಿದ್ದಲಿಂಗ ಸುಭೇದಾರ, ಶಿವಾನಂದ ಮಾರ್ಶನಹಳ್ಳಿ ಮಂಜು ಭೋಗಂಡಿ, ಡಾ.ಸಮೀರ ಹಾದಿಮನಿ ಅಪ್ಪುಗೌಡ ಹೂವಿನಹಳ್ಳಿ ಷಣ್ಮುಖ ಕವಟಗಿ, ಸಿದ್ದು ಕವಟಗಿ ಮೊದಲಾದವರು ಪಾಲ್ಗೊಂಡಿದ್ದರು.

