ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನಿಜವಾಗಿಯೂ ಭಕ್ತ ಕನಕದಾಸರಿಗೆ ಗೌರವ ಸಲ್ಲಿಸಬೇಕೆಂದರೆ ಮೊದಲು ನಾವು ಮೂಢನಂಬಿಕೆಗಳಿಂದ ದೂರವಿರಬೇಕು. ದೇವರ ಹೆಸರಿನಲ್ಲಿ ಯಾವುದೇ ಕಾರಣಕ್ಕೂ ಪ್ರಾಣಿ ಹಿಂಸೆ ನಡೆಯಬಾರದು. ಕೇವಲ ಜಯಂತಿಗಳನ್ನು ಆಚರಿಸುವುದಕ್ಕೆ ಸೀಮಿತವಾಗದೆ, ಮಹನೀಯರ ತತ್ವ, ಆದರ್ಶ ಹಾಗೂ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಗುಬ್ಬೇವಾಡ ಶ್ರೀಮಠದ ಕನ್ನಯ್ಯ ಮಹಾರಾಜರು ಹೇಳಿದರು.
ಸಿಂದಗಿ ನಗರದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಸಿಂದಗಿ ತಾಲೂಕು ಆಡಳಿತ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡ ಸಂತ ಶ್ರೇಷ್ಠ ಶ್ರೀ ಭಕ್ತ ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಇಂದಿನ ಸಮಾಜದಲ್ಲಿ ಧಾರ್ಮಿಕ ಆಚರಣೆಗಳ ಹೆಸರಿನಲ್ಲಿ ಅನೇಕ ಮೂಢನಂಬಿಕೆಗಳು ಮುಂದುವರಿದಿವೆ. ದೇವರ ಮೇಲಿನ ನಿಜವಾದ ಭಕ್ತಿ ಎಂದರೆ ಜೀವಿಗಳ ಮೇಲೆ ಕರುಣೆ ತೋರುವುದು, ಎಲ್ಲರನ್ನೂ ಸಮಾನವಾಗಿ ಕಾಣುವುದು ಹಾಗೂ ಮಾನವೀಯತೆಯಿಂದ ಬದುಕುವುದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಹಾಲುಮತ ಸಮಾಜದ ಮಹಿಳಾ ರಾಜ್ಯಾಧ್ಯಕ್ಷೆ ಶಿಲ್ಪಾ ಕುದರಗೊಂಡ ಉಪನ್ಯಾಸ ನೀಡಿದರು. ಗ್ಯಾರಂಟಿ ಸಮಿತಿ ಅಧ್ಯಕ್ಷ ಸಂತೋಷ ಸಾಲಿ, ತಾಪಂ ಇಒ ಅನಿಲ ಹಳ್ಳಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಸೈಕ್ಲಿಂಗ್ ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಪಡೆದ ಪುನೀತ ಬಿರಾದಾರ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ನಗರಸಭೆ ಆಯುಕ್ತ ರವಿ ಶಿರಗುಪ್ಪಿ, ಪಿಎಸ್ಐ ಶ್ರೀಕಾಂತ ಕಾಂಬಳೆ, ರವೀಂದ್ರ ಬಂಥನಾಳ, ಗ್ರೇಡ್೨ ತಹಶೀಲ್ದಾರ್ ಇಂದ್ರಾಬಾಯಿ ಬಳಗಾನೂರ, ಸಚಿನ ಹುಟಗಿ, ಪ್ರಶಾಂತ ಸಾಣಿ, ಭೀಮಾಶಂಕರ ವಾಘಮೋರೆ, ಆಯ್.ಎ.ಮಕಾಂದಾರ, ಮಲ್ಲಿಕಾರ್ಜುನ ಬಗಲಿ, ಮಲಕಣ್ಣ, ಕುರುಬ ಸಮಾಜದ ತಾಲೂಕಾಧ್ಯಕ್ಷ ನಿಂಗಣ್ಣ ಬುಳ್ಳಾ, ಮಲ್ಲಿಕಾರ್ಜುನ ಸಾವಳಸಂಗ, ಸಿದ್ದು ಹಿರೇಕುರುಬರ, ಎಪಿಎಂಸಿ ಅಧ್ಯಕ್ಷ ಕಲ್ಲಪ್ಪ ನಾಯ್ಕೋಡಿ, ಪ್ರಕಾಶ ಹಿರೇಕುರುಬರ, ಎಂ.ಎಂ.ಚಟ್ಟರಕಿ, ಮಡ್ದೆಪ್ಪ ಸೊನ್ನದ, ಸಿದ್ದು ಬುಳ್ಳಾ, ಗೀತಾ ಅಥಣಿ ಸೇರಿದಂತೆ ಸಮಾಜದ ಮುಖಂಡರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು. ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್.ಆಲಗೂರ ಪ್ರಾಸ್ತವಿಕ ಮಾತನಾಡಿದರು.
ಸಂಗೊಳ್ಳಿ ರಾಯಣ್ಣ ನೌಕರರ ಸಂಘದ ಅಧ್ಯಕ್ಷ ರಾಯಪ್ಪ ಇವಣಗಿ ಸ್ವಾಗತಿಸಿದರು. ಸರಕಾರಿ ಶಾಲಾ ವಿದ್ಯಾರ್ಥಿಗಳು ನಾಡಗೀತೆ ಪ್ರಸ್ತುತ ಪಡಿಸಿದರು. ಶಿಕ್ಷಕ ಎಸ್.ಎಸ್.ಸಾತಿಹಾಳ ನಿರೂಪಿಸಿ ವಂದಿಸಿದರು.

