ಉತ್ತರ ಕರ್ನಾಟಕ ಯುವ ಲೇಖಕರ ವೇದಿಕೆ ಹಾಗೂ ಪ್ರಗತಿ ಶಾಲೆಯ ಸಹಯೋಗದಲ್ಲಿ ’ಸಂತನೆಂದರೆ ಯಾರು’ ಕೃತಿ ಬಿಡುಗಡೆ | ಜ್ಞಾನಾನಂದ ಶ್ರೀ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಾಹಿತಿ ಶ್ರೀನಿವಾಸ ಜಾಲವಾದಿ ಹಾಗೂ ರಮೇಶ ಕೋಟ್ಯಾಳ ಅವರ ಸಂಪಾದನೆಯ ’ಸಂತನೆಂದರೆ ಯಾರು’ ಕವನ ಸಂಕಲನದಲ್ಲಿ ಸಿದ್ಧೇಶ್ವರ ಶ್ರೀಗಳ ಸರಳ ಜೀವನದ ಸೂತ್ರಗಳು ಅನಾವರಣಗೊಂಡಿವೆ ಎಂದು ಜ್ಞಾನಯೋಗಾಶ್ರಮದ ಜ್ಞಾನಾನಂದ ಸ್ವಾಮೀಜಿ ಹೇಳಿದರು.
ಇಲ್ಲಿನ ರಾಜಾಜಿನಗರದ ಪ್ರಗತಿ ಶಾಲೆಯ ಸಭಾಂಗಣದಲ್ಲಿ ಉತ್ತರ ಕರ್ನಾಟಕ ಯುವ ಲೇಖಕರ ವೇದಿಕೆ ಹಾಗೂ ಪ್ರಗತಿ ಶಾಲೆಯ ಸಹಯೋಗದಲ್ಲಿ ನಡೆದ ಕೃತಿ ಬಿಡುಗಡೆ ಹಾಗೂ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದ ಅವರು, ಸಿದ್ಧೇಶ್ವರ ಅಪ್ಪಗಳು ನಿರ್ಮೋಹಿ ಸಂತನಾಗಿ ಸರಳ ಜೀವನ ಸಾಗಿಸಿದ ಮಹಾನ್ ತತ್ವಜ್ಞಾನಿಯಾಗಿದ್ದರು ಎಂದರು.
ಮುಖ್ಯಅತಿಥಿ ಹಿರಿಯ ಪತ್ರಕರ್ತ ವಾಸುದೇವ ಹೆರಕಲ್ ಮಾತನಾಡಿ, ಹಕ್ಕಿ-ಪಕ್ಷಿಗಳ ಕಲರವ ಆಸ್ವಾದಿಸುವ ಸೂಕ್ಷ ಸಂವೇದನಾಶೀಲತೆಯನ್ನು ಸಿದ್ಧೇಶ್ವರ ಸ್ಱಾಮೀಜಿಗಳು ಹೊಂದಿದ್ದರು. ಪ್ರಕೃತಿಯನ್ನು ನೋಡಿ ಆನಂದಿಸುವ ಅನುಭಾವಿಯಾಗಿದ್ದ ಅವರ ಕುರಿತಾದ ಸಂತನೆಂದರೆ ಯಾರು ಕೃತಿ ಅವರ ಜೀವನ ದರ್ಶನ ಮಾಡಿಸುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಸಾಹಿತಿ ಸಿದ್ಧಲಿಂಗ ಮನಹಳ್ಳಿ, ಸಮಾಜವನ್ನು ತಮ್ಮ ಸೈದ್ಧಾಂತಿಕ ನುಡಿಗಳಿಂದ ಜನಮನ ಪರಿವರ್ತನೆ ಮಾಡಿದ ಸಿದ್ಧೇಶ್ವರರು ಮಹಾನ್ ಯೋಗಿಯಾಗಿದ್ದರು. ಅವರ ಕಾಲಘಟ್ಟದಲ್ಲಿ ನಾವೆಲ್ಲರೂ ಇರುವುದೆ ನಮ್ಮ ಭಾಗ್ಯವಾಗಿದೆ ಎಂದರು.
ಕವಯತ್ರಿ ಭಾರತಿ ಪಾಟೀಲ ಕೃತಿ ಪರಿಚಯಿಸಿದರು. ಸಾಹಿತಿ ಶಂಕರ ಬೈಚಬಾಳ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಿದ್ಧೇಶ್ವರ ಶ್ರೀಗಳ ಕುರಿತು ಬರೆದ ಕವನಗಳು ಬದುಕಲು ಕಲಿಸಿˌ ಸೃಜನಶೀಲತೆಯನ್ನು ಹೆಚ್ಚಿಸುವ ಮನೋಭಾವ ಹೊಂದಿವೆ. ಇಂಥ ಕವಿತೆಗಳು ಸಮಾಜಕ್ಕೆ ಹಾಗೂ ವಿದ್ಯಾರ್ಥಿಗಳ ಮನಪರಿವರ್ತನೆಗೆ ಮಾದರಿಯಾಗಿವೆ ಎಂದರು.
ಪ್ರೊ. ಕೆ.ಎಸ್. ಪಾಟೀಲˌ ಸಾಹಿತಿ ವಿವೇಕಾನಂದ ಪಾಟೀಲˌ ಸಂಗಮೇಶ ಬದಾಮಿ ಅತಿಥಿಯಾಗಿದ್ದರು.
ವೇದಿಕೆಯ ಸಂಚಾಲಕ ಶ್ರೀನಿವಾಸ ಜಾಲವಾದಿ ಪ್ರಾಸ್ತಾವಿಕ ಮಾತನಾಡಿದರು. ಸಾಹಿತಿ ರಮೇಶ ಕೋಟ್ಯಾಳ ಸ್ವಾಗತಿಸಿದರು. ಮುರುಗೇಶ ಸಂಗಮ ನಿರೂಪಿಸಿದರು. ಅನುಪ್ರಿಯಾ ಬಿರಾದಾರ ವಂದಿಸಿದರು.
ಕವಿಗೋಷ್ಠಿಯಲ್ಲಿ ಕವನ ವಾಚಿಸಿದ ಕವಿಗಳು
ಕವಿಗೋಷ್ಠಿಯಲ್ಲಿ ಸುಭಾಸ ಯಾದವಾಡˌ ಈರಮ್ಮ ಬೋನೂರˌ ತಾರಾಮತಿ ಪಾಟೀಲˌ ಕೆ. ಸುನಂದˌ ಲಾಯಪ್ಪ ಇಂಗಳೆˌ ಬಾಬುರಾವ ಕುಲಕರ್ಣಿˌ ಅನುಪ್ರಿಯಾ ಬಿರಾದಾರˌ ಸ್ವಪ್ನಾ ನಡುವಿನಮನಿˌ ತೇಜಶ್ವಿನಿ ನಾಡಗೌಡˌ ಎನ್.ಆರ್. ಕುಲಕರ್ಣಿˌ ಸಂಗಮೇಶ ಕರೆಪ್ಪಗೋಳ ಮತ್ತು ಕಲ್ಯಾಣರಾವ ದೇಶಪಾಂಡೆ ಸಿದ್ಧೇಶ್ವರ ಶ್ರೀಗಳ ಕುರಿತು ಬರೆದ ಕವನ ವಾಚಿಸಿದರು.

