ಉದಯರಶ್ಮಿ ದಿನಪತ್ರಿಕೆ
ಗೊಳಸಂಗಿ: ಗ್ರಾಮದಲ್ಲಿ ಕುಡಿಯುವ ನೀರು ಪೋಲಾಗುವುದನ್ನು ತಡೆಗಟ್ಟಲು ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಹಾಗೂ ೧೫ ದಿನಗಳ ಬದಲಾಗಿ ೮ ದಿನಕ್ಕೊಮ್ಮೆ ನೀರು ಪೂರೈಸುವಂತೆ ಆಗ್ರಹಿಸಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಗ್ರಾಮದಲ್ಲಿ ನೀರು ಪೂರೈಕೆಯಾದಾಗ ಕೆಲವು ಮನೆಗಳಲ್ಲಿ ನೀರು ತುಂಬಿದ ಬಳಿಕವೂ ನಳಗಳನ್ನು ಬಂದ್ ಮಾಡದ ಕಾರಣ ನೀರು ಚರಂಡಿಗೆ ಹರಿದು ವ್ಯರ್ಥವಾಗುತ್ತಿದೆ. ಅಲ್ಲದೆ, ಕೆಲವು ಮನೆಗಳಿಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ.
೧೫ ದಿನಗಳಿಗೊಮ್ಮೆ ನೀರು ಬಿಡುವುದರಿಂದ ಸಂಗ್ರಹಿಸಿದ ನೀರಿನಲ್ಲಿ ಹುಳಗಳು ಉತ್ಪತ್ತಿಯಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಆತಂಕವಿದೆ. ಆದ್ದರಿಂದ ೮ ದಿನಕ್ಕೊಮ್ಮೆ ನೀರು ಪೂರೈಸಬೇಕು ಹಾಗೂ ನೀರು ಪೋಲಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷೆ ಸಿಂಧೂರ ಚಲವಾದಿ, ಯುವ ನಾಯಕ ಇಮ್ತಿಯಾಜ್ ಹೆಬ್ಬಾಳ, ದಸ್ತಗೀರ ಸಾಹೇಬ ಸರಕೂಲಿ, ಹಣಮಂತ ಭಜಂತ್ರಿ, ಸುರೇಶ ಸಂಗಮ, ಡೋಂಗ್ರಿಸಾಬ ಹತ್ತರಕಿಹಾಳ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

