ಸಿಂದಗಿಯಲ್ಲಿ ಬಸವಾಭಿಮಾನಿಗಳಿಂದ ಬೃಹತ್ ಪ್ರತಿಭಟನಾ ರ್ಯಾಲಿ | ಪ್ರತಿಕೃತಿ ದಹನ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನಗರದಲ್ಲಿ ಬಸವ ಮಂಟಪ ಪುಸ್ತಕದ ಕರ್ತೃ ರವಿ ಹಂಜ್ ಹಾಗೂ ಕೃತಿಯ ಪ್ರಕಾಶಕರ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಿ ಗುರುವಾರ ಬಸವಾಭಿಮಾನಿಗಳು ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು.
ಬೃಹತ್ ಸಂಖ್ಯೆಯ ಜನಸಮೂಹದ ಮೆರವಣಿಗೆಯ ನೇತೃತ್ವವನ್ನು ಅಲಮೇಲದ ಮಲ್ಲಿ ಬೊಮ್ಮಯ್ಯ ವಿರಕ್ತ ಮಠದ ಮಲ್ಲಿ ಬೊಮ್ಮಯ್ಯ ಶ್ರೀಗಳು, ಹಿಕ್ಕನುಗುತ್ತಿ ಲಿಂಗಾಯತ ಮಹಾಮಠದ ಶ್ರೀ ಪ್ರಭುಲಿಂಗ ಶ್ರೀಗಳು ಹಾಗೂ ಸಿಂದಗಿಯ ಗುರುದೇವ ಆಶ್ರಮದ ಶಾಂತಗಂಗಾಧರ ಶ್ರೀಗಳು ಮೆರವಣಿಗೆಯ ನೇತೃತ್ವ ವಹಿಸಿದ್ದರು.
ತಹಶೀಲ್ದಾರ್ ಕಾರ್ಯಾಲಯದ ಮುಂದೆ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಬಸವಾಭಿಮಾನಿ ಜಗದೀಶ್ ಕಲಬುರ್ಗಿ ಅವರು, ರವಿ ಹಂಜ್ ಭಾರತದ ಅನಿವಾಸಿ ವ್ಯಕ್ತಿಯಾಗಿದ್ದು ವಿಶ್ವಗುರು ಬಸವಣ್ಣನವರ ಕುರಿತು ಇಲ್ಲಸಲ್ಲದ್ದನ್ನು ಬರೆದು ಅವಮಾನವೆಸಗಿದ್ದಾನೆ. ವಿಶ್ವಗುರುವಿಗೆ ಆದಂತ ಅವಮಾನ ಇದು ಮಾನವೀಯ ಮೌಲ್ಯವುಳ್ಳ ಎಲ್ಲ ಜನರ ಅವಮಾನವಾಗಿದೆ. ಇವನ ಈ ಕುಕೃತ್ಯದಿಂದ ಬಸವಾಭಿಮಾನಿಗಳಿಗೆ ಮತ್ತು ಲಿಂಗಾಯತ ಸಮೂಹಕ್ಕೆ ಅಪಾರ ನೋವುಂಟು ಮಾಡಿದ ಈತನಿಗೆ ಕಠಿಣ ಶಿಕ್ಷೆ ಕೊಡಬೇಕು ಎಂದು ಆಗ್ರಹಿಸಿದರು.
ಮಲ್ಲಿ ಬೊಮ್ಮಯ್ಯ ಶ್ರೀಗಳು, ಶಾಂತಗಂಗಾಧರ ಶ್ರೀಗಳು, ಬಸವದಳದ ಶಿವಾನಂದ ಕಲಬುರ್ಗಿ, ಬಸವ ಸಮಿತಿಯ ನಾನಾಗೌಡ ಪಾಟೀಲ, ದಲಿತ ಸೈನ್ಯದ ಬೆಳಗಾವಿ ವಿಭಾಗೀಯ ಅಧ್ಯಕ್ಷ ಮಹೇಶ್ ಜಾಬಾನೂರ ಮಾತನಾಡಿ, ರವಿ ಹಂಜ ಮತ್ತು ಪ್ರಕಾಶಕರ ಬಸವ ವಿರೋಧಿ ನಿಲುವನ್ನು ಖಂಡಿಸಿದರಲ್ಲದೆ, ಅವರ ಮೇಲೆ ಸರ್ಕಾರ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಮಲಕಣ್ಣ ತಳವಾರ, ಸಂಗಣ್ಣ ಬ್ಯಾಕೋಡ, ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಮಲ್ಲಿಕಾರ್ಜುನ ಅರ್ಜುನಗಿ, ಶೈಲಜಾ ಸ್ಥಾವರ ಮಠ, ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಹಂಗರಗಿ, ದಾನಪ್ಪ ಜೋಗೂರ, ರಾಘವೇಂದ್ರ ಹೂಗಾರ, ರೈತ ಸಂಘದ ಅಧ್ಯಕ್ಷರು ಹಾಗೂ ಕಾರ್ಯಕರ್ತರು, ಕೆ ಆರ್ ಎಸ್ ಪಕ್ಷದ ಕಾರ್ಯಕರ್ತರು ಸೇರಿದಂತೆ ಅಪಾರ ಸಂಖ್ಯೆಯ ಬಸವಾಭಿಮಾನಿಗಳು ಭಾಗವಹಿಸಿದ್ದರು.
ಪ್ರತಿಭಟನಾಕಾರರು ಲೇಖಕ ರವಿ ಹಂಜ್ ಹಾಗೂ ಪ್ರಕಾಶಕರಿಗೆ ದಿಕ್ಕಾರ ಕೂಗುತ್ತಾ, ಅವರ ಭಾವಚಿತ್ರಗಳನ್ನು ಮತ್ತು ಬಸವ ಮಂಟಪ ಕೃತಿಗಳನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

