ಅಥಣಿಯಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯಲ್ಲಿ ತಹಶೀಲ್ದಾರ್ ಸಿದರಾಯ ಭೋಸಗಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಅಥಣಿ: ಕರ್ನಾಟಕ ಕನ್ನಡ ಎಂದರೆ ಕೇವಲ ಒಂದು ಭಾಷೆಯಲ್ಲ,ಅದು ನಮ್ಮ ಬದುಕು, ನಮ್ಮ ಸಂಸ್ಕೃತಿ ಅದು ನಮ್ಮ ಸ್ವಾಭಿಮಾನ ಹಾಗೂ ನಮ್ಮ ಆಧ್ಯತೆಯಾಗಿದೆ. ವಿವಿಧ ಪ್ರಾಂತ್ಯಗಳಲ್ಲಿದ್ದ ಕನ್ನಡಿಗರನ್ನು ಒಂದೇ ತಾಯಿಯ ಗೂಡಿಗೆ ತರಲು ಹತ್ತು ಹಲವು ಹಿರಿಯರು ನಡೆಸಿದ ಹೋರಾಟ ಮತ್ತು “ಕರ್ನಾಟಕ ಏಕೀಕರಣ”ದ ಫಲವಾಗಿ ಇಂದು ಅಖಂಡ ಕರ್ನಾಟಕ ನಿರ್ಮಾಣವಾಗಿದೆ ನಾವೆಲ್ಲರೂ ಜಾಗರೂಕತೆಯಿಂದ ಕನ್ನಡ ನಾಡು-ನುಡಿಯನ್ನು ಉಳಿಸಿ ಬೆಳೆಸಬೇಕು ಎಂದು ತಹಶೀಲ್ದಾರ್ ಸಿದರಾಯ ಭೋಸಗಿ ಕನ್ನಡಿಗರಿಗೆ ಕರೆ ನೀಡಿದರು.
ಅಥಣಿಯ ಶ್ರೀ ಭೋಜರಾಜ ದೇಸಾಯಿ ಕ್ರೀಡಾಂಗಣದಲ್ಲಿ ಕರ್ನಾಟಕ ಸರ್ಕಾರ ಅಥಣಿ ತಾಲೂಕು ಆಡಳಿತದ ವತಿಯಿಂದ ರವಿವಾರ ಜರುಗಿದ ೭೧ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯಲ್ಲಿ ರಾಷ್ಟ್ರ ಧ್ವಜಾರೋಹಣ ಹಾಗೂ ಭುವನೇಶ್ವರಿ ದೇವಿಯ ಪೂಜಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ತಹಶೀಲ್ದಾರ್ ಭೋಸಗಿ ಅವರು, ಕರ್ನಾಟಕ ಸಾವಿರಾರು ವರ್ಷಗಳ ಭವ್ಯ ಇತಿಹಾಸವನ್ನು ಹೊಂದಿದೆ. ಕನ್ನಡ ಅಭಿಮಾನ ಮಾತ್ರ ಹೊಂದಿದರೆ ಸಾಲದು ಅದನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಶ್ರೀಮತಿ ಶಿವಲೀಲಾ ಸ. ಬೂಟಾಳಿ, ಅಧ್ಯಕ್ಷರು, ಪುರಸಭೆ, ಅಥಣಿ, ಶ್ರೀಮತಿ ಭುವನೇಶ್ವರಿ ಬೀ. ಯಕ್ಕಂಚಿ, ಉಪಾಧ್ಯಕ್ಷರು, ಪುರಸಭೆ, ಅಥಣಿ ಮಾತನಾಡಿದರು.
ಈ ವೇಳೆ ಪತ್ರಿಕಾರಂಗದಲ್ಲಿ ಸಾಧನೆ ಮಾಡಿದ ಪ್ರಜಾವಾಣಿ ವರದಿಗಾರ ಪರಶುರಾಮ ನಂದೇಶ್ವರ, ಉದಯವಾಣಿ ವರದಿಗಾರ ಪ್ರಕಾಶ ಪೂಜಾರಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಚುಸಾಪ ಅಧ್ಯಕ್ಷ ಸಾಹಿತಿ ಡಾ ರಾಮಣ್ಣ ದೊಡ್ಡನಿಂಗಪ್ಪಗೋಳ, ಸಾಮಾಜಿಕ ಕ್ಷೇತ್ರದಲ್ಲಿ ಶಶಿಧರ ಬರ್ಲಿ, ನ್ಯಾಯವಾದಿ ಡಿ ಬಿ ಟಕ್ಕಣ್ಣವರ,ಕನ್ನಡ ಪರ ಸಂಘಟನೆಗಳ ಸದಸ್ಯರು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸುಮಾರು ೨೬ ಜನ ಸಾಧಕರಿಗೆ ತಾಲೂಕು ಆಡಳಿತದಿಂದ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ವಿವಿಧ ಶಾಲಾ ಕಾಲೇಜುಗಳಿಂದ ಆಕರ್ಷಕ ಸ್ತಬ್ಧ ಚಿತ್ರಗಳ ಮೆರವಣಿಗೆ ಜರುಗಿತು. ಮಕ್ಕಳಿಂದ ವಿವಿಧ ಕನ್ನಡಪರ ಸಾಂಸ್ಕೃತಿಕ ವೈಭವ ಕಣ್ಮನ ಸೆಳೆಯಿತು.
ವೇದಿಕೆಯಲ್ಲಿ ಡಿ ವೈ ಎಸ್ ಪಿ ವೀರೇಂದ್ರಕುಮಾರ ಪಿ ಅಥಣಿ. ಎಂ. ಆರ್. ಮುಂಜೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಥಣಿ , ಶಿವಾನಂದ ಕಲ್ಲಾಪುರ ಕಾ ನಿ ಅಧಿಕಾರಿಗಳು, ತಾ.ಪಂ. ಅಥಣಿ, ಶ್ರೀಮತಿ ದಯಾ ಕೆ. ಜೋಶಿ ಪ್ರಭಾರ ಮುಖ್ಯಧಿಕಾರಿಗಳು, ಪುರಸಭೆ, ಅಥಣಿ, ಸಂತೋಷ ಹಳ್ಳೂರ ಸಿ.ಪಿ.ಐ, ಅಥಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

