ವಿಜಯಪುರ ಜಿಲ್ಲೆಯ ಕಳ್ಳತನ ಪ್ರಕರಣಗಳಲ್ಲಿ ಪತ್ತೆಯಾಗಿರುವ ೯,೪೩,೩೪,೪೪೭ ಸ್ವತ್ತುಗಳನ್ನು ಹಸ್ತಾಂತರಿಸಿದ ಸಚಿವ ಡಾ.ಎಂ.ಬಿ. ಪಾಟೀಲ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿವಿಧ ಕಳ್ಳತನ ಹಾಗೂ ಸೈಬರ್ ಸ್ವರೂಪದ ಪ್ರಕರಣಗಳಿಗೆ ಸಂಬಂಧಿಸಿದಂತೆ ಚಿನ್ನ, ಬೆಳ್ಳಿ, ಕಾರು ಸೇರಿದಂತೆ ೯,೪೩,೩೪,೪೪೭ ರೂ. ಮೌಲ್ಯದ ಸ್ವತ್ತುಗಳನ್ನು ಜಪ್ತು ಮಾಡಿಕೊಂಡು ಸಂತ್ರಸ್ತರಿಗೆ ಸೋಮವಾರ ಹಸ್ತಾಂತರಿಸಲಾಯಿತು. ಬೃಹತ್ ಪ್ರಮಾಣದಲ್ಲಿ ಸ್ವತ್ತುಗಳನ್ನು ಸಂತ್ರಸ್ತರಿಗೆ ಹಸ್ತಾಂತರಿಸುವ ನಿಟ್ಟಿನಲ್ಲಿ ವಿಜಯಪುರ ಪೊಲೀಸ್ ಇಲಾಖೆ ದಾಖಲೆ ಬರೆದಿದೆ.
ನ್ಯಾಯಾಲಯದ ಆದೇಶದನ್ವಯ ಸೋಮವಾರ ವಿಜಯಪುರ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಸಂಘಟಿಸಲಾಗಿದ್ದ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲರು ಸ್ವತ್ತುಗಳನ್ನು ಸಂತ್ರಸ್ತರಿಗೆ ಹಸ್ತಾಂತರಿಸಿದರು.
ವಿವಿಧ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ೫,೨೩,೬೬,೨೮೫ ರೂ. ಹಾಗೂ ಸೈಬರ್ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ೪,೧೯,೬೮೧೬೨ ರೂ.ಗಳ ನಗದನ್ನು ಜಪ್ತು ಮಾಡಿರುವ ಪೊಲೀಸರು ಸಂತ್ರಸ್ತರಿಗೆ ಹಸ್ತಾಂತರಿಸಲಾಯಿತು.
ಕಳೆದ ಫೆಬ್ರವರಿ ೨೦೨೬ ರಿಂದ ನವ್ಹೆಂಬರ್ ೧ ರವರೆಗೆ ವಿಜಯಪುರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಮಾರು ೧೧೫ ಸ್ವತ್ತಿನ ಪ್ರಕರಣಗಳಲ್ಲಿ ಆರೋಪಿಗಳನ್ನು ದಸ್ತಗಿರಿ ಮಾಡಿ, ಆರೋಪಿತರಿಂದ ಕೋಟ್ಯಂತರ ರೂ. ಮೌಲ್ಯದ ವಸ್ತುಗಳನ್ನು ಜಪ್ತು ಮಾಡಿಕೊಳ್ಳಲಾಗಿದ್ದು ಆ ಪೈಕಿ ೧,೩೫,೯೯,೨೫೦ ರೂ. ನಗದು, ೩೯,೯೯,೦೦೧ ರೂ. ಮೌಲ್ಯದ ೧.೭೯೪ ಕೆಜಿ ಚಿನ್ನಾಭರಣ, ೨೧.೦೮ ಲಕ್ಷ ರೂ. ಮೌಲ್ಯದ ಬೆಳ್ಳಿ, ೮೯೧೯ ಕೆಜಿ ಬೆಳ್ಳಿ, ೨೧.೧೨ ಲಕ್ಷ ರೂ. ಮೌಲ್ಯದ ೪೬ ದ್ವಿಚಕ್ರ ವಾಹನ, ೧.೨೬ ಕೋಟಿ ರೂ. ಮೌಲ್ಯದ ೪ ದ್ವಿಚಕ್ರ ವಾಹನಗಳು, ರೈತರ ಬೆಲೆಬಾಳುವ ಪಂಪಸೆಟ್ ಸೇರಿದಂತೆ ವಿವಿಧ ಸ್ವರೂಪದ ೩.೩೫ ಲಕ್ಷ ರೂ. ಹೀಗೆ ಒಟ್ಟು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ೫.೨೩ ಕೋಟಿ ರೂ.ಗೂ ಮಿಕ್ಕಿ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದ ಇಲಾಖೆ ಫಲಾನುಭವಿಗಳಿಗೆ ಹಸ್ತಾಂತರಿಸಿತು.
ಸೈಬರ್ ವಂಚನೆ: ೪.೧೯೮ ಕೋಟಿ ರೂ. ಜಪ್ತಿ
ಇತ್ತಿಚಿನ ದಿನಗಳಲ್ಲಿ ಯುಪಿಐ, ಮತ್ತು ಕ್ಯೂಆರ್ ಕೋಡ್ ವಂಚನೆಗಳು, ಡಿಜಿಟಲ್ ಅರೆಸ್ಟ್, ನಕಲಿ ಹೂಡಿಕೆ ಮತ್ತು ಷೇರು ಮಾರುಕಟ್ಟೆ ವಂಚನೆಗಳು, ಆನ್‌ಲೈನ್ ಟಾಸ್ಕ್ ಮತ್ತು ಉದ್ಯೋಗದ ಹೆಸರಿನಲ್ಲಿ ನಡೆಯುವ ವಂಚನೆ ಹೀಗೆ ವಿವಿಧ ಸ್ವರೂಪದ ಸೈಬರ್ ವಂಚನೆಗೆ ಸಂಬಂಧಿಸಿದಂತೆ ೨೦ ಸೈಬರ್ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ, ಸೈಬರ್ ಆರೋಪಿತರಿಂದ ವಂಚನೆಗೊಳಗಾದ ಹಣದಲ್ಲಿ ಒಟ್ಟು ರೂ. ೪,೧೯,೬೮,೧೬೨ ರೂ. ನಗದು ಹಣ ಪತ್ತೆಹಚ್ಚಿ, ಸಂಬಂಧಪಟ್ಟ ದೂರುದಾರರಿಗೆ ಮರುಪಾವತಿಸಲಾಗಿದೆ.

