ಉದಯರಶ್ಮಿ ದಿನಪತ್ರಿಕೆ
ಅಥಣಿ: ಅಕ್ರಮವಾಗಿ ಕಂಟ್ರಿ ಪಿಸ್ತೂಲ್ ಹಾಗೂ ಎರಡು ಜೀವಂತ ಗುಂಡುಗಳನ್ನು ಹೊಂದಿದ್ದ ಇಬ್ಬರು ಆರೋಪಿತರನ್ನು ಅಥಣಿ ಪೊಲೀಸರು ವಶಕ್ಕೆ ಪಡೆದು ಬಂಧಿಸಿದ್ದಾರೆ.
ಅಕ್ಟೋಬರ್ 30ರಂದು ಅಥಣಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಎಲ್.ಬಿ. ಅಗ್ನಿ ಅವರು ಸರ್ಕಾರದ ಪರವಾಗಿ ದೂರು ದಾಖಲಿಸಿದ್ದಾರೆ.
ಪ್ರಕರಣದ ಮೊದಲನೇ ಆರೋಪಿ ಆಸೀಫ್ ಅಷ್ಪಾಕಹುಸೇನ್ ದೇಸಾಯಿ (25), ಅಥಣಿ ನಿವಾಸಿಯಾಗಿದ್ದು, ಪ್ರಸ್ತುತ ಪಾರ್ಥನಹಳ್ಳಿಯಲ್ಲಿ ವಾಸವಾಗಿದ್ದಾನೆ. ಈತ ಗುಂಡೇವಾಡಿ ಗ್ರಾಮದ ವಿಕ್ರಮ ಅಲಿಯಾಸ್ ವಿಕ್ಕಿ ಕಾಂಬಳೆ ಎಂಬಾತನಿಂದ ₹50,000 ನೀಡಿ ಒಂದು ಕಂಟ್ರಿ ಪಿಸ್ತೂಲ್ ಹಾಗೂ ಎರಡು ಜೀವಂತ ಗುಂಡುಗಳನ್ನು ಖರೀದಿಸಿದ್ದಾನೆ ಎನ್ನಲಾಗಿದೆ.
ನಂತರ ಅವುಗಳನ್ನು ಅಥಣಿಯ ಹುದ್ದಾರ ನಗರದ ಅಂಕುಶ ರಾಜು ರೊಡ್ಡನ್ನವರ ಎಂಬಾತನಿಗೆ ಮಾರಾಟ ಮಾಡುವ ಉದ್ದೇಶದಿಂದ ತನ್ನ ವಶದಲ್ಲಿಟ್ಟುಕೊಂಡಿದ್ದ ಸಂದರ್ಭದಲ್ಲಿ ಪೊಲೀಸರು ದಾಳಿ ನಡೆಸಿ ಕಂಟ್ರಿ ಪಿಸ್ತೂಲ್ ಹಾಗೂ ಎರಡು ಜೀವಂತ ಗುಂಡುಗಳನ್ನು ಜಪ್ತಿ ಮಾಡಿದ್ದಾರೆ.
ಈ ಸಂಬಂಧ ಇಬ್ಬರು ಆರೋಪಿತರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿರುವ ಅಥಣಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

