ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಸವನಾಡಿನಲ್ಲಿ ಪರಿಸರ ಸಂರಕ್ಷಣೆ ಮತ್ತು ಹಸಿರು ಹೊದಿಕೆಯನ್ನು ಹೆಚ್ಚಿಸುವ ನಮ್ಮ ಸಂಕಲ್ಪಕ್ಕೆ ಪೊಲೀಸ್ ಇಲಾಖೆ ಸಸಿ ನೆಡುವ ಕಾರ್ಯಕ್ರಮ ಮತ್ತಷ್ಟು ಬಲ ತುಂಬಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ಸೋಮವಾರ ನಗರದ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಎಸ್ಪಿ ಕಚೇರಿ ಆವರಣದಲ್ಲಿ ಸಸಿ ನೆಡುವ ಅಭಿಯಾನದ ಮೂಲಕ ಸುಮಾರು ಒಂದು ಸಾವಿರ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ. ಹಸಿರು ವಿಜಯಪುರದಿಂದ ಜನರ ಭವಿಷ್ಯ ಉಜ್ವಲವಾಗಲಿದೆ. ಪೊಲೀಸ್ ಇಲಾಖೆಯು ಒಂದೂವರೆ ಎಕರೆಯಲ್ಲಿ ಅನೇಕ ಪ್ರಭೇದಗಳ ಮರಗಳನ್ನು ಹಚ್ಚಲು ಸಹಕರಿಸಿ ಅವಕಾಶ ಕೊಟ್ಟಿದ್ದು ಶ್ಲಾಘನೀಯವಾಗಿದೆ. ಹೀಗೆ ಪ್ರತಿ ಇಲಾಖೆಯವರು ಖಾಲಿ ಜಾಗಗಳಲ್ಲಿ ಮರಗಿಡಗಳನ್ನು ಬೆಳೆಸಿ ಪರಿಸರವನ್ನು ರಕ್ಷಿಸಬೇಕು. ಇಲ್ಲಿನ ಖಾಲಿ ಪ್ರದೇಶದಲ್ಲಿ ಹೇಗೆ ಮತ್ತು ಎಷ್ಟು ಗಿಡಗಳನ್ನು ನೆಡಬೇಕು ಎಂಬುದರ ಕುರಿತು ಸ್ಥಳ ಗುರುತಿಸುವ ಮತ್ತು ನೆಲ ಸಮತಟ್ಟು ಮಾಡಿಸುವ ಕೆಲಸವನ್ನು ಕೋಟಿ ವೃಕ್ಷ ಅಭಿಯಾನ ತಂಡ ಮಾಡುತ್ತಿದೆ. ಸದ್ಯಕ್ಕೆ 10 ಗಿಡಗಳನ್ನು ಸಾಂಕೇತಿಕವಾಗಿ ನೆಡಲಾಗಿದ್ದು, ಇದಕ್ಕೆ ಅರಣ್ಯ ಇಲಾಖೆ ಸಹಾಯ ಪಡೆಯಲಾಗಿದೆ. ಹನಿ ನೀರಾವರಿ ವ್ಯವಸ್ಥೆ ಮಾಡಲಾಗುತ್ತಿದೆ. ಮುಂದೆ ಪೊಲೀಸ್ ಇಲಾಖೆ ಗಿಡಗಳ ಕಾಳಜಿ ಮಾಡಲಿದೆ ಎಂದು ಅವರು ಹೇಳಿದರು.
ಈ ಕಾರ್ಯಕ್ಕೆ ಜಿಲ್ಲಾಧಿಕಾರಿ ಡಾ. ಆನಂದ ಕೆ., ಎಸ್ಪಿ ಲಕ್ಷ್ಮಣ ನಿಂಬರಗಿ ಸೇರಿದಂತೆ ಹಲವರು ಈ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಪರಿಸರವನ್ನು ಕಾಯ್ದುಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಗಿಡ-ಮರಗಳನ್ನು ನೆಟ್ಟು ಪೋಷಿಸುವ ಮೂಲಕ ಮುಂದಿನ ಪೀಳಿಗೆಗೆ ಸ್ವಚ್ಛ, ಸುಂದರ ಹಾಗೂ ಆರೋಗ್ಯಕರ ಪರಿಸರವನ್ನು ಬಳುವಳಿಯಾಗಿ ನೀಡೋಣ ಎಂದು ಸಚಿವರು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮೀಸಲು ಪೊಲೀಸ್ ಪಡೆ ಡಿವೈಎಸ್ಪಿ ಮುರುಗೇಶ ಉಪಾಸೆ, ವಿಜಯಪುರ ನಗರ ಡಿವೈಎಸ್ಪಿ ನಾಗರಾಜ, ಗ್ರಾಮೀಣ ಡಿವೈಎಸ್ಪಿ ಟಿ. ಎಸ್. ಸುಲ್ಪಿ, ಅರಣ್ಯ ಇಲಾಖೆ ಉಪಅರಣ್ಯ ಸಂರಕ್ಷಣಾಧಿಕಾರಿಗಳಾದ ಮಲ್ಲಿನಾಥ ಬಿ. ಕುಸನಾಳ, ಶಿವರುದ್ರಪ್ಪ ಕಬಾಡಗಿ, ವಲಯ ಅರಣ್ಯಾಧಿಕಾರಿಗಳಾದ ಸಂತೋಷ ಅಜೂರ, ರಾಜು ಬಿರಾದಾರ, ವಿಜಯಪುರ ಸೈಕ್ಲಿಂಗ್ ಗ್ರೂಪ್‌ನ ಅಧ್ಯಕ್ಷ ಡಾ. ಮಹಾಂತೇಶ ಬಿರಾದಾರ, ಕೋಟಿ ವೃಕ್ಷ ಅಭಿಯಾನದ ಸಂಚಾಲಕ ಡಾ. ಮುರಗೇಶ ಪಟ್ಟಣಶೆಟ್ಟಿ, ವಿಸಿಜಿ ಉಪಾಧ್ಯಕ್ಷ ಶಿವನಗೌಡ ಪಾಟೀಲ, ಪದಾಧಿಕಾರಿಗಳಾದ ಸಂತೋಷ ಔರಸಂಗ, ವೀರೇಂದ್ರ ಗುಚ್ಚೆಟ್ಟಿ, ಶಿವಾನಂದ ಯರನಾಳ, ವಿನಯ ಕಂಚಾಣಿ, ಸೋಮಶೇಖರ, ಸಚಿನ ಪಾಟೀಲ, ಗುರುಶಾಂತ ಕಾಪ್ಸೆ, ಎ. ಪಿ. ಬಸನಾಳ, ಡಾ. ರಾಜು ಯಲಗೊಂಡ, ಸಂಗಮೇಶ ಹಾವರಗಿ, ಸಮೀರ್ ಬಳಿಗಾರ, ವಿಜಯಕುಮಾರ ಕೋರೆ, ಶಿವಾನಂದ ಕುಂಬಾರ, ಡಾ. ಪ್ರವೀಣ ಚೌರ, ರಮೇಶ ಬಿರಾದಾರ, ಉಮೇಶ ಮೆಟಗಾರ, ಅಮಿತ ಬಿರಾದಾರ, ವೀಣಾ ದೇಶಪಾಂಡೆ, ನಾವೀದ ನಾಗಠಾಣ ಮುಂತಾದವರು ಉಪಸ್ಥಿತರಿದ್ದರು.

