ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆಯ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಅನುಭವ ಹಂಚಿಕೊಂಡ ಸಚಿವ ಡಾ.ಎಂ.ಬಿ. ಪಾಟೀಲ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಡಿಜಿಟಲ್ ಅರೆಸ್ಟ್ ಮೊದಲಾದ ಗಂಭೀರ ಸ್ವರೂಪದ ಪ್ರಕರಣಗಳಲ್ಲಿ ಅಮಾಯಕರನ್ನು ಸಿಲುಕಿಸುವ ಪ್ರಯತ್ನಗಳು ನಡೆಯುತ್ತಿರುವುದು ಆತಂಕಕಾರಿ, ಸ್ವತ: ನನಗೆ ಡಿಜಿಟಲ್ ಅರೆಸ್ಟ್ ಮಾಡುವ ಪ್ರಯತ್ನ ನಡೆದಿತ್ತು ಎಂಬ ವಿಷಯವನ್ನು ಗೃಹ ಸಚಿವರೂ ಆಗಿದ್ದ ಹಾಲಿ ಬೃಹತ್ ಮತ್ತು ಕೈಗಾರಿಕಾ ಸಚಿವ ಡಾ.ಎಂ.ಬಿ. ಪಾಟೀಲ ಹೇಳಿದರು.
ಸೋಮವಾರ ಜಿಲ್ಲಾ ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ಪರೇಡ್ ಮೈದಾನದಲ್ಲಿ ವಿವಿಧ ಕಳ್ಳತನ ಪ್ರಕರಣಗಳಲ್ಲಿ ಪತ್ತೆಯಾಗಿರುವ ಸ್ವೊತ್ತುಗಳನ್ನು ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾನು ಬೆಳಗಾವಿ ಅಧಿವೇಶನದಲ್ಲಿದ್ದ ಸಂದರ್ಭದಲ್ಲಿ ವ್ಯಕ್ತಿಯೋರ್ವ ಕರೆ ಮಾಡಿ ನಾನು ಸಿಬಿಐ, ಇ.ಡಿ. ಇಲಾಖೆಯಿಂದ ಮಾತನಾಡುತ್ತಿರುವೆ ಎಂದ, ತಲೆಬುಡವಿಲ್ಲದ ರೀತಿ ಪ್ರಶ್ನೆಗಳನ್ನು ಕೇಳಲು ಆರಂಭಿಸಿ ನಿಮ್ಮ ಮೇಲೆ ದೂರಿದೆ ಎಂದು ಹೇಳಿದ, ನಾನು ಮಿನಿಸ್ಟರ್ ಎಂದು ಹೇಳಿದರೂ ತನ್ನ ಕೆಲಸ ತಾನು ಮುಂದುವರೆಸಿದ್ದ, ಇದು ಫೇಕ್ ಕಾಲ್ ಎಂಬುದು ಗೊತ್ತಾಗಿ ಅಧಿಕಾರಿಗಳ ಮೂಲಕ ಟ್ರಾö್ಯಪ್ ಮಾಡಲು ಪ್ರಯತ್ನಿಸಿದರೂ ಸಹ ಅದು ಸಾಧ್ಯವಾಗಲಿಲ್ಲ, ಎಲ್ಲಿಯೋ ಕುಳಿತು ಈ ಜಾಲ ಆಪರೇಟ್ ಮಾಡುತ್ತಾರೆ, ಅನೇಕ ಅಮಾಯಕರು ಬ್ಲಾಕ್‌ಮೇಲ್, ಡಿಜಿಟಲ್ ಅರೆಸ್ಟ್ ಮೊದಲಾದ ಷಡ್ಯಂತ್ರಗಳಿಗೆ ಸಿಲುಕಿ ಆತ್ಮಹತ್ಯೆಯ ಹಾದಿಯನ್ನೂ ತುಳಿಯವಂತಾಗಿರುವುದು ಆಘಾತಕಾರಿ ಸಂಗತಿ, ಹೀಗಾಗಿ ಈ ಎಲ್ಲದರ ಬಗ್ಗೆ ಜಾಗೃತಿ ಅಗತ್ಯ ಎಂದರು.
ಜಿಲ್ಲಾ ಪೊಲೀಸ್ ಇಲಾಖೆ ಶಾಲಾ ಕಾಲೇಜುಗಳಲ್ಲಿ ದೂರು ಪೆಟ್ಟಿಗೆ ಇರಿಸಲು ಅಣಿಯಾಗಿರುವುದು ಸಂತೋಷ ಸಂಗತಿ, ಪ್ರತಿಯೊಂದು ಶಾಲೆಗಳಲ್ಲಿಯೂ ಈ ಬಾಕ್ಸ್ ಇರಲೇಬೇಕು, ಈ ವಿಷಯದಲ್ಲಿ ನಿರ್ಲಕ್ಷö್ಯ ತೋರುವ ಶಾಲೆಗಳ ಮಾನ್ಯತೆಯನ್ನು ನವೀಕರಣ ಮಾಡಬೇಡಿ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡುವುದಾಗಿಯೂ ಸಚಿವರು ಭರವಸೆ ನೀಡಿದರು.
ಅನೇಕ ಕಳ್ಳತನ ಪ್ರಕರಣಗಳಲ್ಲಿ ಸಾರ್ವಜನಿಕರ ಬೇಜವಾಬ್ದಾರಿ ಸಹ ಇದೆ, ಶೇ.೫೦ರಷ್ಟು ಪ್ರಕರಣಗಳಲ್ಲಿ ಸಾರ್ವಜನಿಕರು ನಿರ್ಲಕ್ಷ್ಯ ಕಂಡು ಬರುತ್ತಿದೆ. ಕೋಟ್ಯಂತರ ರೂ. ಖರ್ಚು ಮಾಡಿ ಮನೆ ಕಟ್ಟುತ್ತಾರೆ, ಆದರೆ ಸಾವಿರ ರೂ. ಖರ್ಚು ಮಾಡಿ ಸಿಸಿಟಿವಿ ಅಳವಡಿಸುವುದಿಲ್ಲ, ಹೀಗಾಗಿ ಸಾರ್ವಜನಿಕರು ಸಹ ಜಾಗರೂಕತೆಯಿಂದ ಇರಬೇಕು ಎಂದರು.
ಜಿಲ್ಲಾಧಿಕಾರಿ ಡಾ.ಕೆ. ಆನಂದ, ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ, ಎಎಸ್‌ಪಿ ಕಟ್ಟಿಮನಿ, ಡಿವೈಎಸ್‌ಪಿಗಳಾದ ನಾಗರಾಜ್, ಟಿ.ಎಸ್. ಸುಲ್ಫಿ, ಕಟ್ಟಿಮನಿ, ಸುನೀಲ ಕಾಂಬಳೆ, ಚಂದ್ರಕಾಂತ ನಂದರೆಡ್ಡಿ ಮೊದಲಾದವರು ಪಾಲ್ಗೊಂಡಿದ್ದರು.
ವೈಯುಕ್ತಿಕ ಬಹುಮಾನ ಭರವಸೆ
ಕೋಟ್ಯಂತರ ರೂ. ಮೌಲ್ಯದ ವಸ್ತುಗಳನ್ನು ಪತ್ತೆ ಹಚ್ಚಿ, ವಿವಿಧ ಸೈಬರ್ ಪ್ರಕರಣಗಳನ್ನು ಬೇಧಿಸಿ ಉತ್ತಮ ಸಾಧನೆ ಮಾಡುವ ಪೊಲೀಸರಿಗೆ ಅಭಿನಂದನಾ ಪತ್ರ ನೀಡಿರುವೆ, ಅದರ ಜೊತೆಗೆ ವೈಯುಕ್ತಿಕವಾಗಿಯೂ ಬಹುಮಾನ ನೀಡುವ ಚಿಂತನೆ ಇದೆ, ಜಿಲ್ಲಾ ಪೊಲೀಸ್ ಅಧೀಕ್ಷಕರೊಂದಿಗೆ ಚರ್ಚಿಸಿ ಬಹುಮಾನದ ಸ್ವರೂಪ ಮೊದಲಾದವುಗಳಿಗೆ ರೂಪುರೇಷೆ ನೀಡಿ ಅಂತಿಮಗೊಳಿಸುವುದಾಗಿಯೂ ಸಚಿವ ಎಂ.ಬಿ.ಪಾಟೀಲ ಭರವಸೆ ನೀಡಿದರು.

