Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಕುಸ್ತಿ ದೈಹಿಕ, ಬೌದ್ಧಿಕ ಸಾಮರ್ಥ್ಯ ವೃದ್ಧಿಸುವ ಕ್ರೀಡೆ :ಮಿಸಾಳೆ

ಮಕ್ಕಳಲ್ಲಿ ಸಂಸ್ಕೃತಿ-ಸಂಸ್ಕಾರ ಬೆಳೆಸುವುದು ತಾಯಂದಿರ ಹೊಣೆ :ಅಮೃತಾ

ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ೧೭,೦೮,೦೯೯ ಮತದಾರರು

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ನಿಮ್ಮ ಬದುಕು.. ನಿಮ್ಮಿಷ್ಟ.. ಅಷ್ಟೇ..!
ವಿಶೇಷ ಲೇಖನ

ನಿಮ್ಮ ಬದುಕು.. ನಿಮ್ಮಿಷ್ಟ.. ಅಷ್ಟೇ..!

By No Comments6 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ನಮ್ಮ ಬದುಕು ನಮಗೆ ಇಷ್ಟವಾಗುವಂತಿರಬೇಕು. ಆದರೆ ಅದು ನಮ್ಮ ಜವಾಬ್ದಾರಿಗಳನ್ನೂ ಗೌರವಿಸುವಂತಿರಬೇಕು. ನಮ್ಮ ಸಂತೋಷ ನಮಗಿರಬೇಕು. ಆದರೆ ಅದಕ್ಕಾಗಿ ಮತ್ತೊಬ್ಬರ ಬದುಕಿಗೆ ತೊಂದರೆ ಕೊಡಬಾರದು. ನಮ್ಮಿಷ್ಟದಂತೆ ನಡೆಯಬೇಕು. ಆದರೆ ನಮ್ಮ ತಪ್ಪನ್ನು ಒಪ್ಪಿಕೊಳ್ಳುವಷ್ಟು ಪ್ರಾಮಾಣಿಕತೆಯೂ ಇರಬೇಕು.

– ಪ್ರಶಾಂತ ಕುಲಕರ್ಣಿ. ಉಪನ್ಯಾಸಕರು
ಸಿಂದಗಿ – ವಿಜಯಪುರ ಜಿಲ್ಲೆ

ಉದಯರಶ್ಮಿ ದಿನಪತ್ರಿಕೆ

ಕೆಲವೊಮ್ಮೆ ನಮ್ಮ ಬದುಕಿನಲ್ಲಿ ನಡೆಯುವ ದೊಡ್ಡ ಘಟನೆಗಳಿಗಿಂತ, ಯಾರೋ ಸಹಜವಾಗಿ ಹೇಳಿದ ಒಂದು ಸಣ್ಣ ಮಾತು ನಮ್ಮ ಮನಸ್ಸಿನಲ್ಲಿ ಬಹಳ ಹೊತ್ತು ಉಳಿದುಬಿಡುತ್ತದೆ. ಆ ಕ್ಷಣದಲ್ಲಿ ನಾವು ಉತ್ತರ ಕೊಟ್ಟು ಸುಮ್ಮನಾಗುತ್ತೇವೆ. ಆದರೆ ಮನೆಗೆ ಬಂದ ನಂತರ ಅದೇ ಮಾತು ಮತ್ತೆ ಮತ್ತೆ ನೆನಪಾಗುತ್ತದೆ. “ಅವರು ಹೇಳಿದ್ದು ಸರಿಯೇ? ನಾನು ಮಾಡುತ್ತಿರುವುದು ತಪ್ಪೇ? ನಾನು ಹೀಗೆ ಮಾಡಬಾರದಿತ್ತೇ?” ಎಂಬ ಪ್ರಶ್ನೆಗಳು ಮನಸ್ಸಿನೊಳಗೆ ಸದ್ದಿಲ್ಲದೆ ಓಡಾಡತೊಡಗುತ್ತವೆ. ಇತ್ತೀಚೆಗೆ ನನಗೂ ಅಂತಹದ್ದೊಂದು ಅನುಭವವಾಯಿತು.


ಹಾಗೆ ಒಂದು ದಿನ ಸಹೋದ್ಯೋಗಿಗಳೊಂದಿಗೆ ಮಾತನಾಡುತ್ತಿರುವಾಗ ಒಬ್ಬ ಶಿಕ್ಷಕರು ನನ್ನ ಕಡೆ ನೋಡಿ, “ಸರ್, ನೀವು ಯಾವಾಗಲೂ ಫೋನ್ ಜಾಸ್ತಿ ಬಳಸುತ್ತೀರಿ. ಯಾವಾಗ ನೋಡಿದರೂ ಫೋನ್‌ನಲ್ಲೇ ಇರುತ್ತೀರಿ. ಅದರಿಂದ ಏನು ಪ್ರಯೋಜನ? ಸುಮ್ಮನೆ ಟೈಮ್ ವೇಸ್ಟ್. ಹೀಗೆ ಫೋನ್ ಬಳಸುವುದರಿಂದ ಆರೋಗ್ಯವನ್ನೂ ಹಾಳು ಮಾಡಿಕೊಳ್ಳುತ್ತಿದ್ದೀರಿ” ಎಂದು ನೇರವಾಗಿ ಹೇಳಿದರು.
ಅವರ ಮಾತು ಕೇಳಿದಾಗ ನನಗೆ ಸ್ವಲ್ಪ ಬೇಸರವಾಯಿತು. ಆದರೆ ಅವರು ನನ್ನ ಬಗ್ಗೆ ಕಾಳಜಿಯಿಂದಲೇ ಹೇಳಿರಬಹುದು ಎಂಬುದನ್ನೂ ಅರ್ಥ ಮಾಡಿಕೊಂಡೆ. ಅವರ ಕಣ್ಣಿಗೆ ನಾನು ಯಾವಾಗಲೂ ಫೋನ್ ಹಿಡಿದುಕೊಂಡಿರುವ ವ್ಯಕ್ತಿಯಾಗಿ ಕಾಣುತ್ತಿದ್ದೆ. ಆದರೆ ನನ್ನ ಪಾಲಿಗೆ ಆ ಫೋನ್ ಕೇವಲ ಸಮಯ ಕಳೆಯುವ ಸಾಧನವಲ್ಲ. ನಾನು ಫೋನ್ ಬಳಸುತ್ತೇನೆ. ನನಗೆ ಬೇಕಾದಷ್ಟು ಬಳಸುತ್ತೇನೆ. ಮಾಹಿತಿಗಾಗಿ ಹುಡುಕುತ್ತೇನೆ, ಹೊಸ ವಿಷಯಗಳನ್ನು ಓದುತ್ತೇನೆ, ಶಿಕ್ಷಣ ಕ್ಷೇತ್ರದ ವಿಚಾರಗಳನ್ನು ತಿಳಿದುಕೊಳ್ಳುತ್ತೇನೆ, ವಿದ್ಯಾರ್ಥಿಗಳಿಗೆ ಬೇಕಾದ ಮಾಹಿತಿಯನ್ನು ಸಂಗ್ರಹಿಸುತ್ತೇನೆ. ಅದರಲ್ಲೂ ಮುಖ್ಯವಾಗಿ ನನ್ನ ಬರವಣಿಗೆಯ ಬಹುಪಾಲು ಇದೇ ಮೊಬೈಲ್ ಮೂಲಕ ನಡೆಯುತ್ತದೆ. ಅದರಿಂದ ನನಗೆ ಸಿಗುವ ಸಂತೋಷವನ್ನು ಮತ್ತೊಬ್ಬರು ಅರ್ಥಮಾಡಿಕೊಳ್ಳಲೇಬೇಕು ಎಂದೇನಿಲ್ಲ. ಅದು ನನ್ನ ಹವ್ಯಾಸ, ನನ್ನ ಸಂತೋಷ.
ಅದಕ್ಕಾಗಿಯೇ ನಾನು ಅವರಿಗೆ ಹೇಳಿದೆ, “ಸರ್, ನನಗೆ ಫೋನ್ ಬಳಸುವುದರಲ್ಲಿ ಸಂತೋಷ ಸಿಗುತ್ತದೆ. ನೀವು ಹೀಗೆ ಮಾಡಬೇಡಿ ಎಂದರೂ ನನ್ನ ಹವ್ಯಾಸವನ್ನೇ ಬದಲಿಸಿಕೊಳ್ಳಲು ಸಾಧ್ಯವಿಲ್ಲ ಎಂದೆ. ಅವರ ಮಾತು ಅವರ ದೃಷ್ಟಿಯಲ್ಲಿ ಸರಿಯಾಗಿತ್ತು. ನನ್ನ ಮಾತು ನನ್ನ ಅನುಭವದಲ್ಲಿ ಸರಿಯಾಗಿತ್ತು.
ಆದರೆ ನನಗೆ ಆ ವಿಷಯ ಅಲ್ಲಿಗೆ ಮುಗಿಯಲಿಲ್ಲ. ಮನೆಗೆ ಬಂದ ನಂತರ ಅವರ ಮಾತು ಮತ್ತೆ ಮತ್ತೆ ನೆನಪಾಯಿತು. ಆಗ ನನಗೆ ಒಂದು ವಿಷಯ ಸ್ಪಷ್ಟವಾಯಿತು. ನಮ್ಮ ಬದುಕಿನ ಬಗ್ಗೆ ಅಭಿಪ್ರಾಯ ಹೇಳುವವರು ಬಹಳ ಜನ. ಆದರೆ ಆ ಬದುಕನ್ನು ಬದುಕಬೇಕಾದದ್ದು ನಾವೇ.
ಇದೇ ವಿಚಾರ ನನಗೆ ನನ್ನ ಸ್ನೇಹಿತರೊಬ್ಬರ ಘಟನೆ ನೆನಪಿಸಿತು. ಅವರ ಮನೆಯ ಮೇಲೆ ಮೊದಲ ಮಹಡಿ ಕಟ್ಟಿಸಬೇಕೆಂಬ ಆಸೆ. ಆದರೆ ಅದಕ್ಕಾಗಿ ಹಣ ಹೊಂದಿಸುವುದು ಅವರಿಗೆ ದೊಡ್ಡ ಸಮಸ್ಯೆಯಾಗಿತ್ತು. ಈಗಾಗಲೇ ಮನೆಸಾಲು ಇತ್ತು. ಹಣಕಾಸಿನ ಪರಿಸ್ಥಿತಿಯೂ ಅಷ್ಟೇನೂ ಅನುಕೂಲಕರವಾಗಿರಲಿಲ್ಲ. ಇಬ್ಬರು ಸುಖವಾಗಿ ಬದುಕಲು ಈಗಿರುವ ಮನೆಯೇ ಸಾಕಾಗಿತ್ತು. ಇದನ್ನು ಅವರೇ ನನ್ನ ಬಳಿ ಹಲವು ಬಾರಿ ಹೇಳಿಕೊಂಡಿದ್ದರು. ಆದರೂ ಅವರ ಹತ್ತಿರದ ಬಂಧುಗಳೊಬ್ಬರು ಸಿಕ್ಕಾಗಲೆಲ್ಲಾ, “ಈ ತರಹದ ಗ್ರೌಂಡ್ ಫ್ಲೋರ್ ಮನೆ ಇಟ್ಟುಕೊಂಡರೆ ಸಮಾಜದಲ್ಲಿ ಪ್ರತಿಷ್ಠೆ ಇರಲ್ಲ. ಬೇಗ ಇನ್ನೆರಡು ಫ್ಲೋರ್ ಕಟ್ಟಿಸು. ಇಲ್ಲಾಂದ್ರೆ ಯಾರೂ ನಿಮ್ಮ ಮನೆಗೆ ಬರಲ್ಲ” ಎಂದು ಹೇಳುತ್ತಿದ್ದರಂತೆ.
ಆ ಮಾತುಗಳು ಸ್ನೇಹಿತನ ಮನಸ್ಸಿನಲ್ಲಿ ಎಷ್ಟು ಆಳವಾಗಿ ಬೇರೂರಿದ್ದವೋ ಗೊತ್ತಿಲ್ಲ. ಆದರೆ ಕೊನೆಗೆ ಅಗತ್ಯಕ್ಕಿಂತ ಹೆಚ್ಚಿನ ಹಣದ ತೊಂದರೆ ಮಾಡಿಕೊಂಡರು. ಸಾಲ ಮಾಡಿಕೊಂಡರು. ಮಾನಸಿಕವಾಗಿ ಜರ್ಝರಿತರಾದರು. ಒಮ್ಮೆ ನನ್ನ ಬಳಿ ಕುಳಿತು ತಮ್ಮ ಕಷ್ಟ ಹೇಳಿಕೊಂಡಾಗ, “ನಿಮಗೆ ನಿಜವಾಗಿಯೂ ಈಗ ಇದರ ಅವಶ್ಯಕತೆ ಇದೆಯಾ?” ಎಂದು ಕೇಳಿದ್ದೆ. “ಇಲ್ಲ” ಎಂದರು. “ಹಾಗಾದರೆ ಯಾರೋ ಏನೋ ಅಂದುಕೊಳ್ಳುತ್ತಾರೆ ಅಂತ ಈ ವಯಸ್ಸಿನಲ್ಲಿ ಸಾಲ ಮಾಡಿಕೊಂಡು ಏಕೆ ಪರದಾಡಬೇಕು? ಇರೋ ಇಬ್ಬರಿಗೆ ಸುಖವಾಗಿ ಬದುಕಲು ಇಷ್ಟು ಸಾಕಲ್ಲವೇ?” ಎಂದು ಹೇಳಿದ್ದೆ. ಅವರು ಆಗ ಒಪ್ಪಿದಂತೆ ಕಂಡಿದ್ದರು. ನಂತರ ಏನಾಯಿತೋ ಗೊತ್ತಿಲ್ಲ. ಆದರೆ ಆ ಘಟನೆ ನನ್ನ ಮನಸ್ಸಿನಲ್ಲಿ ಉಳಿಯಿತು.
ಅಲ್ಲಿಂದಲೇ ಈ ಪ್ರಶ್ನೆ ಮತ್ತೆ ಮತ್ತೆ ನನ್ನನ್ನು ಕಾಡುತ್ತದೆ—ನಾವು ನಿಜವಾಗಿಯೂ ನಮ್ಮ ಬದುಕನ್ನು ಬದುಕುತ್ತಿದ್ದೇವೆಯೇ? ಅಥವಾ ಬೇರೆಯವರು ನಮ್ಮ ಬಗ್ಗೆ ಏನು ಅಂದುಕೊಳ್ಳುತ್ತಾರೆ ಎಂಬುದನ್ನು ಗಮನಿಸುತ್ತಾ ಬದುಕುತ್ತಿದ್ದೇವೆಯೇ?
ನಮ್ಮಲ್ಲಿ ಒಂದು ವಿಚಿತ್ರವಾದ ವರ್ಗವಿದೆ. ಅವರಿಗೆ ತಮ್ಮ ಬದುಕಿಗಿಂತ ಬೇರೆಯವರು ತಮ್ಮ ಬಗ್ಗೆ ಏನು ಅಂದುಕೊಳ್ಳುತ್ತಾರೆ ಎಂಬುದೇ ದೊಡ್ಡ ಚಿಂತೆಯಾಗಿರುತ್ತದೆ. “ನನ್ನ ಮಗನ NEET ಫಲಿತಾಂಶ ನಾಳೆ ಬರುತ್ತೆ. ಕಡಿಮೆ ಅಂಕ ಬಂದರೆ ಅಕ್ಕಪಕ್ಕದವರು ಕೇಳಿದಾಗ ಏನು ಹೇಳಲಿ?” “ನಾವಿನ್ನೂ ಮನೆ ಕಟ್ಟಿಲ್ಲ, ಕಾರು ತೆಗೆದುಕೊಂಡಿಲ್ಲ, ಮಕ್ಕಳ ಮದುವೆ ಮಾಡಿಲ್ಲ, ಹೊಸ ಒಡವೆ-ಸೀರೆ ತೆಗೆದುಕೊಂಡಿಲ್ಲ ಅಂತ ಅವರಿವರು ಕೇಳಿದರೆ ಏನು ಉತ್ತರ ಕೊಡಲಿ?” “ನನ್ನ ನೆಂಟರ ಮಕ್ಕಳಿಗೆ ಕೆಲಸ ಸಿಕ್ಕಿದೆ. ನನ್ನ ಮಕ್ಕಳಿಗೆ ಇನ್ನೂ ಉದ್ಯೋಗ ಸಿಕ್ಕಿಲ್ಲ. ಅವರ ಮುಂದೆ ಹೇಗೆ ಮುಖ ತೋರಿಸಲಿ?” “ನನ್ನಮ್ಮ ಹೆಚ್ಚು ಓದಿಲ್ಲ, ಇಂಗ್ಲಿಷ್ ಬರುವುದಿಲ್ಲ. ಅವಳನ್ನು ನನ್ನ ಶಾಲೆಯ ಪೇರೆಂಟ್ಸ್ ಡೇಗೆ ಕರೆದುಕೊಂಡು ಹೋದರೆ ನನ್ನ ಸ್ನೇಹಿತರು ಏನೆಂದುಕೊಳ್ಳುತ್ತಾರೆ?” “ಎಲ್ಲರೂ ಸ್ಪೂನ್-ಫೋರ್ಕ್ ಬಳಸುತ್ತಿದ್ದಾರೆ. ನನಗೆ ಕೈಯಲ್ಲಿ ಊಟ ಮಾಡುವುದೇ ಇಷ್ಟ. ಆದರೆ ಅವರಂತೆ ತೋರಿಕೆಗೆ ನಾನೂ ಹಾಗೆಯೇ ಮಾಡಬೇಕಲ್ಲವೇ?” “ನಮಗೆ ಇಷ್ಟವಾದ ಜಾಗದಲ್ಲಿ ಆಸ್ತಿ ತೆಗೆದುಕೊಳ್ಳೋಣ ಎಂದರೆ ಬಂಧುಗಳು ವಾಸ್ತು ಸರಿಯಿಲ್ಲ, ದಿಕ್ಕು ಸರಿಯಿಲ್ಲ ಎಂದು ಹೇಳುತ್ತಿದ್ದಾರೆ. ಅವರ ಮಾತಿನಿಂದ ಮುಂದೆ ಹೆಜ್ಜೆ ಇಡಲು ಆಗುತ್ತಿಲ್ಲ.”
ಇಂತಹ ನೂರಾರು ಪ್ರಶ್ನೆಗಳು ಕೆಲವರ ತಲೆಯೊಳಗೆ ದಿನವಿಡೀ ಸುತ್ತುತ್ತಿರುತ್ತವೆ. ತಮಾಷೆಯ ಸಂಗತಿಯೆಂದರೆ, ನಾವು ಯಾರ ಬಗ್ಗೆ ಇಷ್ಟೊಂದು ತಲೆಕೆಡಿಸಿಕೊಂಡಿರುತ್ತೇವೋ, ಅವರು ಬಹುಶಃ ನಮ್ಮ ಬಗ್ಗೆ ಅಷ್ಟೊಂದು ಯೋಚಿಸುತ್ತಲೇ ಇರುವುದಿಲ್ಲ! ನಾವು ರಾತ್ರಿ ನಿದ್ದೆ ಬಾರದಷ್ಟು ಚಿಂತಿಸುವ ವ್ಯಕ್ತಿ, ಬಹುಶಃ ಆ ದಿನ ರಾತ್ರಿ ನಮ್ಮ ಹೆಸರನ್ನೇ ನೆನಪಿಸಿಕೊಳ್ಳದೇ ಮಲಗಿರಬಹುದು. ನಾವು ಅವರ ಮಾತಿಗೆ ಇಷ್ಟೊಂದು ಮಹತ್ವ ಕೊಟ್ಟಿರುತ್ತೇವೆ; ಆದರೆ ಅವರ ಬದುಕಿನಲ್ಲಿ ನಾವು ಅಷ್ಟು ಮುಖ್ಯ ವ್ಯಕ್ತಿಗಳೇ ಆಗಿರುವುದಿಲ್ಲ.
ಹಾಗಿದ್ದರೂ “ಅವರು ಏನಂದುಕೊಂಡಾರು?” ಎಂಬ ಗುಮ್ಮನನ್ನು ನಾವೇ ನಮ್ಮ ತಲೆಯೊಳಗೆ ಕೂರಿಸಿಕೊಂಡು, ನಾವೇ ಭಯಪಡುತ್ತೇವೆ. ನಾವೇ ನಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತೇವೆ. ನಾವೇ ನಮ್ಮ ಸಂತೋಷಕ್ಕೆ ಅಡ್ಡಿಯಾಗುತ್ತೇವೆ. ಕೆಲವೊಮ್ಮೆ ಒಣ ಪ್ರತಿಷ್ಠೆಗಾಗಿ ಸಾಲ ಮಾಡುತ್ತೇವೆ. ಮತ್ತೊಮ್ಮೆ ಯಾರನ್ನಾದರೂ ಮೆಚ್ಚಿಸಲು ನಮ್ಮಿಷ್ಟವಿಲ್ಲದ ಕೆಲಸ ಮಾಡುತ್ತೇವೆ. ಇನ್ನೊಮ್ಮೆ ಜನರ ಮಾತಿಗೆ ಹೆದರಿ ನಮಗೆ ಇಷ್ಟವಾದ ಅವಕಾಶವನ್ನೇ ಕೈಬಿಡುತ್ತೇವೆ.
ಇದೆಲ್ಲಾ ಬೇಕಾ?
ಆದರೆ ಇದರರ್ಥ ಬೇರೆಯವರ ಮಾತನ್ನೆಲ್ಲಾ ಕಿವಿಗೆ ಹಾಕಿಕೊಳ್ಳಬಾರದು ಎಂದಲ್ಲ. ನಮ್ಮನ್ನು ನಿಜವಾಗಿ ಪ್ರೀತಿಸುವವರು, ನಮ್ಮ ಒಳಿತನ್ನು ಬಯಸುವವರು, ನಮ್ಮ ತಪ್ಪನ್ನು ನೇರವಾಗಿ ಹೇಳುವ ಧೈರ್ಯವಿರುವವರು—ಅವರ ಮಾತಿಗೆ ಬೆಲೆ ಕೊಡಬೇಕು. ಏಕೆಂದರೆ ಕೆಲವೊಮ್ಮೆ ನಮಗೆ ಕಾಣದ ತಪ್ಪು ಅವರ ಕಣ್ಣಿಗೆ ಕಾಣಬಹುದು. ನನ್ನ ವಿಷಯದಲ್ಲಿಯೂ ಅದೇ. ಆ ಶಿಕ್ಷಕರು ನನ್ನ ಮೊಬೈಲ್ ಬಳಕೆಯ ಬಗ್ಗೆ ಹೇಳಿದ ಮಾತಿನಲ್ಲಿ ಕಾಳಜಿ ಇರಬಹುದು. ಮೊಬೈಲ್ ಬಳಕೆಗೆ ಮಿತಿ ಇರಬೇಕು ಎಂಬುದು ನಿಜ. ನಮಗೆ ಇಷ್ಟವಾದ ಯಾವುದೇ ವಿಷಯ ಅತಿಯಾದರೆ ಅದು ಸಮಸ್ಯೆಯಾಗಬಹುದು. ಹಾಗಾಗಿ ಅವರ ಮಾತನ್ನು ಸಂಪೂರ್ಣವಾಗಿ ತಳ್ಳಿಹಾಕುವುದು ಸರಿಯಲ್ಲ.
ಆದರೆ ಅದೇ ಕಾರಣಕ್ಕೆ ನನ್ನ ಬರವಣಿಗೆ, ಕಲಿಕೆ, ಮಾಹಿತಿ ಹುಡುಕುವ ಹವ್ಯಾಸವನ್ನೇ ಬಿಟ್ಟುಬಿಡುವುದೂ ಸರಿಯಲ್ಲ. ಹೀಗಾಗಿ ನಾನು ನನಗೇ ಹೇಳಿಕೊಂಡೆ—“ಸತ್ಯವಿದ್ದರೆ ಸ್ವೀಕರಿಸು. ತಪ್ಪಿದ್ದರೆ ತಿದ್ದಿಕೋ. ಆದರೆ ಪ್ರತಿಯೊಂದು ಮಾತನ್ನೂ ನಿನ್ನ ಬದುಕಿನ ತೀರ್ಪಾಗಿ ಸ್ವೀಕರಿಸಬೇಡ.”
ಬಹುಶಃ ಬದುಕಿನ ಸಮತೋಲನ ಇದೇ.
ಬೇರೆಯವರ ಮಾತು ಕೇಳಬೇಕು; ಆದರೆ ನಮ್ಮ ಬದುಕಿನ ನಿರ್ಧಾರವನ್ನು ಸಂಪೂರ್ಣವಾಗಿ ಅವರ ಕೈಗೆ ಕೊಡಬಾರದು. ಟೀಕೆ ಬಂದಾಗ ಕೋಪಗೊಳ್ಳಬಾರದು; ಆದರೆ ಪ್ರತಿಯೊಂದು ಟೀಕೆಯ ಮುಂದೆ ತಲೆಬಾಗಲೂಬಾರದು. ಸಲಹೆ ಬಂದಾಗ ಸ್ವೀಕರಿಸಬೇಕು; ಆದರೆ ಪ್ರತಿಯೊಂದು ಸಲಹೆಗೂ ಅನುಗುಣವಾಗಿ ನಮ್ಮ ವ್ಯಕ್ತಿತ್ವವನ್ನೇ ಬದಲಿಸಿಕೊಳ್ಳಬೇಕಿಲ್ಲ.
ಎಲ್ಲರನ್ನೂ ಮೆಚ್ಚಿಸಲು ಹೊರಟರೆ, ಕೊನೆಗೆ ನಮ್ಮೊಳಗೆ ಉಳಿಯುವುದು ಯಾರು? ನಾವೇ ಇರಲಾರೆವು.
ಚಾಡಿಮಾತು, ಚುಚ್ಚುಮಾತು, ಅಸೂಯೆಯ ಮಾತು, ತೋರಿಕೆಯ ಒಣಮಾತು, ಕಾಲೆಳೆಯುವ ಮಾತು—ಇವೆಲ್ಲ ಬದುಕಿನ ದಾರಿಯಲ್ಲಿ ಸಿಗುವ ಮುಳ್ಳುಗಳಿದ್ದಂತೆ. ಅವುಗಳನ್ನು ಜಾಣತನದಿಂದ ಪಕ್ಕಕ್ಕೆ ಸರಿಸಿ ಮುಂದೆ ಸಾಗಬೇಕು. ಆ ಮುಳ್ಳುಗಳನ್ನು ಕಿತ್ತುಕೊಂಡು ನಮ್ಮ ಜೇಬಿನಲ್ಲಿ ಇಟ್ಟುಕೊಂಡು, ಪ್ರತಿ ಹೆಜ್ಜೆಗೂ ನಮ್ಮನ್ನೇ ನಾವು ಚುಚ್ಚಿಕೊಳ್ಳುತ್ತಾ ಸಾಗುವುದೇಕೆ?
ನಮ್ಮ ಗುರಿ ಸರಿಯಾಗಿದ್ದರೆ, ಯೋಚನೆ ಸರಿಯಾಗಿದ್ದರೆ, ಪ್ರಯತ್ನ ಪ್ರಾಮಾಣಿಕವಾಗಿದ್ದರೆ ಫಲಿತಾಂಶಕ್ಕೆ ಸಮಯ ಬೇಕಾದರೂ ಬರುತ್ತದೆ. ಜೀವನದಲ್ಲಿ ಒಳ್ಳೆಯ ದಿನಗಳೂ ಬರುತ್ತವೆ, ಕೆಟ್ಟ ದಿನಗಳೂ ಬರುತ್ತವೆ. ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಹಾಗಂತ ಕೈಕಟ್ಟಿ ಕುಳಿತುಕೊಳ್ಳಲೂ ಸಾಧ್ಯವಿಲ್ಲ. ನಮ್ಮ ದಾರಿಯಲ್ಲಿ ನಾವು ನಡೆಯಬೇಕು.
ಆದ್ದರಿಂದ ಒಂದು ಹಂತದಲ್ಲಿ ನಮಗೆ ನಾವೇ ಹೇಳಿಕೊಳ್ಳಬೇಕು—“ನನ್ನ ಬದುಕು ನನ್ನದು.”


ಇದು ಸ್ವಾರ್ಥದ ಘೋಷಣೆ ಅಲ್ಲ. ಇದು ಜವಾಬ್ದಾರಿಯ ಅರಿವು. ನನ್ನ ಸಂತೋಷದ ಹೊಣೆಗಾರಿಕೆ ನನ್ನದು. ನನ್ನ ಆಯ್ಕೆಗಳ ಹೊಣೆಗಾರಿಕೆ ನನ್ನದು. ನನ್ನ ತಪ್ಪುಗಳ ಹೊಣೆಗಾರಿಕೆಯೂ ನನ್ನದೇ.
ನಮ್ಮಿಷ್ಟದಂತೆ ಬದುಕುವುದು ಎಂದರೆ ಮನಬಂದಂತೆ ಬದುಕುವುದು ಅಲ್ಲ. ಜವಾಬ್ದಾರಿಯಿಂದ, ವಿವೇಕದಿಂದ, ಆತ್ಮವಿಶ್ವಾಸದಿಂದ, ನಮ್ಮ ಮಿತಿಗಳನ್ನು ಅರಿತುಕೊಂಡು ಬದುಕುವುದು. ನಮ್ಮ ಹವ್ಯಾಸ ನಮ್ಮನ್ನು ಬೆಳೆಸಬೇಕು; ನಮ್ಮ ಬದುಕನ್ನೇ ನಿಯಂತ್ರಿಸಬಾರದು. ನಮ್ಮ ಸಂಪತ್ತು ನಮ್ಮ ನೆಮ್ಮದಿಯನ್ನು ಕಸಿದುಕೊಳ್ಳಬಾರದು. ನಮ್ಮ ಪ್ರತಿಷ್ಠೆ ನಮ್ಮನ್ನು ಸಾಲದ ಸುಳಿಗೆ ತಳ್ಳಬಾರದು. ನಮ್ಮ ಸಂಬಂಧಗಳು ನಮ್ಮ ಸ್ವಾತಂತ್ರ್ಯವನ್ನು ಕಸಿದುಕೊಳ್ಳಬಾರದು. ಬೇರೆಯವರ ಅಭಿಪ್ರಾಯಗಳು ನಮ್ಮ ಆತ್ಮವಿಶ್ವಾಸವನ್ನು ನುಂಗಬಾರದು.
ಬೇರೆಯವರನ್ನು ಗೌರವಿಸುತ್ತಾ, ಅವರ ಮಾತಿನಿಂದ ಕಲಿಯುತ್ತಾ, ಅಗತ್ಯವಿದ್ದರೆ ನಮ್ಮನ್ನು ತಿದ್ದಿಕೊಳ್ಳುತ್ತಾ, ಆದರೆ ನಮ್ಮ ಬದುಕಿನ ಅರ್ಥವನ್ನು ಕಳೆದುಕೊಳ್ಳದೆ ಬದುಕುವುದು—ಬಹುಶಃ ಇದೇ ನಿಜವಾದ ಸ್ವಾತಂತ್ರ್ಯ.
ನಾವು ಯಾರ ಕಣ್ಣಿಗೆ ಹೇಗೆ ಕಾಣುತ್ತೇವೆ ಎಂಬುದು ಅವರ ದೃಷ್ಟಿಕೋನ. ನಮ್ಮ ಕಣ್ಣಿಗೆ ನಾವು ಹೇಗಿದ್ದೇವೆ ಎಂಬುದು ನಮ್ಮ ಆತ್ಮಪರಿಚಯ. ಆದರೆ ಆತ್ಮಪರಿಚಯದ ಹೆಸರಿನಲ್ಲಿ ನಮ್ಮ ತಪ್ಪನ್ನು ಸಮರ್ಥಿಸಿಕೊಳ್ಳಬಾರದು. ಅದೇ ರೀತಿ ಬೇರೆಯವರ ಅಭಿಪ್ರಾಯದ ಹೆಸರಿನಲ್ಲಿ ನಮ್ಮ ಅಸ್ತಿತ್ವವನ್ನೂ ಕಳೆದುಕೊಳ್ಳಬಾರದು.
“ಜನ ಏನು ಅಂದುಕೊಳ್ಳುತ್ತಾರೆ?” ಎಂಬ ಪ್ರಶ್ನೆ ನಮ್ಮ ಜೀವನವನ್ನು ನಿಯಂತ್ರಿಸುವ ಮಟ್ಟಕ್ಕೆ ಬಂದಾಗ, ಒಮ್ಮೆ ನಿಂತು ನಮ್ಮನ್ನೇ ನಾವು ಕೇಳಿಕೊಳ್ಳಬೇಕು—“ನಾನು ನಿಜವಾಗಿಯೂ ಇದನ್ನು ನನ್ನ ಸಂತೋಷಕ್ಕಾಗಿ ಮಾಡುತ್ತಿದ್ದೇನೆಯಾ? ಅಥವಾ ಯಾರಾದರೂ ನನ್ನ ಬಗ್ಗೆ ಒಳ್ಳೆಯದಾಗಿ ಅಂದುಕೊಳ್ಳಲಿ ಎಂಬ ಕಾರಣಕ್ಕೆ ಮಾಡುತ್ತಿದ್ದೇನೆಯಾ?”
ಈ ಪ್ರಶ್ನೆಗೆ ಪ್ರಾಮಾಣಿಕ ಉತ್ತರ ಸಿಕ್ಕರೆ, ನಮ್ಮ ಬದುಕಿನ ಹಲವು ಗೊಂದಲಗಳು ಅಲ್ಲಿಯೇ ಪರಿಹಾರವಾಗಬಹುದು.
ಒಂದು ಸರಳ ಸತ್ಯವೆೇನೆಂದರೆ, ನಾವು ಎಲ್ಲರನ್ನೂ ಮೆಚ್ಚಿಸಲು ಸಾಧ್ಯವಿಲ್ಲ. ನೀವು ಎಷ್ಟೇ ಒಳ್ಳೆಯವರಾಗಿದ್ದರೂ ಯಾರಿಗಾದರೂ ನಿಮ್ಮಲ್ಲಿ ಒಂದು ಕೊರತೆ ಕಾಣುತ್ತದೆ. ನೀವು ಎಷ್ಟೇ ಪ್ರಾಮಾಣಿಕರಾಗಿದ್ದರೂ ಯಾರಿಗಾದರೂ ನಿಮ್ಮ ನಡೆ ಇಷ್ಟವಾಗುವುದಿಲ್ಲ. ನೀವು ಎಷ್ಟೇ ಒಳ್ಳೆಯ ಕೆಲಸ ಮಾಡಿದರೂ ಅದನ್ನು ಟೀಕಿಸುವ ಒಬ್ಬರು ಇದ್ದೇ ಇರುತ್ತಾರೆ.
ಹಾಗಾಗಿ ಪ್ರತಿಯೊಬ್ಬರ ಅಭಿಪ್ರಾಯಕ್ಕೆ ತಕ್ಕಂತೆ ನಮ್ಮನ್ನು ಬದಲಿಸಿಕೊಳ್ಳುತ್ತಾ ಹೋದರೆ, ಒಂದು ದಿನ ನಮ್ಮದೇ ಮುಖ ನಮಗೆ ಅಪರಿಚಿತವಾಗಿ ಕಾಣಬಹುದು.


ಬೇರೆಯವರ ಮಾತು ಕೇಳೋಣ. ಒಳ್ಳೆಯ ಮಾತಿಗೆ ಕೃತಜ್ಞರಾಗೋಣ. ಸತ್ಯವಿದ್ದರೆ ಸ್ವೀಕರಿಸೋಣ. ತಪ್ಪಿದ್ದರೆ ತಿದ್ದಿಕೊಳ್ಳೋಣ. ಆದರೆ ನಮ್ಮ ಬದುಕಿನ ಸ್ಟೀರಿಂಗ್‌ನ್ನು ಮಾತ್ರ ಬೇರೆಯವರ ಕೈಗೆ ಕೊಡದಿರೋಣ.
ಕೆಲವೊಮ್ಮೆ ಸಾಲ ಮಾಡಿಯಾದರೂ ತುಪ್ಪ ತಿನ್ನುವ ಆಸೆ ಬದುಕಿಗೆ ಒಳ್ಳೆಯದಲ್ಲ. ಹಾಗೆಯೇ ಮತ್ತೊಬ್ಬರ ಬಿಟ್ಟಿ ಕಾಮೆಂಟ್‌ಗಳಿಗೆ ಮೆಂಟಲ್ ಆಗುವ ತುರಿಕೆಯೂ ನೆಮ್ಮದಿಗೆ ಒಳ್ಳೆಯದಲ್ಲ.
ನಮ್ಮ ಬದುಕು ನಮಗೆ ಇಷ್ಟವಾಗುವಂತಿರಬೇಕು. ಆದರೆ ಅದು ನಮ್ಮ ಜವಾಬ್ದಾರಿಗಳನ್ನೂ ಗೌರವಿಸುವಂತಿರಬೇಕು. ನಮ್ಮ ಸಂತೋಷ ನಮಗಿರಬೇಕು. ಆದರೆ ಅದಕ್ಕಾಗಿ ಮತ್ತೊಬ್ಬರ ಬದುಕಿಗೆ ತೊಂದರೆ ಕೊಡಬಾರದು. ನಮ್ಮಿಷ್ಟದಂತೆ ನಡೆಯಬೇಕು. ಆದರೆ ನಮ್ಮ ತಪ್ಪನ್ನು ಒಪ್ಪಿಕೊಳ್ಳುವಷ್ಟು ಪ್ರಾಮಾಣಿಕತೆಯೂ ಇರಬೇಕು.
ಕೊನೆಗೆ ನನಗೆ ಅನಿಸಿದ್ದು ಒಂದೇ—
ನಾನು ಬೇರೆಯವರು ಬಯಸಿದಂತೆ ಬದುಕಬೇಕಾಗಿಲ್ಲ, ಆದರೆ ಅವರನ್ನು ಗೌರವಿಸಬೇಕು. ಅವರ ಮಾತನ್ನು ಕೇಳಬೇಕು. ಸತ್ಯವಿದ್ದರೆ ಸ್ವೀಕರಿಸಬೇಕು. ತಪ್ಪಿದ್ದರೆ ತಿದ್ದಿಕೊಳ್ಳಬೇಕು. ಆದರೆ ಕೇವಲ ಮತ್ತೊಬ್ಬರ ಮೆಚ್ಚುಗೆಗಾಗಿ ನನ್ನ ಬದುಕನ್ನು ಬದಲಿಸಿಕೊಳ್ಳಬಾರದು.
ಏಕೆಂದರೆ..
ಬದುಕು ನಮ್ಮದು.
ದಾರಿ ನಮ್ಮದು.
ಆಯ್ಕೆ ನಮ್ಮದು.
ಆದರೆ ಪ್ರತಿಯೊಂದು ಆಯ್ಕೆಯ ಜವಾಬ್ದಾರಿಯೂ ನಮ್ಮದೇ.
ಹಾಗಾಗಿ ಬೇರೆಯವರ ಕಣ್ಣಿಗೆ ನಾವು ಹೇಗೆ ಕಾಣುತ್ತೇವೆ ಎನ್ನುವುದಕ್ಕಿಂತ, ನಮ್ಮ ಅಂತರಂಗದ ಕಣ್ಣಿಗೆ ನಾವು ಹೇಗಿದ್ದೇವೆ ಎಂಬುದನ್ನು ನೋಡೋಣ.
ಯಾಕೆಂದರೆ ಕೊನೆಗೆ ನಮ್ಮೊಂದಿಗೆ ಉಳಿಯುವವರು ಎಲ್ಲರೂ ಅಲ್ಲ… ನಾವೇ.
ಆದ್ದರಿಂದ ನಮ್ಮ ಬದುಕಿನ ನಿರ್ಧಾರವನ್ನು ನಮ್ಮ ಕೈಯಲ್ಲೇ ಇಟ್ಟುಕೊಳ್ಳೋಣ. ಯಾರ ಮಾತಿನಿಂದಲೂ ನಮ್ಮ ನೆಮ್ಮದಿಯನ್ನು ಕಳೆದುಕೊಳ್ಳದಿರೋಣ.
ನಿಮ್ಮ ಬದುಕು…
ನಿಮ್ಮಿಷ್ಟ…
ಅಷ್ಟೇ..!

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಕುಸ್ತಿ ದೈಹಿಕ, ಬೌದ್ಧಿಕ ಸಾಮರ್ಥ್ಯ ವೃದ್ಧಿಸುವ ಕ್ರೀಡೆ :ಮಿಸಾಳೆ

ಮಕ್ಕಳಲ್ಲಿ ಸಂಸ್ಕೃತಿ-ಸಂಸ್ಕಾರ ಬೆಳೆಸುವುದು ತಾಯಂದಿರ ಹೊಣೆ :ಅಮೃತಾ

ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ೧೭,೦೮,೦೯೯ ಮತದಾರರು

ರಾವುತರಾಯ-ಮಲ್ಲಯ್ಯನ ಅದ್ಧೂರಿ ಜಾತ್ರೆೆ ಸಂಪನ್ನ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಕುಸ್ತಿ ದೈಹಿಕ, ಬೌದ್ಧಿಕ ಸಾಮರ್ಥ್ಯ ವೃದ್ಧಿಸುವ ಕ್ರೀಡೆ :ಮಿಸಾಳೆ
    In (ರಾಜ್ಯ ) ಜಿಲ್ಲೆ
  • ಮಕ್ಕಳಲ್ಲಿ ಸಂಸ್ಕೃತಿ-ಸಂಸ್ಕಾರ ಬೆಳೆಸುವುದು ತಾಯಂದಿರ ಹೊಣೆ :ಅಮೃತಾ
    In (ರಾಜ್ಯ ) ಜಿಲ್ಲೆ
  • ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ೧೭,೦೮,೦೯೯ ಮತದಾರರು
    In (ರಾಜ್ಯ ) ಜಿಲ್ಲೆ
  • ರಾವುತರಾಯ-ಮಲ್ಲಯ್ಯನ ಅದ್ಧೂರಿ ಜಾತ್ರೆೆ ಸಂಪನ್ನ
    In (ರಾಜ್ಯ ) ಜಿಲ್ಲೆ
  • ವಿಜಯಪುರ ನಗರ ಅಂತಿಮ ಮತದಾರರ ಪಟ್ಟಿ ಪ್ರಕಟ
    In (ರಾಜ್ಯ ) ಜಿಲ್ಲೆ
  • ರೈತ-ರೈತ ಮಹಿಳೆ ಪ್ರಶಸ್ತಿಗೆ ಅರ್ಜಿ ನ.೯ರವರೆಗೆ ವಿಸ್ತರಣೆ
    In (ರಾಜ್ಯ ) ಜಿಲ್ಲೆ
  • ಮಕ್ಕಳ ಹಕ್ಕುಗಳ ರಕ್ಷಣೆ- ಸುರಕ್ಷಿತ ಬಾಲ್ಯಕ್ಕೆ ಆದ್ಯತೆ ನೀಡಿ
    In (ರಾಜ್ಯ ) ಜಿಲ್ಲೆ
  • ರಾಮಾಯಣ ಜಗತ್ತಿಗೆ ನೀಡಿದ ಮಹರ್ಷಿ ವಾಲ್ಮೀಕಿ :ಅರಳಿ
    In (ರಾಜ್ಯ ) ಜಿಲ್ಲೆ
  • ದೇವರಹಿಪ್ಪರಗಿ ಜಾತ್ರೆ: ಸಕ್ಕರೆಲೋಭಾನ-ಅನ್ನ ಸಂತರ್ಪಣೆ
    In (ರಾಜ್ಯ ) ಜಿಲ್ಲೆ
  • ರಾಜಕಾರಣಿಗಳ ನಡೆ-ನುಡಿ ಸಮಾಜಕ್ಕೆ ಮಾರಕವಾಗದಿರಲಿ
    In ವಿಶೇಷ ಲೇಖನ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.