ದೇವರಹಿಪ್ಪರಗಿಯಲ್ಲಿ ರಾವುತರಾಯ ಬಂಡಿ ಮೆರವಣಿಗೆ | ಬನ್ನಿ ಮಹಾಕಾಳಿ ವೃಕ್ಷಕ್ಕೆ ಬನ್ನಿ ಮುಡಿಕೆ
ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಅಶ್ವಾರೂಢ ರಾವುತರಾಯ ಬಂಡಿಯಲ್ಲಿ ಆಸೀನನಾಗಿ ಮಲ್ಲಯ್ಯನ ದೇವಸ್ಥಾನಕ್ಕೆ ತೆರಳುವುದರೊಂದಿಗೆ ಐತಿಹಾಸಿಕ ರಾವುತರಾಯ-ಮಲ್ಲಯ್ಯ ಜಾತ್ರೆ ಆರಂಭಗೊಂಡಿತು.
ಪಟ್ಟಣದ ಸರ್ವಜನಪೂಜಿತ ರಾವುತರಾಯ ಶುಕ್ರವಾರ ನಸುಕಿನ ಮೂರು ಗಂಟೆಗೆ ಅಶ್ವಾರೂಢನಾಗಿ ತೆರೆದ ಬಂಡಿಯಲ್ಲಿ ಆಸೀನನಾಗಿ ಮೂಲ ದೇವಸ್ಥಾನದಿಂದ ಹೊರಟು ಬೆಳಗಿನ ೮ ಗಂಟೆಗೆ ಮಾನೆದೊಡ್ಡಿ ಎಂದೇ ಕರೆಯಲಾಗುವ ಸ್ಥಳದಲ್ಲಿ ನೂರಾರು ಭಕ್ತರು ಕಾಲ್ನಡಿಯಿಂದ ಹೊತ್ತು ತಂದ ಹೂಹಾರಗಳಿಂದ ಅಲಂಕಾರಗೊಂಡನು. ಇದನ್ನು ಹೂ ಮುಡಿಯುವುದು ಎಂದೇ ಕರೆಯಲಾಗುತ್ತದೆ. ನಂತರ ಶೀಡಗಟ್ಟಿ ಎಂಬ ಸ್ಥಳದಲ್ಲಿ ಕಾರಣಿಕರು ಮುಂಬರುವ ಭವಿಷ್ಯದ ಕುರಿತಾಗಿ ಹೇಳಿಕೆಗಳು ಹೇಳಲ್ಪಟ್ಟವು.
ಕಾರಣಿಕರ ಹೇಳಿಕೆಗಳು: ಭಕ್ತಿ, ಭಾವದೊಂದಿಗೆ ಶುದ್ಧವಾಗಿ ನಡೆದರೇ ಅಂಗೈನಲ್ಲಿ ಲಿಂಗದಂಗ ಜೋಕಿ ಮಾಡತೀನಿ. ಮಳೆ ಇಲ್ಲ ಅಂತ ಕೊರಗಬ್ಯಾಡ್ರಿ, ಮುತ್ತಿನ ಜಾಳಗಿ ಹಾಕಿ ಸರ್ವಾ ಸರ್ವ ಮಳಿ ಕೊಡ್ತೀನಿ. ಸಾತಿ, ಇಸಾಕಿ ಮಳಿ ಒಂದ ಸರ್ವ ಕೊಡ್ತೀನಿ. ಬಿಳಿಕಾಳ ಕಟ್ಟಿ ಒಕ್ಕಲಾಯಿತು. ಕುಸುಬಿ, ಅಗಸಿ ಬೆನ್ನ ಹತ್ತಿದವು. ಚಂಡ ಮಾರುತ ಎಬ್ಬಿಸಿ ಒಂದು ಸರ್ವ ಮಳಿ ಕೊಡುತ್ತೇನೆ. ಜನಪಿಡ ಹೆಚ್ಚಾಯಿತು. ಮಳೆ ಕಮ್ಮಿ ಆಯ್ತು, ಯುದ್ಧ ಬೆನ್ನ ಹತ್ತುತು. ಜೋಡು ಬಾಂಬು ಬೀಳುತಾವ ಹುಷಾರ್, ಆದರೂ ಕಷ್ಟ ಕಾಲ ಬಂತು. ಬೇಕಾದ ಕಷ್ಟ ಬಂದರೂ ದೂರ ಮಾಡ್ತೀನಿ. ಎಷ್ಟ್ ಹೇಳಿದ್ರು ಕರಿತೇಲಿ ಮಾನವನಿಗೆ ಬುದ್ಧಿ ಬರಲಿಲ್ಲ. ನಾ ಅನ್ನೋದು ಹೆಚ್ಚಾಯಿತು. ನಾ ಅಂದವನ ತುಳಿತಿನಿ. ವಕ್ಕಲಿಗ ಬಾಳ ಕಷ್ಟ ಬಂತು. ಎಷ್ಟೆ ಕಷ್ಟ ಬಂದರೂ ನಾ ಕೈಹಿಡಿದು ಕಾಪಾಡುತ್ತೀನಿ. ಹತ್ತು ಮಂದಿ ಒಟ್ಟಾಗಿ ಕೂಡಿ ನನ್ನನ್ನು ಸಿಂಹಾಸನಕ್ಕ ಹಚ್ಚರಿ” ಎಂದು ಹೇಳಲಾಯಿತು.
ನಂತರ ರಾವುತರಾಯ ಬಂಡಿ ಮೆರವಣಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬನ್ನಿ ಮಹಾಕಾಳಿ ವೃಕ್ಷಕ್ಕೆ ತೆರಳಿ ಬನ್ನಿ ಮುಡಿದು ಮಲ್ಲಯ್ಯನ ದೇವಸ್ಥಾನ ತಲುಪಿತು. ಆನಂತರ ರಾವುತರಾಯ- ಗಂಗಿಮಾಳಮ್ಮರ ಮದುವೆಯ ಸಾಂಪ್ರದಾಯಿಕ ರೂಪಕ ಜರುಗಿತು. ಸತತ ಐದು ದಿನಗಳ ಕಾಲ ಜರುಗುವ ಜಾತ್ರಾ ಮಹೋತ್ಸವದ ಮೊದಲ ದಿನ ರಾವುತರಾಯನು ಮಲ್ಲಯ್ಯನ ದೇವಸ್ಥಾನದಲ್ಲಿ ಆಸೀನನಾಗುವುದರೊಡನೆ ಜಾತ್ರೆಗೆ ಚಾಲನೆ ದೊರಕಿತು.
ಜಾತ್ರೆಯ ಅಂಗವಾಗಿ ನಾಟಕ ಕಂಪನಿ, ನೂರಾರು ಮಾರಾಟ ಮಳಿಗೆಗಳು ಹಾಗೂ ಮಕ್ಕಳ ಮನರಂಜನೆಯ ಸಾಧನಗಳ ತಯಾರಿ ಭರದಿಂದ ಆರಂಭಗೊಂಡಿರುವುದು ಕಂಡು ಬಂತು.

