ಉದಯರಶ್ಮಿ ದಿನಪತ್ರಿಕೆ
ಚಡಚಣ: ಮಹಿಳೆಯರು ಅಡುಗೆ ಮನೆಗೆ ಸೀಮಿತವಾಗಿದ್ದ ಕಾಲದಲ್ಲಿ ಎಲ್ಲ ಕಟ್ಟುಪಾಡುಗಳನ್ನು ಮೀರಿ ಖಡ್ಗ ಹಿಡಿದು ಬ್ರಿಟೀಷರ ವಿರುದ್ಧ ಹೋರಾಡಿದ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ. ಅವರ ಸಾಹಸ, ಧೈರ್ಯ ಮತ್ತು ಆತ್ಮಸ್ಥೈರ್ಯದ ಗುಣಗಳನ್ನು ಕೇವಲ ಜಯಂತಿ ಕಾರ್ಯಕ್ರಮಗಳಿಗೆ ಸೀಮಿತಗೊಳಿಸದೆ, ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಇಂಡಿ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಹೇಳಿದರು.
ಇಂಡಿ ಮಿನಿ ವಿಧಾನಸೌಧದ ಆವರಣದಲ್ಲಿ ಚಡಚಣ, ಇಂಡಿ ಹಾಗೂ ಸಿಂದಗಿ ತಾಲೂಕುಗಳ ಅಧಿಕಾರಿಗಳು ಮತ್ತು ವಿವಿಧ ಸಮುದಾಯಗಳ ಪ್ರತಿನಿಧಿಗಳ ಸಹಯೋಗದಲ್ಲಿ ಆಯೋಜಿಸಿದ್ದ ವೀರಮಾತೆ ಕಿತ್ತೂರು ರಾಣಿ ಚೆನ್ನಮ್ಮ ಅವರ 248ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಣಿ ಚೆನ್ನಮ್ಮ ಅವರು ಮಹಿಳೆಯರು ಅಬಲೆಯರಲ್ಲ, ಸವಾಲುಗಳನ್ನು ಎದುರಿಸಿ ಹೋರಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂಬುದನ್ನು ತಮ್ಮ ಜೀವನದ ಮೂಲಕ ಸಾಬೀತುಪಡಿಸಿದ್ದಾರೆ. ಅವರ ಧೈರ್ಯ, ಸಾಹಸ ಮತ್ತು ಹೋರಾಟದ ಮನೋಭಾವ ಇಂದಿನ ಮಹಿಳೆಯರಿಗೆ ಆತ್ಮಸ್ಥೈರ್ಯ ತುಂಬುವ ಶಕ್ತಿಯಾಗಿವೆ. ಅವರ ಆದರ್ಶಗಳನ್ನು ಯುವಜನತೆ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿ ಆಚರಣೆಗೆ ನಿಜವಾದ ಅರ್ಥ ಬರುತ್ತದೆ ಎಂದು ಹೇಳಿದರು.
ಇಂಡಿ ತಹಸೀಲ್ದಾರ್ ಮಾತನಾಡಿದರು.
ಈ ಸಂದರ್ಭದಲ್ಲಿ ವಾಯ್.ಜಿ. ಬಿರಾದಾರ ಅವರು ರಾಣಿ ಚೆನ್ನಮ್ಮ ಅವರ ಜೀವನ, ಹೋರಾಟ ಹಾಗೂ ಐತಿಹಾಸಿಕ ಸಾಧನೆಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಹಾದೇವ ಎವುರ, ಬಾಳು ಮುಳಜಿ, ಬಸವರಾಜ ರಾವೂರ, ಬಿ.ಎಚ್. ಬಿರಾದಾರ, ಎಸ್.ಆರ್. ಬಿರಾದಾರ, ಸಂತೋಷ ಹೋಟಗಾರ, ಆರ್.ಬಿ. ಮೊಗಿ, ವೀಣಾ ಕೋಳೂರಗಿ, ಸೌಜನ್ಯ ಪಾಟೀಲ, ಸೌಮ್ಯ ಚಾಂದಕವಟೆ, ಎಚ್.ಎಚ್. ಗುನ್ನಾಪುರ, ಪಿ.ಎಸ್. ಚೌಡಿಹಾಳ, ಎಸ್.ಎಸ್. ಪೂಜಾರಿ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿ ಹಾಗೂ ಗಣ್ಯರು ಉಪಸ್ಥಿತರಿದ್ದರು.

