ಕೊಲ್ಹಾರ ತಾಲೂಕಿನಲ್ಲಿ ಕಿತ್ತೂರು ಚೆನ್ನಮ್ಮ ಜಯಂತಿ ಸಂಭ್ರಮದಲ್ಲಿ ತಹಶೀಲ್ದಾರ್ ಸಂತೋಷ ಮ್ಯಾಗೇರಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಬ್ರಿಟಿಷರ ಸಾಮ್ರಾಜ್ಯಶಾಹಿ ಆಡಳಿತದ ವಿರುದ್ಧ ಸಿಡಿದೆದ್ದು, ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೊತ್ತಿಸಿದ ವೀರರಾಣಿ ಕಿತ್ತೂರು ಚೆನ್ನಮ್ಮನವರ ಧೈರ್ಯ, ಸಾಹಸ, ಸ್ವಾಭಿಮಾನ ಹಾಗೂ ದೇಶಭಕ್ತಿ ಇಂದಿನ ಯುವಪೀಳಿಗೆಗೆ ಸ್ಫೂರ್ತಿದಾಯಕವಾಗಿವೆ ಎಂದು ತಹಶೀಲ್ದಾರ್ ಸಂತೋಷ ಮ್ಯಾಗೇರಿ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಚೆನ್ನಮ್ಮನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
ರಾಣಿ ಚೆನ್ನಮ್ಮ ಅವರ ಸ್ವಾಭಿಮಾನ ಮತ್ತು ಹೋರಾಟದ ಕೆಚ್ಚೆದೆ ಭಾರತೀಯ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರೇರಣೆಯಾಯಿತು ಎಂದು ಬಣ್ಣಿಸಿದರು.
ಲಿಂಗಾಯತ ಪಂಚಮಸಾಲಿ ಸಮಾಜದ ಮುಖಂಡ ಮಲ್ಲು ದೇಸಾಯಿ ಬೀಳಗಿ ಮಾತನಾಡಿ, ವೀರರಾಣಿ ಕಿತ್ತೂರು ಚೆನ್ನಮ್ಮನವರು ಯಾವುದೇ ಒಂದು ಜಾತಿ, ಸಮುದಾಯ ಅಥವಾ ಪ್ರದೇಶಕ್ಕೆ ಸೀಮಿತರಾದವರಲ್ಲ. ಅವರು ಇಡೀ ದೇಶದ ಹೆಮ್ಮೆಯ ವೀರಮಹಿಳೆ. ನಾಡಿನ ಸ್ವಾಭಿಮಾನಕ್ಕಾಗಿ ಅವರು ನಡೆಸಿದ ಹೋರಾಟ, ತ್ಯಾಗ ಹಾಗೂ ಬಲಿದಾನವನ್ನು ಪ್ರತಿಯೊಬ್ಬರೂ ಸ್ಮರಿಸಬೇಕು ಎಂದರು.
ಮುಖಂಡ ಶ್ರೀಶೈಲ ಪಾರಗೊಂಡ, ದೈಹಿಕ ಶಿಕ್ಷಣ ಶಿಕ್ಷಕ ಮಲ್ಲಿಕಾರ್ಜುನ ಕುಬಕಡ್ಡಿ ಮಾತನಾಡಿದರು.
ಉಪತಹಶೀಲ್ದಾರ್ ಎನ್.ಕೆ. ನದಾಫ್, ಶಿರಸ್ತೇದಾರ ಕೃಷ್ಣಾ ಗೂಡೂರ, ಸಮಾಜದ ಮುಖಂಡರಾದ ಮಲ್ಲು ದೇಸಾಯಿ, ಕಲ್ಲು ಬಾಲಗೊಂಡ, ಬಸವರಾಜ ಬೀಳಗಿ, ವಿನೋದ ಎಂ. ಬೀಳಗಿ, ಸಂತೋಷ ರೂಡಗಿ, ಬಸವರಾಜ ರೂಡಗಿ, ಮಲ್ಲು ಬೀಳಗಿ, ನಿಂಗಪ್ಪ ರೂಢಗಿ, ಬಸವರಾಜ ಎಸ್. ಬೀಳಗಿ, ಪ್ರಜ್ವಲ ಬೆಳ್ಳುಬ್ಬಿ, ಮಳಿಯಪ್ಪ ಪತಂಗಿ, ಯಮನೂರಿ ಹೆರಕಲ್, ಭೀಮು ಹೆರಕಲ್, ಮುಖಂಡ ಯಮನೂರಿ ಮಾಕಾಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಚೆನ್ನಮ್ಮ ವೃತ್ತದಲ್ಲಿ ಪುಷ್ಪನಮನ
ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ರಾಣಿ ಚೆನ್ನಮ್ಮ ವೃತ್ತದಲ್ಲಿ ಚೆನ್ನಮ್ಮನವರ ಭಾವಚಿತ್ರಕ್ಕೆ ತಹಶೀಲ್ದಾರ್ ಸಂತೋಷ ಮ್ಯಾಗೇರಿ ಪೂಜೆ ಸಲ್ಲಿಸಿ ಪುಷ್ಪಾರ್ಚನೆಗೈದರು.
ರೋಣಿಹಾಳದಲ್ಲೂ ಚೆನ್ನಮ್ಮ ಜಯಂತಿ ಸಂಭ್ರಮ
ಕೊಲ್ಹಾರ: ತಾಲೂಕಿನ ರೋಣಿಹಾಳ ಗ್ರಾಮದ ನವನಗರದಲ್ಲಿಯೂ ವೀರರಾಣಿ ಕಿತ್ತೂರು ಚೆನ್ನಮ್ಮನವರ ಜಯಂತಿಯನ್ನು ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.
ಶ್ರೀ ವೀರರಾಣಿ ಕಿತ್ತೂರು ಚೆನ್ನಮ್ಮ ತರುಣ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಚೆನ್ನಮ್ಮನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಅರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ವೀರರಾಣಿ ಕಿತ್ತೂರು ಚೆನ್ನಮ್ಮ ತರುಣ ಮಂಡಳಿಯ ಪದಾಧಿಕಾರಿಗಳು, ಸದಸ್ಯರು, ಸಮಾಜದ ಹಿರಿಯರು ಹಾಗೂ ಯುವಕರು ಪಾಲ್ಗೊಂಡಿದ್ದರು.
ತಾಲೂಕಿನ ವಿವಿಧೆಡೆ ನಡೆದ ಜಯಂತ್ಯುತ್ಸವಗಳಲ್ಲಿ ವೀರರಾಣಿಯ ಶೌರ್ಯ, ಸ್ವಾಭಿಮಾನ ಹಾಗೂ ದೇಶಭಕ್ತಿಯನ್ನು ಸ್ಮರಿಸುವ ಮೂಲಕ ಗೌರವ ಸಲ್ಲಿಸಲಾಯಿತು.

