ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಅಪ್ರತಿಮ ದಿಟ್ಟತನದ ದೀಪ್ತಿ, ಹೆಮ್ಮೆಯ ಛಲಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮಳ ಯಶೋಗಾಥೆ ವೀರೋಚಿತವಾಗಿದೆ. ಮಹಾನ್ ವೀರವನಿತೆಯ ಶೌರ್ಯ, ತ್ಯಾಗ ಹಾಗೂ ಕೆಚ್ಚೆದೆಯ ಹೋರಾಟ ಅವಿಸ್ಮರಣೀಯವಾಗಿದ್ದು, ಭಾರತಾಂಬೆಯ ಜನತೆ ಎಂದಿಗೂ ಮರೆಯಲಾರರು ಎಂದು ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ ನುಡಿದರು.
ಇಲ್ಲಿನ ಆರ್.ಬಿ.ಪಿ.ಜಿ. ಹಳಕಟ್ಟಿ ಪ್ರೌಢಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚೆನ್ನಮ್ಮ ಅವರ ೨೪೮ನೇ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಧ್ವನಿ ಎತ್ತಿ ಕಹಳೆ ಮೊಳಗಿಸಿದ ಮೊದಲ ವೀರ ಮಹಿಳೆ ಚೆನ್ನಮ್ಮ. ಈ ನೆಲದ ಮಹಾತಾಯಿಯ ಸಾಧನೆ ಚಿನ್ನದಂಥದ್ದು, ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದಿದೆ ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಬಿ.ಬಿ.ಕುಂದರಗಿ, ಟಿ.ಬಿ.ಮೇಟಿ, ವಿಶಾಲ ರಾಠೋಡ ಹಾಗೂ ಶಿಕ್ಷಕರಾದ ಎನ್.ಎಸ್.ಬಿರಾದಾರ, ಆರ್.ಎಂ.ರಾಠೋಡ ಸೇರಿದಂತೆ ಇತರರು ಇದ್ದರು.

