ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಈಶಾನ್ಯ ಶಿಕ್ಷಕರ ಮತಕ್ಷೇತ್ರದ ವಿಧಾನಪರಿಷತ್ ಚುನಾವಣೆಯ ಮತದಾನವು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮತಗಟ್ಟೆ ಸಂಖ್ಯೆ 103ರಲ್ಲಿ ಶುಕ್ರವಾರ ಶಾಂತಿಯುತವಾಗಿ ಜರುಗಿತು.
ಬೆಳಿಗ್ಗೆ 8:00 ಗಂಟೆಗೆ ಆರಂಭಗೊಂಡ ಮತದಾನ ಪ್ರಕ್ರಿಯೆಯು ಸಂಜೆ 4:00 ಗಂಟೆಯವರೆಗೆ ನಡೆಯಿತು. ಕೆಂಭಾವಿ, ನಗನೂರು, ತಿಪ್ಪನಟಿಗಿ, ಯಾಳಗಿ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಒಟ್ಟು 111 ಶಿಕ್ಷಕ ಮತದಾರರಲ್ಲಿ (95 ಪುರುಷರು, 16 ಮಹಿಳೆಯರು), ಒಟ್ಟು 103 ಮತದಾರರು (90 ಪುರುಷರು, 13 ಮಹಿಳೆಯರು) ತಮ್ಮ ಹಕ್ಕು ಚಲಾಯಿಸಿದ್ದಾರೆ. ಇದರಿಂದಾಗಿ ಮತಗಟ್ಟೆಯಲ್ಲಿ ಶೇಕಡಾ 92.79% ಮತದಾನ ದಾಖಲಾಗಿದೆ ಎಂದು ಮತಗಟ್ಟೆ ಅಧಿಕಾರಿ ಸುಗಪ್ಪ ಮಾಹಿತಿ ನೀಡಿದ್ದಾರೆ.
ಚುನಾವಣಾ ಕಣದಲ್ಲಿ ಬಿಜೆಪಿ ಹಾಗೂ ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಶಶೀಲ್ ಜಿ. ನಮೋಶಿ, ಕಾಂಗ್ರೆಸ್ ಪಕ್ಷದಿಂದ ಶರಣಪ್ಪ ಮಟ್ಟೂರು, ಜನತಾ ದಳ (ಯು)ನಿಂದ ಎಸ್. ಎಲ್. ಪಾಟೀಲ ಹಾಗೂ ಆಮ್ ಆದ್ಮಿ ಪಕ್ಷದಿಂದ ಸಾಯಬಣ್ಣ ಸ್ಪರ್ಧಿಸಿದ್ದಾರೆ. ಇವರೊಂದಿಗೆ ಕವಿರಾಜ, ತುಳಸಪ್ಪ ದಾಸರ, ಮಹಬೂಬ್ ವಂಟೇಲ್, ರಾಜಕುಮಾರ, ರಾಜು, ಶರಣಬಸಪ್ಪ, ಶಶಿಧರ, ಶಿವಶಂಕರ ಹಾಗೂ ಸುರೇಶ ಸೇರಿದಂತೆ ಒಟ್ಟು 13 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಪಿಎಸ್ಐ ಸುವರ್ಣ ವಿ. ಮಲ್ಲಶೆಟ್ಟಿ ಅವರ ನೇತೃತ್ವದಲ್ಲಿ ಮತಗಟ್ಟೆ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
