ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರಾಜ್ಯಮಟ್ಟದ ಚಿಣ್ಣರ ಕಲಾಶ್ರೀ ಶಿಬಿರಕ್ಕೆ ೯ರಿಂದ ೧೬ ವರ್ಷದೊಳಗಿನ ಪ್ರತಿಭಾವಂತ ಮಕ್ಕಳನ್ನು ಆಯ್ಕೆ ಮಾಡಲು ಅಕ್ಟೋಬರ್ ೨೯ರಂದು ಬೆಳಿಗ್ಗೆ ೧೧ ಗಂಟೆಗೆ ನಗರದ ಜಿಲ್ಲಾ ಬಾಲಭವನದಲ್ಲಿ ಜಿಲ್ಲಾ ಮಟ್ಟದ ಸ್ಪರ್ಧೆ ಆಯೋಜಿಸಲಾಗಿದೆ.
ಸೃಜನಾತ್ಮಕ ಕಲೆ: ಚಿತ್ರಕಲೆ, ಕರಕುಶಲ ಕಲೆ ಹಾಗೂ ಜೇಡಿಮಣ್ಣಿನ ಕಲೆ ವಿಭಾಗಗಳಲ್ಲಿ ಮಕ್ಕಳು ಕಡ್ಡಾಯವಾಗಿ ಭಾಗವಹಿಸಬೇಕು.
ಸೃಜನಾತ್ಮಕ ಬರವಣಿಗೆ: ಕಥೆ, ಕವನ ಹಾಗೂ ಪ್ರಬಂಧ ಬರವಣಿಗೆ ವಿಭಾಗಗಳಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು.
ಸೃಜನಾತ್ಮಕ ಪ್ರದರ್ಶನ ಕಲೆ: ಶಾಸ್ತ್ರೀಯ ನೃತ್ಯ, ಜಾನಪದ ನೃತ್ಯ, ಕರ್ನಾಟಕ ಹಾಗೂ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ, ವಾದ್ಯ ಸಂಗೀತ, ಸುಗಮ ಸಂಗೀತ, ಏಕಪಾತ್ರಾಭಿನಯ ಮತ್ತು ಯೋಗನೃತ್ಯ ಇವುಗಳಲ್ಲಿ ಯಾವುದಾದರೂ ಒಂದು ಕಲೆಯನ್ನು ಪ್ರದರ್ಶಿಸಲು ಅವಕಾಶವಿದೆ. ಗುಂಪು ಪ್ರದರ್ಶನಕ್ಕೆ ಅವಕಾಶವಿರುವುದಿಲ್ಲ.
ವಿಜ್ಞಾನದಲ್ಲಿ ನೂತನ ಆವಿಷ್ಕಾರ: ವಿಜ್ಞಾನಕ್ಕೆ ಸಂಬಂಧಿಸಿದ ವಿಷಯದ ಕುರಿತು ಮಾದರಿ ಸಿದ್ಧಪಡಿಸಿ, ಅದರ ಕಾರ್ಯವೈಖರಿ ಹಾಗೂ ಮಹತ್ವವನ್ನು ವಿವರಿಸಬೇಕು. ಅಲ್ಲದೆ, ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ತೀರ್ಪುಗಾರರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಬೇಕು. ಪ್ರತಿಯೊಬ್ಬ ಸ್ಪರ್ಧಿಯೂ ಪ್ರತ್ಯೇಕ ಮಾದರಿಯನ್ನು ಪ್ರದರ್ಶಿಸುವುದು ಕಡ್ಡಾಯವಾಗಿದೆ.
ವಿಶೇಷಚೇತನ ಹಾಗೂ ಬುಡಕಟ್ಟು ಪ್ರದೇಶದ ಮಕ್ಕಳಿಗೂ ಮೇಲಿನ ಯಾವುದೇ ಸ್ಪರ್ಧಾ ವಿಭಾಗದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಸ್ಥಳೀಯ ಮಟ್ಟದಲ್ಲಿ ಆಯ್ಕೆಯಾದ ೯ರಿಂದ ೧೬ ವರ್ಷದೊಳಗಿನ ಪ್ರತಿಭಾವಂತ ಮಕ್ಕಳನ್ನು ರಾಜ್ಯಮಟ್ಟದ ‘ಚಿಣ್ಣರ ಕಲಾಶ್ರೀ’ ಶಿಬಿರಕ್ಕೆ ನಿಯೋಜಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ ೭೭೬೦೪೦೨೨೩೯ ಸಂಪರ್ಕಿಸಬಹುದು. ಈ ಕುರಿತು ಹೆಚ್ಚಿನ ಸಂಖ್ಯೆಯ ಮಕ್ಕಳಿಗೆ ಮಾಹಿತಿ ತಲುಪಿಸುವ ಉದ್ದೇಶದಿಂದ ಸಾರ್ವಜನಿಕರು ಹಾಗೂ ಪೋಷಕರು ಸ್ಪರ್ಧೆಯಲ್ಲಿ ಭಾಗವಹಿಸಲು ಮಕ್ಕಳನ್ನು ಪ್ರೋತ್ಸಾಹಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ್ಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

