ಶತಮಾನದ ಇತಿಹಾಸವನ್ನು ಹೊಂದಿರುವ ವಿಜಯಪುರದ ರಾಣಿ ಚೆನ್ನಮ್ಮ ನಾಟ್ಯ ಮಂದಿರ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಕೇಂದ್ರ ಬಸ್ ನಿಲ್ದಾಣದ ಮುಂದೆ ಇರುವ ಐತಿಹಾಸಿಕ ರಾಣಿ ಚೆನ್ನಮ್ಮ ನಾಟ್ಯ ಮಂದಿರವು ಶತಮಾನದ ಇತಿಹಾಸವನ್ನು ಹೊಂದಿದೆ ಇಂತಹ ಐತಿಹಾಸಿಕ ನಾಟ್ಯ ಮಂದಿರದ ಹಳೆ ಕಟ್ಟಡವನ್ನು ಜೀರ್ಣೋದ್ದಾರದ ನೆಪದಲ್ಲಿ ತೆರವುಗೊಳಿಸಿ ಕಟ್ಟಡವನ್ನು ಪ್ರಾರಂಭ ಮಾಡದೆ ಇರುವುದು ಖಂಡನೀಯ ಕೂಡಲೇ ನಾಟ್ಯ ಮಂದಿರ ಕಾಮಗಾರಿ ಪ್ರಾರಂಭ ಮಾಡಬೇಕು ಎಂದು ಸಾಮಾಜಿಕ ಹೋರಾಟಗಾರ ಸುರೇಶ ಬಿರಾದಾರ ವಿಜಯಪುರ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಆಗ್ರಹಿಸಿದರು.
ಅವರು ವಿಜಯಪುರ ಮಹಾನಗರ ಪಾಲಿಕೆ ಆಯುಕ್ತರ ಕಚೇರಿ ಮುಂದೆ ರಾಣಿ ಚೆನ್ನಮ್ಮ ನಾಟ್ಯ ಮಂದಿರ ಹೋರಾಟ ಸಮಿತಿಯಿಂದ ಹಮ್ಮಿಕೊಂಡಿದ್ದ ಧರಣಿಯಲ್ಲಿ ಅವರು ಮಾತನಾಡಿದರು.
ಹೋರಾಟಗಾರರಾದ ಲಾಯಪ್ಪ ಇಂಗಳೆ ಹಾಗೂ ವಿನೋದ ಖೇಡ ಅವರು ಮಾತನಾಡಿ, ವಿಜಯಪುರ ನಗರದ ಕಿತ್ತೂರು ರಾಣಿ ಚೆನ್ನಮ್ಮ ನಾಟ್ಯ ಮಂದಿರವನ್ನು ಉಳಿಸಲು ರಾಣಿ ಚೆನ್ನಮ್ಮ ನಾಟ್ಯ ಮಂದಿರ ಹೋರಾಟ ಸಮಿತಿ ನಿರಂತರ ಹೋರಾಟ ಮಾಡುತ್ತ ಬಂದಿದೆ, ಸಮಿತಿಯ ಹೋರಾಟಕ್ಕೆ ಮಣಿದು ಹಿಂದಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಭೂಮಿ ಪೂಜೆ ಮಾಡಿದರು ಕೂಡಾ ಇಲ್ಲಿಯವರೆಗೆ ನಾಟ್ಯ ಮಂದಿರದ ಕಾಮಗಾರಿ ಪ್ರಾರಂಭ ಮಾಡದೆ ಇರುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ ಅವರು, ಕೂಡಲೇ ನಾಟ್ಯ ಮಂದಿರದ ಕಟ್ಟಡ ಕಾಮಗಾರಿ ಪ್ರಾರಂಭ ಮಾಡಬೇಕು ಎಂದು ಆಗ್ರಹಿಸಿದರು.
ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣವರ ಹಾಗೂ ಅಧೀಕ್ಷಕ ಅಭಿಯಂತರಾದ ತಿಮ್ಮಪ್ಪ ಇ ಅವರು ಪಾಲಿಕೆ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಆದಷ್ಟು ಬೇಗನೆ ರಾಣಿ ಚೆನ್ನಮ್ಮ ನಾಟ್ಯ ಮಂದಿರ ಕಾಮಗಾರಿ ಪ್ರಾರಂಭ ಮಾಡುತ್ತೇವೆ ಎಂದು ಭರವಸೆ ನೀಡಿದ ಹಿನ್ನೆಲೆ ಧರಣಿ ಹೋರಾಟಗಾರರು ಧರಣಿ ಹಿಂಪಡೆದರು.
ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಹಿರಿಯ ಮುಖಂಡ ರಮೇಶ ನಿಡೋಣಿ, ನ್ಯಾಯವಾದಿ ದಾನೇಶ ಅವಟಿ ಉಪಸ್ಥಿತರಿದ್ದರು.

