ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ದ್ವೈತ ಸಿದ್ಧಾಂತದ ಮೂಲಕ ಭಾರತೀಯ ತತ್ವಜ್ಞಾನ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಶ್ರೀಮಂತಗೊಳಿಸಿದ ಮಧ್ವಾಚಾರ್ಯರ ಜಯಂತಿಯನ್ನು ಸರ್ಕಾರಿ ಮಟ್ಟದಲ್ಲಿ ಆಚರಿಸುವ ನಿರ್ಧಾರ ಶ್ಲಾಘನೀಯ ಎಂದು ಉತ್ತರಾಧಿ ಮಠದ ಅರ್ಚಕ ವಿಠ್ಠಲಾಚಾರ್ಯ ಅಭಿಪ್ರಾಯಪಟ್ಟರು.
ತಾಲ್ಲೂಕು ಆಡಳಿತ ಹಾಗೂ ಸಿಂದಗಿ ಬ್ರಾಹ್ಮಣ ಸಮಾಜದ ವತಿಯಿಂದ ಆಯೋಜಿಸಿದ್ದ ಮಧ್ವಾಚಾರ್ಯರ 788ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಧ್ವಾಚಾರ್ಯರು ತಮ್ಮ ತಾತ್ವಿಕ ಚಿಂತನೆ ಹಾಗೂ ಗ್ರಂಥಗಳ ಮೂಲಕ ಭಕ್ತಿ, ಜ್ಞಾನ ಮತ್ತು ಧಾರ್ಮಿಕ ಮೌಲ್ಯಗಳ ಮಹತ್ವವನ್ನು ಸಾರಿದ್ದಾರೆ. ಉಡುಪಿಯಲ್ಲಿ ಶ್ರೀಕೃಷ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಧಾರ್ಮಿಕ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ತತ್ವಗಳನ್ನು ಸಮಾಜದ ಎಲ್ಲ ವರ್ಗಗಳಿಗೂ ಪರಿಚಯಿಸುವ ಕಾರ್ಯ ನಡೆಯಬೇಕಿದೆ ಎಂದರು.
ಸರ್ಕಾರಿ ಮಟ್ಟದಲ್ಲಿ ಜಯಂತಿ ಆಚರಿಸುವುದರಿಂದ ಮಧ್ವಾಚಾರ್ಯರ ಜೀವನ ಸಾಧನೆಗೆ ಹೆಚ್ಚಿನ ಪ್ರಚಾರ ದೊರೆಯಲಿದೆ. ಮುಂದಿನ ಪೀಳಿಗೆಯಲ್ಲಿ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಅರಿವು ಬೆಳೆಸಲು ಇದು ಸಹಕಾರಿಯಾಗಲಿದೆ. ಸಮಾಜದ ಧಾರ್ಮಿಕ ಭಾವನೆಗಳಿಗೆ ಸ್ಪಂದಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ರಾಘವೇಂದ್ರ ಸ್ವಾಮಿಗಳ ಮಠದಿಂದ ಮಧ್ವಾಚಾರ್ಯರ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಯಿತು. ಭಜನೆ ಹಾಗೂ ಹಾಡುಗಳ ಮೂಲಕ ಸಾಗಿದ ಮೆರವಣಿಗೆಯಲ್ಲಿ ಬ್ರಾಹ್ಮಣ ಸಮಾಜದ ಹಿರಿಯರು, ಯುವಕರು ಮತ್ತು ಮಹಿಳೆಯರು ಭಾಗವಹಿಸಿದ್ದರು.

