ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆ (ಸಿಐಐಎಲ್) ಕನ್ನಡ ಭಾಷಾ ಯೋಜನಾಧಿಕಾರಿಯಾಗಿ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಕೆ.ರವೀಂದ್ರನಾಥ ನೇಮಕ ತನ್ನಿಮಿತ್ತ ವಿಶೇಷ ಲೇಖನ
ಲೇಖನ:
– ಡಾ.ಸಂತೋಷ ಬಿ.ನವಲಗುಂದ.
ವಿಜಯಪುರ
ಉದಯರಶ್ಮಿ ದಿನಪತ್ರಿಕೆ
ಕನ್ನಡ ನೆಲ ತನ್ನ ಹಿರಿಮೆ-ಗರಿಮೆಯಿಂದ ಅನೇಕ ಸಂಶೋಧಕ, ಇತಿಹಾಸಕಾರರಿಗೆ ಸ್ಪೂರ್ತಿ ಹಾಗೂ ಪ್ರೇರಣೆ ನೀಡಿದೆ. ನಾಡ ಉದ್ದಗಲಕ್ಕೂ ಸಂಚರಿಸುವಂತೆ ಮಾಡಿ ಹೊಸ ಬೆಳಗಿನತ್ತ ಕುತೂಹಲಿಗಳನ್ನಾಗಿಸಿದೆ. ವಿಶ್ವವಿದ್ಯಾಲಯಗಳು ಸಂಶೋಧನೆ, ಸಂಪಾದನೆ, ಚಾರಿತ್ರಿಕ,ಶಾಸನ ಇಂತಹ ಅನೇಕ ಸಂಗತಿಗಳ ಬಗೆಗೆ ಶಾಸ್ತ್ರೀಯವಾಗಿ ಅಧ್ಯಯನ ಮಾಡುತ್ತ ಬಂದಿವೆ. ಎಲ್ಲ ವಿವಿಗಳ ಗುರಿ ಉದ್ದೇಶಗಳು ಒಂದೇ ಆಗಿದ್ದರೂ ಅವುಗಳ ಕಾರ್ಯ ವೈಖರಿ ಭಿನ್ನವಾಗಿದೆ. ಭಾರತದಲ್ಲಿರುವ ವಿವಿಗಳಲ್ಲಿ ಕನ್ನಡ ವಿಶ್ವವಿದ್ಯಾಲಯ
(ಹಂಪಿ) ಬಲು ಅಪರೂಪದ ವಿವಿಯಂತೆ ಕಾಣುತ್ತದೆ. ಈ ಮಾತಿನ ಅಸಲಿ ಇಷ್ಟೆ! ಕನ್ನಡ ವಿವಿಯು ಹುಟ್ಟು ಪಡೆದ ಉದ್ದೇಶ, ನೋಟ ಹಾಗೂ ಆಲೋಚನೆ ಮತ್ತು ಯೋಜನೆ ನಾಡಿನಲ್ಲಿರುವ ವಿವಿಗಳಲ್ಲೆ ಬೇರೆಯಾಗಿಯೇ ಇದೆ. ಡಾ. ಚಂದ್ರಶೇಖರ ಕಂಬಾರರು, ಡಾ. ಎಂ.ಎಂ.ಕಲಬುರ್ಗಿ ಅವರಂತಹ ಚತುರ ವಿದ್ವಜ್ಜನರ ಮಹತ್ವಾಕಾಂಕ್ಷೆಯ ಕೂಸು ಎಂದರೆ ಅಲ್ಲಗಳೆಯುವ ಮಾತೇ ಇಲ್ಲ. ಈ ತೆರನಾಗಿ ಹುಟ್ಟಿ ಬೆಳೆದ ವಿವಿಯು ಮೇಧಾವಿ ವಿದ್ವಾಂಸರ ಪಡೆಯನ್ನೆ ಹೊಂದುತ್ತ ಬಂದಿದೆ. ಅಲ್ಲಿರುವ ಹಲವು ವಿಭಾಗಗಳಲ್ಲಿ ಹಸ್ತಪ್ರತಿಶಾಸ್ತ್ರ ತನ್ನ ಅಮೂಲ್ಯ ಪ್ರಾಚೀನ ಭಂಡಾರದಿಂದ ಇಡೀ ವಿಶ್ವವಿದ್ಯಾಲಯಕ್ಕೆ ಮೆರುಗು ನೀಡುತ್ತಿದೆ. ಹತ್ತತ್ರ ಎರಡು ವರ್ಷಗಳ ಹಿಂದೆ ಇದೇ ವಿಭಾಗದಿಂದ ಬರೀ ವಯೋ ನಿವೃತ್ತಿ ಹೊಂದಿದವರು ಪ್ರೊ. ಕೆ.ರವೀಂದ್ರನಾಥರು.
ಇವರು ಸಂಶೋಧನೆ, ಸಂಪಾದನಾ ಶಾಸ್ತ್ರ, ಹಸ್ತಪ್ರತಿ ಶಾಸ್ತ್ರಗಳಂತಹ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ದಿನದ ಬಹುತೇಕ ಸಮಯ ಅಧ್ಯಯನ, ಅಧ್ಯಾಪನ, ಕ್ಷೇತ್ರಕಾರ್ಯ ಹಾಗೂ ಶರಣ ಸಾಹಿತ್ಯ ಸಂಘಟನೆಯಲ್ಲಿ ಮೀಸಲಾದವರು. ಇದರ ಜೊತೆಗೆ ವಿದ್ಯಾರ್ಥಿಸ್ನೇಹಿ ಪ್ರಾಧ್ಯಾಪಕರಾಗಿ ಸಾವಿರಾರು ಸಂಶೋಧನಾರ್ಥಿಗಳ ಅಚ್ಚು ಮೆಚ್ಚಿನ ಪ್ರೊಫೆಸರ್. ಅಲ್ಲದೇ ಕತ್ತಲೆಯಲ್ಲಿ ಬೆಳಕಿನ ಹುಡುಕಾಟಕ್ಕಾಗಿ ಅಲೆದಾಡುತ್ತಿರುವ ಅಂಬೆಗಾಲಿನ ಸಂಶೋಧನಾರ್ಥಿಗಳಿಗೆ ಈಗೋ! ಅಲ್ಲಿದೆ ನೋಡು ಬೆಳಕು!! ಎಂದು ಹೊಸಬೆಳಕಿನ ಹಾದಿ ತೋರಿ ಗಟ್ಟಿ ಹೆಜ್ಜೆ ಹಾಕಲು ಸ್ಪೂರ್ತಿ ಹಾಗೂ ಪ್ರೇರಣೆ ನೀಡಿದವರು. ಈಗಲೂ ಅವರು ಈ ಕಾರ್ಯವೈಖರಿಯಿಂದ ವಿಮುಖರಾಗಿಲ್ಲ. ಅದಕ್ಕಂತೆ ನಾ ಈ ಮೊದಲು ಹೇಳಿದೆನಲ್ಲಾ ಬರೀ ವಯೋ ನಿವೃತ್ತಿ ಅಷ್ಟೇ. ಪ್ರವೃತ್ತಿ ಮಾತ್ರ ನಿತ್ಯ, ನಿರಂತರ ನೂತನವಾಗಿರಿಸಿ ಸಾಗುವವರು. ಎಷ್ಟೋ ಸರ್ಕಾರಿ ಜನ ತಮ್ಮ ಅರವತ್ತರ ವಯೋಕಾಲದ ಸಮಯಕ್ಕಾಗಿ ಕಾದು ಅದಾದ ಬಳಿಕ ವಿಶ್ರಾಂತಿಯ ಜೀವನ ನಡೆಸಿ ಕುಟುಂಬದೊಂದಿಗೆ ಇಡೀ ಸಮಯವೇ ಕಳೆಯುವ ಅವಕಾಶವನ್ನು ಬಳಸಿಕೊಂಡು ಬಿಡುವುದು ಸಾಮಾನ್ಯವಾಗಿರುತ್ತದೆ. ಆದರೆ ಪ್ರೋ. ಕೆ. ರವೀಂದ್ರನಾಥರು ಈ ವಿಷಯದಿಂದ ಸ್ವಲ್ಪ ದೂರ ಉಳಿದವರು. ಇವತ್ತಿಗೂ ತಮ್ಮ ಕ್ಷೇತ್ರಕಾರ್ಯದ ಮುಖೇನ ಸಂಶೋಧನೆ, ಶರಣ ಸಾಹಿತ್ಯ ಸಂಘಟನೆ, ಕಿರಿಯರಿಗೆ ಮಾರ್ಗದರ್ಶನ ಮುಂದುವರೆಸಿಕೊಂಡು ಬಂದವರು. ಏನಪ್ಪಾ ಈ ವಿದ್ವಾಂಸರ ಬಗ್ಗೆ ಇಷ್ಟೊಂದು ಬರೀತಾನೆ ಅಂದ್ರೆ ಇವರಲ್ಲೇನು ಅಂತಹ ವಿಶೇಷ ಎಂದು ಓದುಗ ಮಿತ್ರರಿಗೆ ಅನಿಸಬಹುದು. ಅದು ಹಾಗೆ ಅನಿಸಲೇಬೇಕು. ಹೀಗನಿಸಿದಾಗ ಮಾತ್ರ ನಾ ಹೇಳಿದ್ದು ನೀವು ತಿಳಿದದ್ದಕ್ಕೂ ಬರೆದ ಪೆನ್ನು ಸಾರ್ಥಕ ಭಾವ ಅನುಭವಿಸುತ್ತದೆ. ಹಾದಿ ಬೀದಿಗಳಲ್ಲಿ ವಾದ, ಮೊಂಡುವಾದ, ತರ್ಕ, ಅರ್ಥವಿಲ್ಲದ, ಆಳ ಅಗಲಗಳಿಲ್ಲದ, ತಳಸ್ಪರ್ಶಿ ಅಧ್ಯಯನಗಳಿಲ್ಲದ ವಿದ್ವಜ್ಜನರ ಕಾರ್ಯಭಾರಗಳಿಗೆಇವತ್ತಿನ ಹೊತ್ತು ಸಾಕ್ಷಿಯಾಗಿದೆ ಎಂಬುದು ನಾನು ಗಂಟು ಬಿಚ್ಚಿ ಹೇಳಬೇಕಿಲ್ಲ. ಈ ಕಾಲದ ದಿನಗಳು ಎಲ್ಲವೂ ಎಲ್ಲರಿಗೂ ವಿದ್ವತ್ ಲೋಕ ಆಶ್ಚರ್ಯ ನೀಡುತ್ತಲೇ ಸಾಗಿದೆ. ತಮ್ಮ ತಮ್ಮ ಮೂಗಿನ ನೇರಕ್ಕೆ ಅವರವರ ಮಾತುಗಳು. ಇದೇ ಸತ್ಯ ಎಂದು ಬಲವಂತದ ಹೇರಿಕೆಯ ಪ್ರಸಂಗಗಳಿಗೆ ಬರ ಅಂತು ಇಲ್ಲವೇ ಇಲ್ಲ. ನಾಡಿನ, ದೇಶದ ಕೆಲ ಸೋ ಕಾಲ್ಡ್ ಬುದ್ಧಿ ಜೀವಿಗಳ ಅಸ್ಪಷ್ಟ , ಸಾರ್ವಕಾಲಿಕ ಸತ್ಯವಲ್ಲದ ಹೇಳಿಕೆಗಳಿಂದ ತಮ್ಮನ್ನು ತಾವು ಪ್ರಸಿದ್ಧಿ ಪಡೆಯುತ್ತಿರುವುದನ್ನು ಕಾಣುತ್ತಿದ್ದೇವೆ. ಯಾವುದೋ ಒಂದು ಸಿದ್ಧಾಂತಕ್ಕೆ ಜೋತು ಬಿದ್ದು ಜೊತೆ ಜೊತೆಗೇ ಬೆಳದು ಬಂದ ಸಿದ್ಧಾಂತಗಳನ್ನು ಅಲ್ಲಗಳೆಯುವ ಅಥವಾ ಅವುಗಳ ಕುರಿತು, ವೇದಿಕೆಯ ಮೇಲೆ ಕುಹಕತನದ ಮಾತುಗಳನ್ನಾಡಿ ಕೇಳುಗ ತನಗೆ ಅರ್ಥ ಆಗದಿದ್ದರೂ ಆಯೋಜಕ ತಟ್ಟಿದ ಹಸ್ತಗಳನ್ನು ನೋಡಿ ಜೋರಾದ ಚಪ್ಪಾಳೆ ಗಿಟ್ಟಿಸಿಕೊಳ್ಳುವ ಅಥವಾ ವಿಡಂಬನೆಯ ವಿಚಾರ ಮಂಡಿಸುವ ಮೊಂಡ ವಿದ್ವಾಂಸರ ಸಾಲು ಸಾಲು ಪಟ್ಟಿಯೇ ಇದೆ. ಅದರ ಬಗ್ಗೆ ಹೆಚ್ಚು ಚರ್ಚೆ ಮಾಡಿ ಸಮಯ ಹಾಳು ಮಾಡುವುದರಲ್ಲಿ ಯಾವ ಅರ್ಥವೂ ಇಲ್ಲ.

ಆದರೆ ಪ್ರೊ.ಕೆ. ರವೀಂದ್ರನಾಥರು ಈ ಎಲ್ಲ ಸಂಗತಿಗಳಿಂದ ಬಲು ದೂರ ನಿಂತವರು. ತಾವು ಕೈಗೊಳ್ಳುವ ಕಾರ್ಯ ಯೋಜನೆಗಳು ಇಂತದ್ದಕ್ಕೆ ಸೀಮೀತ ಎಂದೇನಿಲ್ಲ. ಅದು ಪ್ರಾಚೀನವೇ ಇರಲಿ ಆಧುನಿಕವೇ ಇರಲಿ, ಶಾಸನವೇ ಇರಲಿ ಸಂಪಾದನ ಶಾಸ್ತ್ರವೇ ಇರಲಿ, ಹೊಸದೇ ಇರಲಿ ಹಳೆಯ ಹಸ್ತಪ್ರತಿಯೇ ಇರಲಿ, ಚಾರಿತ್ರಿಕವೇ ಇರಲಿ ವ್ಯಕ್ತಿ ಚರಿತ್ರೆಯೇ ಇರಲಿ, ಶರಣ ಸಾಹಿತ್ಯವೇ ಇರಲಿ, ಪುರಾಣ ಕಾವ್ಯವೇ ಇರಲಿ, ವೇದಾಗಮ ಶಾಸ್ತ್ರಗಳೇ ಇರಲಿ ವಚನ ಸಾಹಿತ್ಯವೇ ಇರಲಿ, ಎಲ್ಲವನ್ನೂ ಸಮಾನವಾಗಿ ಕಾಣುವ, ಅವಲೋಕಿಸುವ, ಹೊಸಬೆಳಕಿಗೆ ಅಗತ್ಯವಿರುವ ಜ್ಞಾನ ಪಡೆಯುವ ಆದರ್ಶ ವಿದ್ವಾಂಸರ ಸಾಲಿನಲ್ಲಿ ಅಗ್ರಗಣ್ಯರು ಡಾ.ಕೆ. ರವೀಂದ್ರನಾಥರು. ಅಲ್ಲದೇ ಕಿರಿಯರಿಗೆ ಮಾಡುವ ಮಾರ್ಗದರ್ಶನವೂ ವಿಶಿಷ್ಟ ರೀತಿಯದ್ದು. ಸಂಶೋಧನೆ ಕೆಲಸ ಕಠಿಣ ಎಂದು, ಕೈಗೊಂಡ ಕೆಲಸ ಬಿಟ್ಟು ಓಡಿ ಹೋಗುವ ವಿದ್ಯಾರ್ಥಿಗಳಿಗೆ ಸರಳ ದಾರಿಯ ಮೂಲಕ ಗುರಿ ತೋರಿಸಿದ ಕ್ರಿಯಾಶೀಲ ಗುರುಗಳಿವರು. ಆದರೆ ಸಂಶೋಧನಾ ಕಾರ್ಯದಲ್ಲಿ ಆಲಸ್ಯಕ್ಕೆ, ಭಾವನಾತ್ಮಕ ರೋಲ್ ಗೆ ಎಂದಿಗೂ ಆಸ್ಪದ ಕೊಟ್ಟವರಲ್ಲ. ವಿದ್ಯಾರ್ಥಿಗಳು ಆಲಸ್ಯ ಅಥವಾ ಓದಿ, ತಿಳಿಯದೇ ಬರೆದರೆ ಮುಖಕ್ಕೆ ಹೊಡೆದಂತೆ ಬೈಯ್ದು ಸಿಟ್ಟಾಗಿ ಒಂದೆರಡು ಮಾತುಗಳನ್ನಾಡಿ ಬಿಡುವರು. ಹೀಗೆಂದ ಮಾತ್ರಕ್ಕೆ ಸಿಡುಕಿನ ಸ್ವಭಾವ ದವರಂತಲ್ಲ. ನಿಜಕ್ಕೂ ತಾಯಿ ಕರುಳಿನ ಗುಣದವರು. ವಿದ್ಯಾರ್ಥಿಗಳಿಗೆ ತಂದೆ ಸ್ವರೂಪಿಗಳು. ವಿವಿ ಯಲ್ಲಿದ್ದಾಗ ಯಾರಾದರೂ ಸಂಶೋಧನಾರ್ಥಿಗಳು ಮುಖ ಸಪ್ಪಗೆ ಮಾಡಿಕೊಂಡು ಏನೋ ಸಮಸ್ಯೆ ಎದುರಿಸಿ ಅತ್ತಿತ್ತ ಅಲೆದಾಡುತ್ತಿದ್ದರೆ ಅವರನ್ನು ನಯವಾಗಿ ಮಾತಾಡಿಸಿ ಅವರ ಸಮಸ್ಯೆ ಸಾವಧಾನವಾಗಿ ಆಲಿಸಿ ಪರಿಹಾರ ಸೂಚಿಸಿದವರು. ಅಲ್ಲದೇ ಏ! ದುಡ್ಡ ಏನರೆ ಬೇಕೆನು? ಅಂದವರೆ ತಮ್ಮ ಪ್ಯಾಂಟಿನ ಜೇಬಿಗೆ ಕೈ ಹಾಕುವರು. ಇದು ಅವರಲ್ಲಿನ ವಿದ್ಯಾರ್ಥಿಗಳ ಮೇಲಿನ ಪ್ರೀತಿ, ಕಾಳಜಿ, ಕಕ್ಕುಲಾತಿ, ಅಂತಃಕರಣ ಎದ್ದು ಕಾಣುತ್ತದೆ. ಅದಕ್ಕೆಂದೆ ವಿದ್ಯಾರ್ಥಿ ಸ್ನೇಹಿ ಪ್ರಾಧ್ಯಾಪಕ ಎಂದು ಕರೆದಿದ್ದು.
ಕನ್ನಡ ವಿವಿಯ ಹಸ್ತಪ್ರತಿಶಾಸ್ತ್ರ ವಿಭಾಗದಲ್ಲಿ ಹಿರಿಯ ಪ್ರಾಧ್ಯಾಪಕರಾಗಿ ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದವರು. ಆದರೆ
ಇತ್ತೀಚಿಗೆ ಒಂದು ಕೆಟ್ಟ ವ್ಯವಸ್ಥೆಗೆ ಸಾಕ್ಷಿಯಾಗುತ್ತಿದ್ದೇವೆ. ಆ ಮಾತು ಹೀಗಿದೆ; ಯುಜಿಸಿ, ಅಥವಾ ವಿವಿ ಪ್ರಾಧ್ಯಾಪಕರೆಂದರೆ ಅದೇನೋ ಅಗತ್ಯವಿಲ್ಲದ ಗತ್ತು, ಗಮ್ಮತ್ತು ತೋರಿಸುವರು ಹೆಚ್ಚುಂಟು. ಅದೇನೋ ಒಂದು ದೊಡ್ಡ ಸಾಧನೆಗೈದಿದ್ದೇವೆ ಎಂದುಕೊಂಡು ಕಿರಿಯರ ಮೇಲೆ ದರ್ಪ ತೋರುವ, ಅತಿಯಾದ ಗಾಂಭೀರ್ಯದಿಂದ ವರ್ತಿಸುವ ಅಥವಾ ಯುವ ಸಂಶೋಧನಾರ್ಥಿಗಳಿಗೆ ಋಣಾತ್ಮಕ ಮಾತುಗಳಿಂದ ಆತ್ಮಸ್ಥೈರ್ಯ ಕುಗ್ಗಿಸುವ ಎಷ್ಟೋ ಪ್ರಾಧ್ಯಾಪಕರನ್ನು ನೋಡಬಹುದಾಗಿದೆ. ಇದಕ್ಕೆ ಭಿನ್ನವೆಂಬಂತೆ ಕಿರಿಯರಿಗೆ ಆತ್ಮವಿಶ್ವಾಸ ತುಂಬುವ ಮೂಲಕ ಇನ್ನಷ್ಟು ಅಧ್ಯಯನ ದಲ್ಲಿ ತೊಡುಗಿಸುವಂತಹ ಪ್ರೇರಣಾದಾಯಕದ ಮಾತುಗಳನ್ನಾಡಿ ದೂರದೃಷ್ಟಿಯ ಹರಿಕಾರರಾಗಿ ನಡೆದವರಲ್ಲಿ ಡಾ.ಕೆ. ರವೀಂದ್ರನಾಥರು ಮುಂಚೂಣಿಯಲ್ಲಿ ನಿಂತವರು.

ಇವತ್ತು ವಿಶ್ರಾಂತ ಜೀವನ ಅನುಭವಿಸಬೇಕಿದ್ದ ಶರಣಜೀವಿ ಡಾ. ರವೀಂದ್ರನಾಥರು ವಿಜಯನಗರ ಜಿಲ್ಲೆಯ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಇವತ್ತು ಕನ್ನಡ ಸಾಹಿತ್ಯ ಪರಿವ್ರಾಜಕರಾಗಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮಹತ್ವದ ಸೇವೆ ಸಲ್ಲಿಸುತ್ತಿರುವುದು ಇತರರಿಗೂ ಮಾದರಿಯಾಗಿದೆ. ಇವರ ಕನ್ನಡದ ಸೇವೆಯನ್ನು ಕಂಡು ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆಗೆ (CIIL) ಕನ್ನಡ ಯೋಜನಾ ಅಧಿಕಾರಿಯ ಸ್ಥಾನ ಲಭಿಸಿರುವುದು ಅತ್ಯಂತ ಸಂತೋಷದ ವಿಷಯ. ನನ್ನೊಬ್ಬನಿಗಷ್ಟೆ ಅಲ್ಲ. ಸಾವಿರಾರು ಯುವ ಸಂಶೋಧಕರಿಗೆ, ಮತ್ತವರ ಶಿಷ್ಯವರ್ಗದಲ್ಲೂ ಖುಷಿ ತಂದಿದೆ.
ಇನ್ನು ಹೆಚ್ಚೇನು ಹೇಳುವುದಿಲ್ಲ. ಹಂಪಿಯ ವಿಜಯನಗರದಿಂದ ಮೈಸೂರಿನ ಬೆಟ್ಟದವರೆಗೂ ಅವರ ಕನ್ನಡದ ಸೇವೆಯ ರಥ ಸಾಗಿರುವುದು ಕನ್ನಡ ಭಾಷೆಗೊಂದಿಷ್ಟು ನ್ಯಾಯ ಒದಗಿಸುವ ಸತ್ ಸಂಕಲ್ಪಕ್ಕೆ ಜಯವಾಗಲೆಂದು ಮನದುಂಬಿ ಹಾರೈಸುವೆ.
ಅವರ ಸಾಹಿತ್ಯಿಕ ಸಾಧನೆಗಳ ಹೆಜ್ಜೆ ಗುರುತುಗಳನ್ನು ನಾನಿಲ್ಲಿ ಹೇಳಬಯಸುವುದಿಲ್ಲ. ಅದೆಲ್ಲವೂ ಸಹೃದಯರಿಗೆ ಈಗಾಗಲೇ ತಿಳಿದಿದೆ ಎಂದು ನಾನು ಭಾವಿಸಿದ್ದೇನೆ. ಅದೆಲ್ಲವೂ ಜಾಲತಾಣ ತಮಗೆ ಒದಗಿಸುತ್ತದೆ. ಹೀಗಾಗಿ ನಾನು ಅವರ ಬರಹಗಳ, ಕ್ಷೇತ್ರಕಾರ್ಯದ ಸಾಧನೆ, ಹಸ್ತ ಪ್ರತಿಗಳ ಸಂಗ್ರಹ, ಸಂಪಾದನೆಗಳಂತಹ ಅಧ್ಯಯನದ ವಿಷಯವಾಗಿ ನಾನು ಹೆಚ್ಚೇನು ಇಲ್ಲಿ ಬರೆಯಲಿಕ್ಕೆ ಬಯಸುವುದಿಲ್ಲ. ಕೊನೆಯದಾಗಿ
ಒಂದು ಮಾತು, ಒಬ್ಬ ನಿಜವಾದ ಸಂಶೋಧಕ, ವಿದ್ವಾಂಸ ಎಂದು ಹೆಚ್ಚು ಪ್ರೀತಿ, ಗೌರವ ಅಭಿಮಾನದಿಂದ ಕರೆಯಲು ಬಯಸುವುದಾದರೆ ಅದು ಪ್ರೊ. ಕೆ. ರವೀಂದ್ರನಾಥರನ್ನು ಮೊದಲಿಗೆ ಕರೆಯುವುದು ಮನಸ್ಸಿಗೆ ತೃಪ್ತಿ, ಸಂತೋಷ ನೀಡುವ ಕ್ಷಣ ಎಂದು ನಾನಂತು ಭಾವಿಸಿದ್ದೇನೆ. ಅವರ ಸಂಪರ್ಕಕ್ಕೆ ಬಂದ ವಿದ್ಯಾರ್ಥಿಗಳು ಈ ಅನುಭವ ಹೊಂದಿರುತ್ತಾರೆ. ಅವರ ಸಾಹಿತ್ಯಿಕ, ಸಾಂಸ್ಕೃತಿಕ, ಸಾಮಾಜಿಕ, ಸಂಪಾದನೆ ಹಾಗೂ ಸಂಶೋಧನಾತ್ಮಕ ಮಹತ್ವದ ಸೇವೆಯನ್ನು ಸರ್ಕಾರಗಳು ಇನ್ನಷ್ಟು ಹೆಚ್ಚು ಗುರುತಿಸಿ ಹೆಚ್ಚಿನ ಸಾಹಿತ್ಯಿಕ ಜವಾಬ್ದಾರಿಗಳನ್ನು ನೀಡಿದರೆ ನಿಜವಾದ ವಿದ್ವತ್ ಪರಂಪರೆಗೆ ದಕ್ಕುವ ಸುವರ್ಣ ಅವಕಾಶ ಅನ್ನದೇ ಮತ್ತೇನನ್ನುವುದು!!.


