ಎಲ್ಲಾ ಸಮಯಗಳಲ್ಲಿಯೂ ಖಡ್ಗಕ್ಕೆ ಖಡ್ಗವೇ ಉತ್ತರವಾಗಬಾರದು. ಅಂತೆಯೇ ಕೋಪಕ್ಕೆ ಶಾಂತತೆಯು ಉತ್ತರವಾದಾಗ ಎದುರಿಗಿರುವ ವ್ಯಕ್ತಿ ಅನಿವಾರ್ಯವಾಗಿಯಾದರೂ ಸಮಾಧಾನ ತಾಳುತ್ತಾನೆ.
– ವೀಣಾ ಹೇಮಂತ್ ಗೌಡ ಪಾಟೀಲ್.
ಮುಂಡರಗಿ – ಗದಗ
ಉದಯರಶ್ಮಿ ದಿನಪತ್ರಿಕೆ
ಒಂದು ಪುಟ್ಟ ಜೋಳದ ಕಾಳನ್ನು ಭೂಮಿಗೆ ಬಿತ್ತಿದರೆ ಅದು ಒಂದು ತೆನೆಯನ್ನು ಬೆಳೆದು ನಮಗೆ ಕೊಡುತ್ತದೆ. ಕೊಡುವುದರಲ್ಲಿ ಅತ್ಯಂತ ಆನಂದವಿದೆ ಎಂಬ ಅರಿವು ನಿಸರ್ಗಕ್ಕೆ ಇರುವಷ್ಟು ನಮಗೆ ಇಲ್ಲ. ಭೂಮಿಯ ಮೇಲಿನ ನೀರು ಆವಿಯಾಗಿ ಮೋಡವನ್ನು ಸೇರಿ ಮತ್ತೆ ಮಳೆಯಾಗಿ ಸುರಿದು ಭೂಮಿಯನ್ನು ಸೇರುತ್ತದೆ. ಹೀಗೆ ಪರಸ್ಪರ ಕೊಡುಕೊಳ್ಳುವಿಕೆಗಳನ್ನು ಭೂಮಿ ಮತ್ತು ಆಕಾಶಗಳಲ್ಲಿ ನಾವು ಕಾಣಬಹುದು. ನಮ್ಮ ಪರಿಸರದಲ್ಲಿ ಗಿಡಮರಗಳು ನೆರಳನ್ನು, ಹೂವು ಹಣ್ಣುಗಳನ್ನು ಕೊಡುತ್ತವೆ. ಪಕ್ಷಿಗಳು ತಾವು ತಿಂದ ಹಣ್ಣಿನ ಬೀಜವನ್ನು ತಮಗರಿವಿಲ್ಲದೆ ಅಲ್ಲಲ್ಲಿ ಎಸೆಯುವ ಮೂಲಕ ಗಿಡಗಳು ಹುಟ್ಟುವಂತೆ ಮಾಡಿ ಪರಿಸರಕ್ಕೆ ವೃಕ್ಷ ಸಂಪತ್ತನ್ನು ಕಾಣಿಕೆಯಾಗಿ ನೀಡುತ್ತವೆ.ಇಡೀ ಪರಿಸರವೇ ನಮಗೆ ಕೊಡುಗೈ ದೊರೆಯಾಗಿ ಕಾಣುತ್ತದೆ.
ಹೀಗೆ ಪ್ರಾಣಿಗಳಿಂದ, ಪಶು ಪಕ್ಷಿಗಳಿಂದ ಪ್ರಭಾವಿತನಾಗಿರುವ ಮನುಷ್ಯ ಕೂಡ ಮನೆಗೆ ಬಂದ ಅತಿಥಿಗಳಿಗೆ ತುತ್ತು ಅನ್ನ ನೀಡಿ ದಾನಿಯಾಗಿದ್ದಾನೆ. ನಮ್ಮ ಶರಣ ಪರಂಪರೆಯಂತೂ ದಾಸೋಹವನ್ನು ಒಂದು ಅದ್ಭುತ ಪ್ರಕ್ರಿಯೆ ಎಂಬಂತೆ ರೂಡಿಸಿಕೊಂಡು ಬಂದಿದ್ದರು. ವ್ಯಕ್ತಿ ತಾನು ದುಡಿದು ಸಂಪಾದಿಸಿದ ಹಣದಲ್ಲಿ ನಾಲ್ಕು ಭಾಗಗಳನ್ನು ಮಾಡಿದರೆ ಒಂದು ಭಾಗವನ್ನು ತನ್ನ ಮನೆಯ ಖರ್ಚು ವೆಚ್ಚಕ್ಕೆ ಮಕ್ಕಳ ವಿದ್ಯಾಭ್ಯಾಸಕ್ಕೆ ಮೂಲಭೂತ ಅವಶ್ಯಕತೆಯಾದ ಮನೆಯ ಇನ್ನುಳಿದ ಆಗುಹೋಗುಗಳಿಗೆ ಬಳಸಿ ಒಂದು ಪಾಲನ್ನು ಕಡ್ಡಾಯವಾಗಿ ದಾನವಾಗಿ ನೀಡಲೇಬೇಕು ಎಂಬ ಸಾಮಾಜಿಕ ತತ್ವವು ನಮ್ಮಲ್ಲಿ ಮನೆ ಮಾಡಲು ಕಾರಣ ಸಮಾಜ ಜೀವಿಗಳಾದ ನಾವು ವಸುದೈವ ಕುಟುಂಬಕಂ ಎಂದು ಭಾವಿಸಿ ವಿಶ್ವ ಕುಟುಂಬಗಳಾಗಿರುವುದು.ನೀರು ಕೇಳಿದವರಿಗೆ ಬೆಲ್ಲವನ್ನು ನೀಡಿ ನೀರು ಕೊಡುತ್ತಾನೆ, ಅಂತೆಯೇ ದಾನ ಎಂಬುದು ಮನುಷ್ಯನ ಬದುಕಿನಲ್ಲಿ ಹಾಸು ಹೊಕ್ಕಾಗಿರಲೇಬೇಕು.

ಈ ದಾನಗಳಲ್ಲಿ ಅನ್ನದಾನ, ವಿದ್ಯಾ ದಾನ, ರಕ್ತದಾನ, ಭೂದಾನ ಗೋದಾನ ಹೀಗೆ ಹತ್ತು ಹಲವು ದಾನಗಳು ಇವೆ. ಆಯಾ ಸಮಯದಲ್ಲಿ ಅವಶ್ಯವಿರುವುದು ದಾನವಾಗಿ ದೊರೆತರೆ ಅದು ಸಾರ್ಥಕ ದಾನವಾಗುತ್ತದೆ.
ಹೊಟ್ಟೆ ತುಂಬಿದ ಮೇಲೆ ಅನ್ನದಾನ ಮಾಡುವ, ವಿದ್ಯೆ ಕಲಿತ ಮೇಲೆ ವಿದ್ಯಾದಾನ ಮಾಡುತ್ತೇವೆ ಎಂದರೆ ಅದು ಅನವಶ್ಯಕ. ಅವಶ್ಯಕತೆ ಇರುವಾಗ ಅವಶ್ಯಕವಾದುದನ್ನು ದಾನವಾಗಿ ನೀಡಿದರೆ ಅದು ಶ್ರೇಷ್ಠ ಎಂದೆನಿಸಿಕೊಳ್ಳುತ್ತದೆ.
ಆರೋಗ್ಯ ಸರಿ ಇಲ್ಲದೆ ಆಸ್ಪತ್ರೆಯ ಹಾಸಿಗೆಯ ಮೇಲೆ ಇರುವ ವ್ಯಕ್ತಿಗೆ ಅವಶ್ಯಕವಾದ ಗುಂಪಿನ ರಕ್ತವನ್ನು ನೀಡುವ ರಕ್ತದಾನ ಶ್ರೇಷ್ಠ ಎಂದೆನಿಸಿಕೊಳ್ಳುತ್ತದೆ. ಓರ್ವ ವ್ಯಕ್ತಿ ತನ್ನ ದೇಹದಿಂದ ರಕ್ತವನ್ನು ದಾನವಾಗಿ ನೀಡಿ ಮತ್ತೊಬ್ಬರ ಜೀವವನ್ನು ಉಳಿಸಲು ಪ್ರಯತ್ನಿಸುವ ಮೂಲಕ ರಕ್ತದಾನ ಮಾಡಿ ದಾನಗಳಲ್ಲಿಯೇ ಸರ್ವ ಶ್ರೇಷ್ಠ ದಾನ ರಕ್ತದಾನವನ್ನು ಮಾಡಿ, ಜೀವದಾನ ಜೀವನ ದಾನ ಮಾಡುವ ಮೂಲಕ ಶ್ರೇಷ್ಠ ದಾನಿ ಎಂದೆನಿಸಿಕೊಳ್ಳುತ್ತಾನೆ.
ನಮ್ಮ ಭಾರತೀಯ ಸಂಪ್ರದಾಯ, ಸಂಸ್ಕೃತಿಗಳಲ್ಲಿ ಅವಶ್ಯವಿದ್ದಾಗ ಭೂಮಿಯನ್ನು ಶಾಸ್ತ್ರೋಕ್ತವಾಗಿ ಪೂಜಿಸಿ ದಾನವನ್ನು ನೀಡುವುದು ಭೂದಾನ ಎಂದೆನಿಸಿಕೊಳ್ಳುತ್ತದೆ. ಹಾಗೆ ದಾನವಾಗಿ ನೀಡಿದ ಭೂಮಿಯಲ್ಲಿ ಮಠಮಾನ್ಯಗಳು ಶಾಲೆ ಕಾಲೇಜುಗಳು ವಿದ್ಯಾಮಂದಿರಗಳು ನಿರ್ಮಿಸಲ್ಪಟ್ಟು ಕಾರ್ಯನಿರ್ವಹಿಸುವಾಗ ಅದು ಕೂಡ ಶ್ರೇಷ್ಠ ದಾನವಾಗಿ ಪರಿಗಣಿಸಲ್ಪಡುತ್ತದೆ.
ಪೂಜೆ ಪುನಸ್ಕಾರಗಳ ಸಂದರ್ಭದಲ್ಲಿ ಮನೆಯಲ್ಲಿರುವ ಆಕಳನ್ನು ಗೋದಾನವಾಗಿ ಕೊಡುವ ಮೂಲಕ, ಹಾಗೆ ದಾನ ಪಡೆದವರಿಗೆ ಒಂದು ಅಗೋಚರ ಉದ್ಯೋಗವನ್ನು ನೀಡುತ್ತಾರೆ. ದಾನ ಪಡೆದವರು ಆಕಳನ್ನು ಸಾಕುವ ಮೂಲಕ ಅದರ ಹಾಲನ್ನು ಕರೆದು ಮಾರುತ್ತಾರೆ ಇಲ್ಲವೇ ಮನೆಗೆ ಬಳಸುತ್ತಾರೆ. ಆಕಳಿನ ಸಗಣಿಯನ್ನು ಬೆರಣಿ ತಟ್ಟಿ ಒಣಗಿಸಿ ಮಾರುವ ಮೂಲಕ ಒಂದು ಉದ್ಯೋಗವನ್ನು ಹೊಂದುತ್ತಾರೆ ಹೀಗೆ ಗೋದಾನವೂ ಕೂಡ ಶ್ರೇಷ್ಠ ದಾನವೆಂದು ಕರೆಯಲ್ಪಡುತ್ತದೆ.

ಆದರೆ ಇವೆಲ್ಲಕ್ಕಿಂತಲೂ ಮಿಗಿಲಾದ ಎಲ್ಲಾ ಸಮಯದಲ್ಲಿಯೂ ಅತ್ಯವಶ್ಯಕವಾದ ಒಂದು ದಾನ ಎಂದರೆ ಅದು ಕ್ಷಮಾದಾನ. ಯಾವುದೋ ಒಂದು ಹೋಟೆಲಿನಲ್ಲಿ ಕುಳಿತಿರುವಾಗ ಅಲ್ಲಿನ ವೇಟರ್ ನೀರನ್ನು ಇಡುವಾಗ ಕೈ ತಾಕಿ ತುಸು ನೀರನ್ನು ಚೆಲ್ಲಬಹುದು. ಆಗ ನಾವು ಅದೆಷ್ಟು ಜೋರಾಗಿ ಕೂಗಾಡುತ್ತೇವೆ ಎಂದರೆ ಆತ ಬೇಕೆಂದೇ ಈ ರೀತಿ ಮಾಡಿದ್ದಾನೆ ಎಂಬಂತೆ ಹೀನಮಾನವಾಗಿ ಗದರುತ್ತೇವೆ. ಮತ್ತೆ ಕೆಲವೊಮ್ಮೆ ಗಾಡಿಯಲ್ಲಿ ಹೋಗುವಾಗ ಬೈಕಿನಲ್ಲಿ ಹೋಗುವ ವ್ಯಕ್ತಿ ರಾಂಗ್ ಸೈಡ್ ನಲ್ಲಿ ಬಂದಾಗ ಕಾರಿನ ಗಾಜನ್ನು ಏರಿಸಿಕೊಂಡು ರಕ್ತ ಸುಟ್ಟವರಂತೆ ನಾವು ಒಂದೇ ಸಮ ಆತನನ್ನು ಬೈಯುತ್ತೇವೆ. ಆತನ ಮತ್ತು ನಮ್ಮ ದಾರಿಗಳು ದೂರವಾದರೂ ಆತನಿಗೆ ನಮ್ಮ ಸಿಟ್ಟು ಗೊತ್ತಾಗುವುದಿಲ್ಲ ಎಂದು ಗೊತ್ತಿದ್ದರೂ ಕೂಡ
ನಮ್ಮ ಸಿಟ್ಟು ಇಳಿಯುವುದಿಲ್ಲ ಮತ್ತು ಆತನ ಮೇಲೆ ನಾವು ಬೈಗುಳಗಳ ಸುರಿಮಳೆ ಸುರಿಸುತ್ತಲೇ ಇರುತ್ತೇವೆ.
ನಮ್ಮ ಹಿರಿಯರು ಮಾಡಿದ ತಪ್ಪುಗಳನ್ನು ಎತ್ತಿ ಆಡುವ, ನಮ್ಮ ಮಕ್ಕಳು ಮಾಡುವ ಪ್ರತಿ ಸಣ್ಣಪುಟ್ಟ ತಪ್ಪುಗಳಿಗೆ ಕೂಗಾಡುವ ನಾವು, ಈ ಎಲ್ಲ ವಿಷಯಗಳನ್ನು ಎತ್ತಿ ಆಡುವ ಬದಲು ಅವರ ತಪ್ಪುಗಳನ್ನು ಕ್ಷಮಿಸಿದರೆ ನಮ್ಮ ಮನೆ, ಮನ ಮತ್ತು ಮನೆತನಗಳು ಪ್ರಶಾಂತವಾಗಿ ಇರುತ್ತವೆ. ಆದ್ದರಿಂದ ದಾನಗಳಲ್ಲಿಯೇ ಅತ್ಯಂತ ಶ್ರೇಷ್ಠವಾದ ದಾನ ಕ್ಷಮಾದಾನ.
ನಮ್ಮ ಎದುರಿಗಿರುವ ವ್ಯಕ್ತಿಯನ್ನು ನಾವು ಕ್ಷಮಿಸಿದಾಗ ಆತನಿಗೆ ಲಾಭವಾಗುತ್ತದೆಯೋ ಇಲ್ಲವೋ ಗೊತ್ತಿಲ್ಲ ಆದರೆ ಆತನಿಗೆ ಕ್ಷಮಿಸುವ ಮೂಲಕ ನಾವು ನಮಗೆ ಅತಿ ದೊಡ್ಡ ಉಪಕಾರವನ್ನು ಮಾಡಿಕೊಳ್ಳುತ್ತೇವೆ. ವ್ಯಕ್ತಿಯನ್ನು ಕ್ಷಮಿಸುವ ಮೂಲಕ ನಮ್ಮ ಏರುತ್ತಿರುವ ಸಿಟ್ಟನ್ನು ತಹಬಂದಿಗೆ ತರುತ್ತೇವೆ ಇದರಿಂದ ನಮ್ಮ ಏರು ರಕ್ತದ ಒತ್ತಡವು ಇಳಿಮುಖವಾಗಿ ಒತ್ತಡದ ಸೂಚ್ಯಂಕವು ಕೆಳಮಟ್ಟಕ್ಕೆ ಇಳಿಯುತ್ತದೆ. ನಮ್ಮ ಥೈರಾಯಿಡ್ ಮಟ್ಟವು ಕೂಡ ಇಳಿಯುತ್ತದೆ ನಮ್ಮ ಮನಸ್ಸು ಪ್ರಶಾಂತತೆಯನ್ನು ಹೊಂದುತ್ತದೆ. ಇವೆಲ್ಲವುಗಳ ಪರಿಣಾಮವಾಗಿ ನಮ್ಮ ಮಧುಮೇಹವು ಕೂಡ ಸಾಮಾನ್ಯ ಸ್ಥಿತಿಗೆ ಇಳಿಯುತ್ತದೆ. ಇದರ ತಾತ್ಪರ್ಯವಿಷ್ಟೇ ಕ್ಷಮಾದಾನವನ್ನು ನೀಡುವ ಮೂಲಕ ನಮ್ಮ ಮನೋದೈಹಿಕ ಆರೋಗ್ಯವು ಸುಸ್ಥಿತಿಯಲ್ಲಿ ಇರುತ್ತದೆ. ಮಾನಸಿಕ ಸಂತುಲನ ನಮ್ಮದಾಗುತ್ತದೆ. ಪರಿಸ್ಥಿತಿಯನ್ನು ನಾವು ಸೂಕ್ತವಾಗಿ ಅವಲೋಕಿಸುವ ಮೂಲಕ ನಮ್ಮ ಮನಸ್ಸಿನ ವಿಶಾಲತೆಯನ್ನು ಹೆಚ್ಚಿಸಿಕೊಳ್ಳುತ್ತೇವೆ.
ಇಬ್ಬರು ವ್ಯಕ್ತಿಗಳ ನಡುವಿನ ವಾಗ್ವಾದದಲ್ಲಿ ಒಬ್ಬರು ಕೋಪದಿಂದ ವರ್ತಿಸಿದಾಗ ಅವರ ಮುಂದೆ ಇರುವವರು ಶಾಂತವಾದ ಪ್ರತಿಕ್ರಿಯೆಯ ಮೂಲಕ ಎದುರಿಗಿರುವ ವ್ಯಕ್ತಿಯ ಕೋಪವನ್ನು ತಗ್ಗಿಸಬಹುದು. ಎಲ್ಲಾ ಸಮಯಗಳಲ್ಲಿಯೂ ಖಡ್ಗಕ್ಕೆ ಖಡ್ಗವೇ ಉತ್ತರವಾಗಬಾರದು ಅಂತೆಯೇ ಕೋಪಕ್ಕೆ ಶಾಂತತೆಯು ಉತ್ತರವಾದಾಗ ಎದುರಿಗಿರುವ ವ್ಯಕ್ತಿ ಅನಿವಾರ್ಯವಾಗಿಯಾದರೂ ಸಮಾಧಾನ ತಾಳುತ್ತಾನೆ. ಪ್ರಸ್ತುತ ದಿನಮಾನಗಳಲ್ಲಿ ಮನೆ ಮನೆಗಳಲ್ಲಿ ಶಾಂತತೆಯ ಬೀಡು ಬಿಡಲು, ಬಂಧುತ್ವವನ್ನು ಉಳಿಸಿಕೊಳ್ಳಲು ಅತ್ಯವಶ್ಯಕವಾಗಿ ಬೇಕಾಗಿರುವುದು ಕ್ಷಮಾದಾನ. ಕ್ಷಮಾದಾನವನ್ನು ಪ್ರಯತ್ನಪೂರ್ವಕವಾಗಿ ನಾವು ಸಾಧಿಸಿದಾಗ ಅದು ನಮ್ಮಮನೋ ದೈಹಿಕ ಅಭಿವೃದ್ಧಿಗೆ ಸಾಮಾಜಿಕ ಪ್ರಗತಿಗೆ ಕಾರಣವಾಗುತ್ತದೆ.


