ಸಾರ್ವಜನಿಕ ಸೇವೆ, ಕಡತಗಳ ವಿಲೇವಾರಿ ಹಾಗೂ ದಾಖಲೆಗಳ ನಿರ್ವಹಣೆ ಪರಿಶೀಲನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ಬುಧವಾರ ವಿಜಯಪುರ ತಹಶೀಲ್ದಾರ್ ಕಚೇರಿಗೆ ದಿಢೀರ್ ಭೇಟಿ ನೀಡಿ, ಆಡಳಿತಾತ್ಮಕ ಕಾರ್ಯವೈಖರಿ, ಸಾರ್ವಜನಿಕರಿಗೆ ಒದಗಿಸಲಾಗುತ್ತಿರುವ ಸೇವೆಗಳು, ಕಡತಗಳ ವಿಲೇವಾರಿ ಹಾಗೂ ದಾಖಲೆಗಳ ನಿರ್ವಹಣಾ ವ್ಯವಸ್ಥೆಯನ್ನು ಪರಿಶೀಲಿಸಿದರು.
ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಕಚೇರಿಗೆ ಬಂದಾಗ ಅನಗತ್ಯ ವಿಳಂಬವಾಗದಂತೆ ಕ್ರಮ ಕೈಗೊಳ್ಳಬೇಕು. ಅರ್ಜಿಗಳನ್ನು ನಿಯಮಾನುಸಾರ ನಿಗದಿತ ಕಾಲಮಿತಿಯೊಳಗೆ ವಿಲೇವಾರಿ ಮಾಡಿ, ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು. ಅಧಿಕಾರಿಗಳ ಹಂತದಲ್ಲಿಯೇ ಇತ್ಯರ್ಥಪಡಿಸಬಹುದಾದ ಕೆಲಸಗಳನ್ನು ವಿಳಂಬ ಮಾಡದೆ ಪೂರ್ಣಗೊಳಿಸಬೇಕು. ತಹಶೀಲ್ದಾರ್ ಕಚೇರಿಯ ಆಧುನಿಕ ಅಭಿಲೇಖಾಲಯಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಕಡತಗಳ ಸಂಗ್ರಹಣೆ, ದಾಖಲೆಗಳ ಡಿಜಿಟಲೀಕರಣ ಹಾಗೂ ನಿರ್ವಹಣಾ ವ್ಯವಸ್ಥೆಯನ್ನು ಪರಿಶೀಲಿಸಿದರು.
ಭೂ ಸುರಕ್ಷೆ ಯೋಜನೆಯಡಿ ಹಳೆಯ ದಾಖಲೆಗಳನ್ನು ವ್ಯವಸ್ಥಿತವಾಗಿ ಸಂರಕ್ಷಿಸಲಾಗುತ್ತಿದ್ದು, ಅವು ಅಗತ್ಯವಿದ್ದಾಗ ಸುಲಭವಾಗಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು.
ಯಾವುದೇ ಕಡತ ಅಥವಾ ವಹಿ ಬಾಕಿ ಉಳಿಯದಂತೆ ಸೂಕ್ತ ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಬಳಿಕ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದ ಜಿಲ್ಲಾಧಿಕಾರಿಗಳು, ಕಚೇರಿಯಲ್ಲಿ ದೊರೆಯುತ್ತಿರುವ ಸೇವೆಗಳು ಹಾಗೂ ಸಾರ್ವಜನಿಕರ ಸಮಸ್ಯೆಗಳ ಕುರಿತು ಮಾಹಿತಿ ಪಡೆದುಕೊಂಡರು.
ನಂತರ ಜಿಲ್ಲಾಡಳಿತ ಕಟ್ಟಡ ಭವನದ ನಿರ್ಮಾಣ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿ, ಅಗತ್ಯ ಸಲಹೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ವಿಜಯಪುರ ಉಪವಿಭಾಗಾಧಿಕಾರಿ ಜುಫಿಶಾನ್ ಹಕ್, ಗ್ರೇಡ್-೨ ತಹಶೀಲ್ದಾರ್ ಗುರುರಾಜ ನಾಯಕ, ಉಪತಹಶೀಲ್ದಾರ್ ಮಜೀದ್ ಇನಾಮದಾರ್ ಸೇರಿದಂತೆ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

