ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪಟ್ಟಣ ಸೇರಿದಂತೆ ತಾಲ್ಲೂಕು ವ್ಯಾಪ್ತಿಯಲ್ಲಿ ಅಕ್ರಮ ಸಾರಾಯಿ ಮಾರಾಟ ತಡೆಗಟ್ಟುವಂತೆ ಆಗ್ರಹಿಸಿ ಭೀಮರಾಜಸೇನೆ ಕಾರ್ಯಕರ್ತರು ಶಿರಸ್ತೇದಾರ ಸುರೇಶ ಮ್ಯಾಗೇರಿ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯಕ್ಕೆ ಬುಧವಾರ ಆಗಮಿಸಿದ ಭೀಮರಾಜಸೇನೆ ಕಾರ್ಯಕರ್ತರು ಅಕ್ರಮ ಸಾರಾಯಿ ಮಾರಾಟ ಖಂಡಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಶಿವು ನಾಟೀಕಾರ ಮಾತನಾಡಿ, ತಾಲ್ಲೂಕು ವ್ಯಾಪ್ತಿಯಲ್ಲಿ ಕಿರಾಣಿ, ಪಾನ ಶಾಪ್ ಗಳಲ್ಲಿ ಎಗ್ಗಿಲ್ಲದೆ ಸರಾಯಿ ಸೇರಿದಂತೆ ಅಮಲು ಪದಾರ್ಥಗಳ ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಸಿಂದಗಿ ಅಬಕಾರಿ ವೃತ್ತದ ಸಿಪಿಐ ಶಿವಾನಂದ ಹೂಗಾರ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಸೂಕ್ತ ದಾಖಲೆಗಳನ್ನು ಪರಿಶೀಲಿಸಿ ಇವರ ವಿರುದ್ಧ ತಕ್ಷಣ ಅಮಾನತು ಮಾಡುವ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ದಿ: ೧೭ ರಂದು ವಿಜಯಪುರ ಜಿಲ್ಲೆಗೆ ಮುಖ್ಯಮಂತ್ರಿಗಳು ಆಗಮಿಸಲಿದ್ದು ಅವರ ಗಮನಕ್ಕೆ ತರಲು ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿ ಮನವಿ ಸಲ್ಲಿಸಿದರು.
ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಬಿಜಾಪೂರ, ತಾಲ್ಲೂಕು ಅಧ್ಯಕ್ಷ ಕಾಶೀರಾಯ ಬಿರಾದಾರ, ಬಹುಜನ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ರಾಘವೇಂದ್ರ ಗುಡಿಮನಿ, ಪ್ರಧಾನ ಕಾರ್ಯದರ್ಶಿ ಮಾಂತೇಶ ಗುಡಿಮನಿ, ಸಾಹೇಬಗೌಡ ಮಸಬಿನಾಳ, ಅಂಬರೀಷ ಬಿರಾದಾರ, ಮಾಂತೇಶ ವಂದಾಲ, ರಾಘವೇಂದ್ರ ಚಲವಾದಿ, ಬಸವರಾಜ ಹಳಿಮನಿ, ಜಗದೀಶ ಚವ್ಹಾಣ, ಪಿಂಟೂ ಭಾಸುತ್ಕರ್, ಮಲ್ಲು ಮಿಂಚನಾಳ, ಧೀರಜ್ ಮಾನೆ, ವಿಶಾಲ ರಾವ್, ಮುಕೇಂದ್ರ ಹಂದಿಗನೂರ, ನಾಗೇಶ ಹೊಸಮನಿ ಅಕ್ಷಯ ರೂಗಿ ಇದ್ದರು.

