ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯಲ್ಲಿ ಸಿವಿಲ್ ನ್ಯಾಯಾಧೀಶ ರಾಮಮೂರ್ತಿ ಎನ್ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಇಂದಿನ ವೇಗದ ಹಾಗೂ ಯಾಂತ್ರಿಕ ಜೀವನಶೈಲಿಯಲ್ಲಿ ಪ್ರತಿಯೊಬ್ಬರೂ ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯಕ್ಕೂ ಸಮಾನ ಆದ್ಯತೆ ನೀಡಬೇಕಾದ ಅಗತ್ಯವಿದೆ ಎಂದು ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಹಾಗೂ ಸಿವಿಲ್ ನ್ಯಾಯಾಧೀಶರಾದ ರಾಮಮೂರ್ತಿ ಎನ್ ಹೇಳಿದರು.
ಪಟ್ಟಣದ ತಂಗಡಗಿ ರಸ್ತೆಯಲ್ಲಿರುವ ಸ್ವಾಮಿ ವಿವೇಕಾನಂದ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ, ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸ್ವಾಮಿ ವಿವೇಕಾನಂದ ಪ್ಯಾರಾ ಮೆಡಿಕಲ್ ಕಾಲೇಜು ಮತ್ತು ಇತರ ಎಲ್ಲ ಸರ್ಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಒತ್ತಡ, ಖಿನ್ನತೆ ಮತ್ತು ಆತಂಕಗಳು ಮನುಷ್ಯನ ಸಹಜ ನೆಮ್ಮದಿಯನ್ನು ಕಸಿಯುತ್ತಿವೆ. ಮಾನಸಿಕ ಸಮಸ್ಯೆ ಎನ್ನುವುದು ಕೀಳರಿಮೆ ಅಥವಾ ಕಳಂಕವಲ್ಲ, ಸಕಾಲಿಕ ಸಮಾಲೋಚನೆ, ವೈದ್ಯಕೀಯ ಚಿಕಿತ್ಸೆ ಮತ್ತು ಕುಟುಂಬದ ಪ್ರೀತಿಪೂರ್ವಕ ಬೆಂಬಲದಿಂದ ಇದನ್ನು ಸುಲಭವಾಗಿ ಗುಣಪಡಿಸಬಹುದು. ಕೆಲಸದ ನಡುವೆ ವಿಶ್ರಾಂತಿ, ಸಕಾರಾತ್ಮಕ ಆಲೋಚನೆ ಹಾಗೂ ಯೋಗ-ಧ್ಯಾನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಾನಸಿಕ ಅಸ್ವಸ್ಥರ ಮಾನವ ಹಕ್ಕುಗಳ ರಕ್ಷಣೆ ಮತ್ತು ಅವರ ಪುನರ್ವಸತಿಗೆ ಕಾನೂನು ಸೇವಾ ಪ್ರಾಧಿಕಾರ ಸದಾ ಬದ್ಧವಾಗಿದೆ ಎಂದರು.
ವಿಶೇಷ ಉಪನ್ಯಾಸ ನೀಡಿದ ಮನೋರೋಗ ತಜ್ಞ ಮಂಜುನಾಥ ಮಸಳಿ, ಸಧ್ಯದ ದಿನಮಾನಗಳಲ್ಲಿ ಪ್ರತಿಯೊಬ್ಬರ ಜೀವನ ಶೈಲಿಯು ಸದಾ ಮಾನಸಿಕ ಒತ್ತಡದಿಂದ ಕೂಡಿರಲಿದ್ದು, ವೃತ್ತಿಪರರು ತಮ್ಮ ಮಾನಸಿಕ ಸ್ಥಿಮಿತತೆಯನ್ನು ಕಾಪಾಡಿಕೊಳ್ಳಲು ದಿನಚರಿಯಲ್ಲಿ ಕ್ರೀಡೆ ಹಾಗೂ ಹವ್ಯಾಸಗಳಿಗೆ ಸಮಯ ಮೀಸಲಿಡಬೇಕು. ಜ್ವರ, ಮಧುಮೇಹ ಅಥವಾ ರಕ್ತದೊತ್ತಡದಂತಹ ದೈಹಿಕ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುವಷ್ಟೇ ಸಹಜವಾಗಿ ಮಾನಸಿಕ ಸಮಸ್ಯೆಗಳಿಗೂ ಚಿಕಿತ್ಸೆ ಪಡೆಯಬೇಕು. ಸತತ ನಿದ್ರಾಹೀನತೆ, ಅತಿಯಾದ ಆತಂಕ, ಏಕಾಂಗಿತನ, ಮತ್ತು ಕೆಲಸದಲ್ಲಿ ಆಸಕ್ತಿ ಕಳೆದುಕೊಳ್ಳುವುದು ಖಿನ್ನತೆಯ ಪ್ರಾಥಮಿಕ ಲಕ್ಷಣಗಳು. ಇವುಗಳನ್ನು ಕಡೆಗಣಿಸದೆ ತಕ್ಷಣವೇ ತಜ್ಞರ ಬಳಿ ಕೌನ್ಸೆಲಿಂಗ್ ಅಥವಾ ಚಿಕಿತ್ಸೆ ಪಡೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಎಂ.ಎಂ.ಬಾವೂರ ಅಧ್ಯಕ್ಷೀಯ ನುಡಿಗಳನ್ನಾಡಿದರು. ತಹಸೀಲ್ದಾರ ಕಚೇರಿಯ ಶಿರಸ್ತೇದಾರ ಎಂ.ಎ.ಬಾಗೇವಾಡಿ, ಸಿಡಿಪಿಓ ಶಿವಮೂರ್ತಿ ಕುಂಬಾರ, ಶಿವಾಚಾರ್ಯ ಕಾಲೇಜಿನ ಪ್ರಾಚಾರ್ಯ ಬಿ.ಎಚ್.ದೊಡಮನಿ, ಆರೋಗ್ಯ ಇಲಾಖೆಯ ಅನಸೂಯಾ ತೇರದಾಳ, ಡಾ. ಪ್ರವೀಣ ಸುಣಕಲ್ ಸೇರಿದಂತೆ ಮತ್ತೀತರರು ಭಾಗಿಯಾಗಿದ್ದರು.
ಶಿಕ್ಷಕ ಭೀಮು ಮಾದರ ಕಾರ್ಯಕ್ರಮವನ್ನು ನಿರ್ವಹಿಸಿದರು.

